

ಚಾಮರಾಜನಗರ: ಸಾಲು ಸಾಲು ರಜೆಯ ಹಿನ್ನೆಲೆಯಲ್ಲಿ ಗುಂಡ್ಲುಪೇಟೆ ತಾಲೂಕಿನ ಹಿಮವದ್ ಗೋಪಾಲಸ್ವಾಮಿ ಬೆಟ್ಟಕ್ಕೆ ಹೆಚ್ಚಿನ ಭಕ್ತರು, ಪ್ರವಾಸಿಗರು ಆಗಮಿಸುವ ನಿರೀಕ್ಷೆ ಇದ್ದರೂ ಸಾರಿಗೆ ಸಂಸ್ಥೆಯು ಸಮರ್ಪಕ ಬಸ್ ವ್ಯವಸ್ಥೆ ಮಾಡದ ಪರಿಣಾಮ ಪರದಾಡಿದರು.
ಪ್ರತಿ ಬಾರಿಯೂ ಶನಿವಾರ ಮತ್ತು ಭಾನುವಾರ ಹಾಗೂ ಸರ್ಕಾರಿ ರಜೆ ಸಂದರ್ಭದಲ್ಲಿ ಬಂಡೀಪುರ ಹಾಗೂ ಊಟಿಗೆ ಹೋಗಿ ಬರುವ ಪ್ರವಾಸಿಗರು ಹಿಮವದ್ ಗೋಪಾಲಸ್ವಾಮಿ ಬೆಟ್ಟಕ್ಕೂ ಭೇಟಿ ನೀಡುತ್ತಿದ್ದಾರೆ. ಬಂಡೀಪುರ ಹುಲಿ ಯೋಜನೆಯ ಪರಿಸರ ಸೂಕ್ಷ್ಮ ಪ್ರದೇಶಕ್ಕೆ ಸೇರಿದ ಬೆಟ್ಟಕ್ಕೆ ಹೋಗುವ ಪ್ರವಾಸಿಗರು ತಮ್ಮ ವಾಹನಗಳನ್ನು ತಪ್ಪಲಿನಲ್ಲಿ ನಿಲ್ಲಿಸಿ ಸಾರಿಗೆ ಬಸ್‌ಗಳಲ್ಲಿಯೇ ಹೋಗಬೇಕು. ಇದಕ್ಕಾಗಿ ಸಾರಿಗೆ ಸಂಸ್ಥೆಯು ಸಾಮಾನ್ಯ ದಿನಗಳಲ್ಲಿ 4-5 ಬಸ್‌ಗಳು, ರಜಾ ದಿನಗಳಲ್ಲಿ 8-10 ಬಸ್‌ಗಳನ್ನು ನಿಯೋಜಿಸುತ್ತಿದೆ.
ಸತತ ಮೂರು ದಿನಗಳ ರಜೆಯ ಹಿನ್ನೆಲೆಯಲ್ಲಿ ಶನಿವಾರ ಬೆಟ್ಟಕ್ಕೆ ಹೋಗಲು ಸಾವಿರಾರು ಸಂಖ್ಯೆಯ ಪ್ರವಾಸಿಗರು ಆಗಮಿಸಿದರೂ ಸಾರಿಗೆ ಸಂಸ್ಥೆಯು ಕೇವಲ 3 ಬಸ್‌ಗಳನ್ನು ನಿಯೋಜಿಸಿದ್ದರಿಂದ ಪ್ರಯಾಣಿಕರು ಗಂಟೆಗಟ್ಟಲೇ ಕಾಯುವಂತಾಗಿತ್ತು. ಶುಕ್ರವಾರ ಬಸವ ಜಯಂತಿ ಮರುದಿನ ಎರಡನೇ ಶನಿವಾರ ಹಾಗೂ ಭಾನುವಾರಗಳ ಸಾಲು ಸಾಲು ರಜೆಯ ಹಿನ್ನೆಲೆಯಲ್ಲಿ ರಾಮನಗರ, ಮಂಡ್ಯ, ಬೆಂಗಳೂರು ಭಾಗದಿಂದ ಪ್ರವಾಸ ಕೈಗೊಳ್ಳುತ್ತಿದ್ದಾರೆ. ಇದರಿಂದ ಬೆಟ್ಟಕ್ಕೆ ಹೋಗುವವರ ಸಂಖ್ಯೆ ಹೆಚ್ಚಾಗಿತ್ತು.
ಸತತವಾಗಿ ಪ್ರವಾಸಿಗರು ಹೆಚ್ಚಾಗುತ್ತಿದ್ದರೂ ಸಾರಿಗೆ ಸಂಸ್ಥೆಯು ಹೆಚ್ಚುವರಿ ಬಸ್‌ಗಳನ್ನು ಕಳಿಸಲು ವಿಳಂಬ ಮಾಡಿದ್ದರಿಂದ ಬಿರುಬಿಸಿಲಿನಲ್ಲಿ ಕಾದುನಿಂತಿದ್ದ ಮಹಿಳೆಯರು, ಮಕ್ಕಳು, ವೃದ್ಧರು ಅಧಿಕಾರಿಗಳಿಗೆ ಹಿಡಿಶಾಪ ಹಾಕುತ್ತಿದ್ದರು. ಸಾರಿಗೆ ಸಂಸ್ಥೆಯಿಂದ ಬಸ್‌ಗಳನ್ನು ಬಿಡಲಾಗದಿದ್ದರೆ ನಮ್ಮ ವಾಹನಗಳಲ್ಲಿಯೇ ಹೊಗಲು ಅವಕಾಶ ಮಾಡಿಕೊಡಿ ಎಂದು ಆಗ್ರಹಿಸಿ ಸಾರಿಗೆ ಮತ್ತು ಅರಣ್ಯ ಇಲಾಖೆಯ ಸಿಬ್ಬಂದಿ ಜತೆ ವಾಗ್ವಾದಕ್ಕಿಳಿದರು.
ಸುಮಾರು ಒಂದು ಗಂಟೆಯ ನಂತರ ಸಾರಿಗೆ ಸಂಸ್ಥೆಯು ಹೆಚ್ಚುವರಿ ಬಸ್ಸಿಗಳನ್ನು ಬಿಡುವ ಮೂಲಕ ಪ್ರವಾಸಿಗರ ಆಕ್ರೋಶ ಶಮನ ಮಾಡಿತು.
ಕೋಟ್….
ಮಾಮೂಲಿನಂತೆ ಹಿಮವದ್ ಗೋಪಾಲಸ್ವಾಮಿ ಬೆಟ್ಟಕ್ಕೆ ಬೆಳಗ್ಗೆ 3 ಬಸ್ಸುಗಳನ್ನು ಕಳಿಸಲಾಗಿತ್ತು. 10 ಗಂಟೆ ನಂತರ ಪ್ರಯಾಣಿಕರ ಸಂಖ್ಯೆ ಹೆಚ್ಚಾಗಿದೆ. ಇದರಿಂದ ಮತ್ತೆ 3 ಬಸ್ಸುಗಳನ್ನು ನಿಯೋಜಿಸಲಾಗಿದೆ.
ಮಧುಪ್ರಭಾರ ಡಿಪೋ ಮ್ಯಾನೇಜರ್, ಗುಂಡ್ಲುಪೇಟೆ