ಬಸ್‌ಗಳಿಲ್ಲದೆ ಪ್ರಯಾಣಿಕರ ಪರದಾಟ

12ark1
Published on

ಅರಕಲಗೂಡು: ಪಟ್ಟಣದ ಕೆಎಸ್‌ಆರ್‌ಟಿಸಿ ನಿಲ್ದಾಣದಲ್ಲಿ ಮಂಗಳವಾರ ಬೆಳಗ್ಗೆ ಹಾಸನಕ್ಕೆ ಪ್ರಯಾಣಿಸಲು ಸಮರ್ಪಕ ಬಸ್‌ಗಳ ಸೌಲಭ್ಯವಿಲ್ಲದೆ ಪ್ರಯಾಣಿಕರು ಪರದಾಡಿದರು.


ಬೆಳಗ್ಗೆ 7.30ರಿಂದ 8.30ರತನಕ ಹಾಸನಕ್ಕೆ ಬಸ್‌ಗಳ ಓಡಾಟವಿಲ್ಲದೆ ಪ್ರಯಾಣಿಕರು ಪಡಿಪಾಟಲು ಅನುಭವಿಸುವಂತಾಗಿತ್ತು. ಬಸ್‌ಗಾಗಿ ಸುತ್ತಮುತ್ತಲಿನ ಗ್ರಾಮಗಳಿಂದ ಬಂದಿದ್ದ ಜನರಿಂದ ನಿಲ್ದಾಣ ತುಂಬಿ ಹೋಗಿತ್ತು. 8.40ರ ವೇಳೆಗೆ ಪಟ್ಟಣದ ಡಿಪೋದಿಂದ ಹಾಸನಕ್ಕೆ ತೆರಳಲು ಬಂದ ಬಸ್‌ಗೆ ಅಪಾರ ಪ್ರಯಾಣಿಕರು ಒಮ್ಮೆಲೇ ನೂಕು ನುಗ್ಗಲಿನಲ್ಲಿ ಹತ್ತಿದ್ದರಿಂದ ತುಂಬಿ ತುಳುಕುತ್ತಿದ್ದ ಬಸ್‌ನ ಬಾಗಿಲು ಮುರಿದು ಬಿತ್ತು. ಹೀಗಾಗಿ ಬಸ್ ಮತ್ತೆ ಡಿಪೋಗೆ ಮರಳಿತು. ಪರಿಣಾಮ ಬಸ್‌ಗಳಿಲ್ಲದೆ ಪ್ರಯಾಣಿಕರ ಗೋಳು ಹೇಳತೀರದಾಯಿತು.
ನಿಲ್ದಾಣದಲ್ಲಿ ಶಾಲಾ, ಕಾಲೇಜಿಗೆ ತೆರಳಲು ಜಮಾಯಿಸಿದ್ದ ನೂರಾರು ವಿದ್ಯಾರ್ಥಿಗಳು ಹಾಗೂ ಸರ್ಕಾರಿ ಕಚೇರಿಗಳಿಗೆ ತೆರಳಲು ಬಂದಿದ್ದ ನೌಕರರು, ಸಾರ್ವಜನಿಕರು ಬಸ್ ಇಲ್ಲದೆ ಹಿಡಿ ಶಾಪ ಹಾಕುವಂತಾಗಿತ್ತು.


ಬೆಳಗ್ಗೆ 7.30ಕ್ಕೆ ಮಲ್ಲಿಪ್ಟಣದಿಂದ ಅರಕಲಗೂಡು ಬಸ್ ನಿಲ್ದಾಣಕ್ಕೆ ಬಂದಿದ್ದು, 8.45 ಸಮಯ ಕಳೆದರೂ ಹಾಸನಕ್ಕೆ ಬಸ್‌ಗಳು ಇಲ್ಲವಾಗಿವೆ. ಇದು ಒಂದು ದಿನದ ಸಮಸ್ಯೆಯಲ್ಲ. ನಿತ್ಯ ಬೆಳಗ್ಗೆ ಮತ್ತು ಸಂಜೆ ಬಸ್ ಸೌಲಭ್ಯವಿಲ್ಲದೆ ತೊಂದರೆ ಉಂಟಾಗಿದೆ. ಶಾಲಾ, ಕಾಲೇಜುಗಳಿಗೆ ಸಮಯಕ್ಕೆ ಸರಿಯಾಗಿಹಾಜರಾಗಲು ಸಾಧ್ಯವಾಗುತ್ತಿಲ್ಲ ಎಂದು ನಿಲ್ದಾಣದಲ್ಲಿ ಬಸ್‌ಗಾಗಿ ಕಾದು ನಿಂತಿದ್ದ ವಿದ್ಯಾರ್ಥಿಗಳು ಅಳಲು ತೋಡಿಕೊಂಡರು.
ಅರಕಲಗೂಡು ಕೆಎಸ್‌ಆರ್‌ಟಿಸಿ ನಿಲ್ದಾಣದಿಂದ ಬೆಳಗಿನ ಹೊತ್ತು ಹಾಸನಕ್ಕೆ ಪ್ರಯಾಣಿಸಲು ಬಸ್‌ಗಳು ಇಲ್ಲ. ಸಂಜೆ ಸಮಯ ಹಾಸನದಿಂದ ಅರಕಲಗೂಡು ಕಡೆಗೆ ವಾಪಸಾಗಲು ಬಸ್‌ಗಳ ಸಂಖ್ಯೆ ತೀರ ವಿರಳವಾಗಿವೆ. ಬಸ್ ಸೌಲಭ್ಯ ಸಮರ್ಪಕವಾಗಿ ಕಲ್ಪಿಸದೆ ನಿಲ್ದಾಣದಲ್ಲಿ ಕಾಯುವಂತಾಗಿದೆ. ಡಿಪೋ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಈ ಬಗ್ಗೆ ತಲೆಕೆಡಿಸಿಕೊಳ್ಳುತ್ತಿಲ್ಲ ಎಂದು ಸಾರ್ವಜನಿಕರು ಆಕ್ರೋಶ ಹೊರಹಾಕಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net