ಪೊಲೀಸ್ ಇಲಾಖೆಯಲ್ಲಿ ತಾರಾತಮ್ಯ ದೃಷ್ಟಿಯಲ್ಲಿ ಶೋಷಿತ ಸಮುದಾಯದ ಸಿಬ್ಬಂದಿ ಅಮಾನತ್‌, ರಾಜಭವನ ಚಲೋ ಹೋರಾಟದ ಎಚ್ಚರಿಕೆ

16CBP1
ಚಿಕ್ಕಬಳ್ಳಾಪುರ ಪತ್ರಕರ್ತರ ಭವನದ ಸುದ್ದಿಗೋಷ್ಠಿಯಲ್ಲಿ ಅಹಿಂದ ಒಕ್ಕೂಟದ ರಾಜ್ಯ ಸಂಚಾಲಕರಾದ ಪ್ರೊ ಹರಿರಾಮ್ , ಭಾಸ್ಕರ್ ಪ್ರಸಾದ್, ಮುಖಂಡರಾದ ಜನಾರ್ದನ್, ನಾಗೇಶ್ ಮತ್ತಿತರರು ಇದ್ದರು.
Published on

ಚಿಕ್ಕಬಳ್ಳಾಪುರ: ಪೊಲೀಸ್ ಇಲಾಖೆಯಲ್ಲಿ ತಾರಾತಮ್ಯ ದೃಷ್ಟಿಯಲ್ಲಿ ಶೋಷಿತ ಸಮುದಾಯದ ಇಬ್ಬರು ಸಿಬ್ಬಂದಿಯನ್ನು ಅಮಾನತುಗೊಳಿಸಿರುವ ಪ್ರಕರಣವನ್ನು ಜಿಲ್ಲೆಯ ಬದಲಿಗೆ ಬಾಹ್ಯ ಭಾಗದ ಹಿರಿಯ ಅಧಿಕಾರಿಗಳ ತಂಡದಿಂದ ತನಿಖೆ ನಡೆಸಬೇಕು ಎಂದು ರಾಜ್ಯ ಅಹಿಂದ ಒಕ್ಕೂಟ ಒತ್ತಾಯಿಸಿದೆ.

ಪ್ರಕರಣದಲ್ಲಿ ಜಾತಿನಿಂದನೆ, ಮೇಲಧಿಕಾರಿಗಳ ಕಿರುಕುಳ, ಇಲಾಖೆಯ ಶಿಸ್ತುಕ್ರಮದ ವಿಚಾರದಲ್ಲಿ ಪಕ್ಷಪಾತದ ದೂರುಗಳು ಕೇಳಿ ಬಂದಿರುವ ಹಿನ್ನೆಲೆಯಲ್ಲಿ ಸ್ಥಳೀಯ ತನಿಖಾ ತಂಡದಿಂದ ಪಾರದರ್ಶಕ ಕ್ರಮದ ನಿರೀಕ್ಷೆ ಇಲ್ಲ. ಇದಕ್ಕೆ 10 ದಿನಗೊಳಗೆ ಪಾರದರ್ಶಕ ವಿಚಾರಣೆಗೆ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದಲ್ಲಿ ಚಿಕ್ಕಬಳ್ಳಾಪುರದಿಂದ ರಾಜಭವನ ಚಲೋ ಹೋರಾಟ ನಡೆಸಲಾಗುತ್ತಿದೆ ಎಂದು ಒಕ್ಕೂಟದ ರಾಜ್ಯ ಸಂಚಾಲಕ ಪ್ರೊ ಹರಿರಾಮ್ ಎಚ್ಚರಿಕೆ ನೀಡಿದ್ದಾರೆ.

*ಜಾತಿ ತಾರತಮ್ಯ ತೋರಿಲ್ಲ: ಇಲಾಖೆ ಸ್ಪಷ್ಟನೆ

ಸಿಬ್ಬಂದಿ ಅಮಾನತ್ತಿನ ಪ್ರಕರಣದಲ್ಲಿ ಯಾವುದೇ ಜಾತಿ ತಾರತಮ್ಯ ತೋರಿಲ್ಲ. ಅಪರಾಧಿಗಳೊಂದಿಗೆ ಕೈ ಜೋಡಿಸಿರುವುದು ಮೇಲ್ನೋಟಕ್ಕೆ ಕಂಡು ಬಂದಿರುವುದು ಮತ್ತು ಗಂಭೀರ ಆರೋಪದ ಹಿನ್ನೆಲೆಯಲ್ಲಿ ನಿಯಮಾನುಸಾರ ಕ್ರಮ ಕೈಗೊಳ್ಳಲಾಗಿದೆ ಎಂದು ಜಿಲ್ಲಾ ಪೊಲೀಸ್ ಇಲಾಖೆ ತಿಳಿಸಿದೆ.

ಪ್ರಕರಣ ದಾಖಲಾದ ಕೂಡಲೇ ಸಿಬ್ಬಂದಿ ಜಾಮೀನು ಪಡೆದುಕೊಂಡಿದ್ದರ ಜತೆಗೆ ತನಿಖೆ ನಡೆಸದಂತೆ ನ್ಯಾಯಾಲಯದಿಂದ ತಡೆಯಾಜ್ಞೆ ತಂದಿದ್ದು ಅಪರಾಧಗಳನ್ನು ತಡೆಗಟ್ಟಬೇಕಾದ ಪೊಲೀಸರೇ ವಂಚಕರೊಂದಿಗೆ ಕೈ ಜೋಡಿಸಿ ಗಂಭೀರ ದುರ್ನಡತೆ ಎಸಗಿ ಇಲಾಖೆಗೆ ಅಪಾರ ಮುಜುಗರ ಉಂಟು ಮಾಡಿದ್ದಾರೆ. ಇದಕ್ಕೆ ಅಮಾನತ್‌ಗೊಳಿಸಲಾಗಿದೆ. ಇದರ ನಡುವೆ ಆರೋಪಿ ಸಿಬ್ಬಂದಿ ಇಲಾಖಾ ವಿಚಾರಣೆಗೆ ಕಾಲಕಾಲಕ್ಕೆ ಸರಿಯಾಗಿ ಹಾಜರಾಗದೇ ವಿಳಂಬ ಧೋರಣೆ ಅನುಸರಿಸಿದ್ದಾರೆ ಎಂದು ತಿಳಿಸಿದೆ.

*ಪ್ರಕರಣದ ಹಿನ್ನೆಲೆ

ಕಳೆದ 2023 ನೇ ಸಾಲಿನ ಆಗಸ್ಟ್ 10 ರಂದು ಮೈಸೂರಿನ ಮಹಿಳೆಯೊಬ್ಬರು ದಿಬ್ಬೂರಹಳ್ಳಿ ಪೊಲೀಸ್ ಠಾಣೆಗೆ ಶ್ರೀಕಾಂತ್ ರೆಡ್ಡಿ ಅಲಿಯಾಸ್ ಸುರೇಶ್ ಮತ್ತು ಇತರರು ಸೇರಿ 50 ಲಕ್ಷ ರೂ ವಂಚಿಸಿರುವ ಬಗ್ಗೆ ದೂರು ಸಲ್ಲಿಸಿದ್ದು ಇದರಲ್ಲಿ ಪೊಲೀಸ್ ಠಾಣೆಯ ಸಿಬ್ಬಂದಿ ಅಶೋಕ್ ಮತ್ತು ನರಸಿಂಹ ಮೂರ್ತಿ ಸಹಕರಿಸಿದ್ದಾರೆ ಎಂಬುದಾಗಿ ಆರೋಪಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net