ವಾಯುಮಾಲಿನ್ಯದಿಂದ ಜೀವಕ್ಕೆ ಸಂಚಕಾರ

29 vikram 2
Published on

ವಿಜಯವಾಣಿ ಸುದ್ದಿಜಾಲ ಧಾರವಾಡ
ವಾಯು ಮಾಲಿನ್ಯದಿಂದ ದಿನದಿಂದ ದಿನಕ್ಕೆ ಪರಿಸರ ಕಲುಷಿತಗೊಳ್ಳುತ್ತಿದೆ. ಪರಿಸರ ಹತೋಟಿಯಲ್ಲಿಟ್ಟುಳ್ಳುವ ಕಾರ್ಯ ನಡೆಯಬೇಕಿದೆ. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಉಸಿರಾಡಲು ಸ್ವಚ್ಚ ಗಾಳಿ ಸಿಗಂದತಹ ಪರಿಸ್ಥಿತಿ ನಿರ್ಮಾಣವಾಗಲಿದೆ ಎಂದು ಜೆಎಸ್‌ಎಸ್ ಕಾರ್ಯದರ್ಶಿ ಡಾ. ಅಜಿತ ಪ್ರಸಾದ ಅಭಿಪ್ರಾಯಪಟ್ಟರು.
ನಗರದ ವಿದ್ಯಾಗಿರಿಯ ಜೆಎಸ್‌ಎಸ್‌ನ ಶ್ರೀ ಮಂಜುನಾಥೇಶ್ವರ ಸ್ನಾತಕ ಮತ್ತು ಸ್ನಾತಕೋತ್ತರ ಅಧ್ಯಯನ ಸಂಸ್ಥೆಯಲ್ಲಿ ಉಪಸಾರಿಗೆ ಆಯುಕ್ತರು ಹಾಗೂ ಹಿರಿಯ ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಚೇರಿ ವತಿಯಿಂದ ಮಂಗಳವಾರ ಏರ್ಪಡಿಸಿದ್ದ ವಾಯುಮಾಲಿನ್ಯ ಜಾಗೃತಿ ಮಾಸಾಚರಣೆ ಸಮಾರೋಪ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ವಾಹನಗಳಿಂದ ಹೊರಸೂಸುವ ಕಾರ್ಬನ್, ಪಳೆಯುಳಿಕೆಗಳ ಸುಡುವಿಕೆ, ಪ್ಲಾಸ್ಟಿಕ್ ವಸ್ತುಗಳು, ರಾಸಾಯನಿಕಗಳ ಸುಡುವಿಕೆಯಿಂದ ಇಂಗಾಲದ ಡೈ ಆಕ್ಸೈಡ್, ಗಂಧಕದ ಡೈ ಆಕ್ಸೈಡ್, ಮೀಥೆನ್‌ನಂತಹ ವಿಷಪೂರಿತ ಅನಿಲಗಳು ವಾತಾವರಣದಲ್ಲಿ ಸೇರಿ ಆಮ್ಲಜನಕ ಪ್ರಮಾಣ ಕ್ಷೀಣಿಸಿ ಉಸಿರಾಟದ ತೊಂದರೆಗಳಿಗೆ ಕಾರಣವಾಗಿ ಸಾವು ನೋವುಗಳು ಸಂಭವಿಸುತ್ತಿವೆ. ಗಾಳಿಯ ಸೂಚ್ಯಂಕದ ಮೂಲಕ ಗಾಳಿ ಎಷ್ಟು ಕಲುಷಿತವಾಗಿದೆ ಎಂಬುದನ್ನು ನಾವು ತಿಳಿಯಬಹುದು. ಗಾಳಿ ಸೂಚ್ಯಂಕದ ಪ್ರಕಾರ ದೆಹಲಿ, ಚೆನ್ನೈ, ಲಕ್ನೋನಂತಹ ಅನೇಕ ದೊಡ್ಡ ನಗರಗಳಲ್ಲಿ ವಾಯು ಮಾಲಿನ್ಯದಿಂದ ಜೀವನ ನಡೆಸುವುದು ಚಿಂತಾಜನಕವಾಗಿದೆ ಎಂದರು.
ಉಪಸಾರಿಗೆ ಹಾಗೂ ಹಿರಿಯ ಪ್ರಾದೇಶಿಕ ಸಾರಿಗೆ ಅಧಿಕಾರಿ ಭೀಮನಗೌಡ ಪಾಟೀಲ ಮಾತನಾಡಿ, ನಿತ್ಯ ಓಡಾಡುವ ವಾಹನಗಳನ್ನು ಸರಿಯಾಗಿ ನಿರ್ವಹಣೆ ಮಾಡಿಸಬೇಕು. ಈಗಾಗಲೇ 15 ವರ್ಷ ಹಳೆಯದಾದ ವಾಹನಗಳನ್ನು ರದ್ದುಗೊಳಿಸಲಾಗುತ್ತಿದ್ದು, ವಿದ್ಯುತ್ ಚಾಲಿತ ವಾಹನಗಗಳನ್ನು ಜೈವಿಕ ಇಂಧನದಿಂದ ನಡೆಯುವ ವಾಹನಗಳನ್ನು ಅಭಿವೃದ್ಧಿ ಪಡಿಸಲಾಗುತ್ತಿದೆ. ಇವು ಪರಿಸರ ಸ್ನೇಹಿಯಾಗಿವೆ. ಸುತ್ತಲಿನ ಜನರಿಗೂ ವಾಯುಮಾಲಿನ್ಯದ ಜಾಗೃತಿ ಮೂಡಿಸಬೇಕು ಎಂದರು.
ಹಿರಿಯ ಪ್ರಾದೇಶಿಕ ಸಾರಿಗೆ ಅಧಿಕಾರಿ ಕೆ. ದಾಮೋದರ ಮಾತನಾಡಿದರು. ವಾಯುಮಾಲಿನ್ಯ ಜಾಗೃತಿ ಮಾಸಾಚರಣೆ ನಿಮಿತ್ತ ಆಯೋಜಿಸಲಾಗಿದ್ದ ವಿವಿಧ ಸ್ಪರ್ಧೆಗಳ ವಿಜೇತರಿಗೆ ಬಹುಮಾನಗಳನ್ನು ವಿತರಿಸಿ, ವಾಯುಮಾಲಿನ್ಯ ತಡೆಗಟ್ಟುವ ಪ್ರತಿಜ್ಞಾವಿಧಿ ಭೋದಿಸಲಾಯಿತು.
ಡಾ. ಸೂರಜ್ ಜೈನ್, ಮಹಾವೀರ ಉಪಾಧ್ಯೆ, ಪಿ.ಆರ್. ದೇಸಾಯಿ, ಎಸ್.ಡಿ ಬೆಲ್ಲದ, ಆರ್.ಎಸ್ ಮಾಳಗಿ, ಎಸ್.ವಿ. ಹೊಂಡೆದ, ಇತರರು ಇದ್ದರು. ಜಿ.ವಿ ದಿನ್ನಿಮನಿ ಸ್ವಾಗತಿಸಿದರು. ಎಂ.ಎಫ್ ಬನಹಟ್ಟಿ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net