ಸಮುದಾಯ ಕಾಮಗಾರಿ ಪ್ರಾರಂಭ ಏ. 1ರಿಂದ

27 GJD 1
Published on

ಗಜೇಂದ್ರಗಡ: ಬೇಸಿಗೆಯಲ್ಲಿ ಕೂಲಿಕಾರರಿಗೆ ಕೆಲಸವಿಲ್ಲದೆ ವಲಸೆ ಹೋಗುವುದನ್ನು ತಪ್ಪಿಸಲು ಏ. 1ರಿಂದ ಕೆಲಸ ಪ್ರಾರಂಭಿಸಲಾಗುತ್ತಿದೆ. ಕೂಲಿಕಾರರು ಕಾಯಕ ಬಂಧುಗಳು ಉದ್ಯೋಗ ಚೀಟಿ ಸರಿಪಡಿಸಿ ಸಕಾಲಕ್ಕೆ ಕೂಲಿ ಹಣ ಪಾವತಿಸಲು ಸಹಕರಿಸಿ ಎಂದು ಜಿಲ್ಲಾ ಐಇಸಿ ಸಂಯೋಜನಕ ವಿ.ಎಸ್. ಸಜ್ಜನ್ ಹೇಳಿದರು.

ತಾಲೂಕಿನ ಕುಂಟೋಜಿ ಗ್ರಾಮ ಪಂಚಾಯಿತಿಯಲ್ಲಿ ಬುಧವಾರ ಆಯೋಜಿಸಿದ್ದ ಕಾಯಕ ಬಂಧುಗಳ ಸಭೆಯಲ್ಲಿ ಅವರು ಮಾತನಾಡಿದರು.

2025- 26ನೇ ಸಾಲಿನ ಮಹಾತ್ಮ ಗಾಂಧಿ ನರೇಗಾ ಯೋಜನೆಯಲ್ಲಿ ಏ.1ರಿಂದ ಸಮುದಾಯ ಕಾಮಗಾರಿ ಪ್ರಾರಂಭಿಸಿ ಕೂಲಿಕಾರರಿಗೆ ಕೆಲಸ ನೀಡಲಾಗುತ್ತಿದೆ. ಕಾಯಕ ಬಂಧುಗಳು (ಮೇಟ್ಸ್) ಜಾಬ್ ಕಾರ್ಡ್‌ಗಳನ್ನು ಪರಿಶೀಲಿಸಿ ನಮೂನೆ 6 ತುಂಬಿಕೊಡಲು ತಿಳಿಸಿದರು.

ಪಿಡಿಒ ಮಹಾಂತೇಶ ತಳವಾರ ಮಾತನಾಡಿ, ಕೆಲಸಕ್ಕೆ ಬರುವ ಕೂಲಿಕಾರರಿಗೆ ಅಳತೆ ಪ್ರಮಾಣ ನೀಡಿ ಎನ್‌ಎಂಎಂಎಸ್ ಆ್ಯಪ್ ಇಲ್ಲದೆ ಯಾವುದೇ ಕಾಮಗಾರಿ ಕೈಗೊಳ್ಳಲು ಅವಕಾಶವಿಲ್ಲ. ಎರಡು ಬಾರಿ ಎನ್‌ಎಂಎಂಎಸ್ ಆ್ಯಪ್‌ನಲ್ಲಿ ಹಾಜರಿಯನ್ನು ಕಡ್ಡಾಯವಾಗಿ ಹಾಕಿಸಬೇಕು. ನರೇವಾಗಿ ಆಧಾರ್ ಬೇಸ್ ಮೂಲಕ ಫಲಾನುಭವಿಗಳಿಗೆ ಕೂಲಿ ಹಣ ಪಾವತಿಯಾಗುತ್ತದೆ ಎಂದು ತಿಳಿಸಿದರು.

ಐಇಸಿ ಸಂಯೋಜಕರಾದ ಮಂಜುನಾಥ ಹಳ್ಳದ ಮಾತನಾಡಿ, ಬೇಸಿಗೆ ಕಾಲದಲ್ಲಿ ಕೆಲಸವಿಲ್ಲದೆ ಮನೆಯಲ್ಲಿರುವ ಕೂಲಿಕಾರರಿಗೆ ಉದ್ಯೋಗ ಖಾತ್ರಿ ಯೋಜನೆಯಡಿ ಕೆಲಸ ಪ್ರಾರಂಭಿಸಲಾಗುತ್ತದೆ. ಏ.1ರಿಂದ ಕೆಲಸ ನೀಡಲಾಗುತ್ತದೆ ಎಂದರು. ತಾಂತ್ರಿಕ ಸಹಾಯಕ ಅಜಯ್ ಹೂಗಾರ, ಬಿಎಪ್ಟಿ ಶಂಕರಗೌಡ ಪಾಟೀಲ, ಮುದಕಪ್ಪ ದೊಣ್ಣೆಗುಡ್ಡ, ಅನ್ನಪೂರ್ಣಾ ಹಿರೇಮಠ, ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net