

ಬೀರೂರು: ಯುವ ಸಂಘಟನೆಗಳು ಬೆಳೆದರೆ ಮಾತ್ರ ಸಮುದಾಯದ ಉನ್ನತಿ ಸಾಧ್ಯ. ವ್ಯಕ್ತಿತ್ವ ವಿಕಸನಕ್ಕೆ ಆದ್ಯತೆ ನೀಡಿ ಸಮಾಜದ ಕಟ್ಟಕಡೆಯ ಜನರಿಗೂ ನಿಸ್ವಾರ್ಥ ಸೇವೆ ಸಲ್ಲಿಸಲು ಜೆಸಿಐ ಮುಂದಾಗಬೇಕು ಎಂದು ತರೀಕೆರೆ ಉಪ ವಿಭಾಗಾಧಿಕಾರಿ ಕಾಂತರಾಜ್ ಹೇಳಿದರು.
ಪಟ್ಟಣದ ರೋಟರಿ ಭವನದಲ್ಲಿ ನಡೆದ ಜೆಸಿಐ 37ನೇ ಪದಗ್ರಹಣ ಸಮಾರಂಭ ಉದ್ಘಾಟಿಸಿ ಮಾತನಾಡಿ, ಮನುಷ್ಯರಲ್ಲಿ ಸಾಮಾಜಮುಖಿ ಚಿಂತನೆಯಿದ್ದರೆ ಸಾಮಾಜಿಕ ಸೇವಾ ಚಟುವಟಿಕೆಗಳನ್ನು ನಡೆಸಲು ಸಾಧ್ಯ. ವೈಯಕ್ತಿಕವಾಗಿ ಸಾಧಿಸಲು ಅಸಾಧ್ಯವಾಗಿದ್ದನ್ನು ಸಾಮೂಹಿಕವಾಗಿ ಸಂಘಟನೆ ಮೂಲಕ ಸಾಧಿಸಲು ಸ್ಫೂರ್ತಿ ಸಿಗುತ್ತದೆ. ಜೇಸಿಐ ಅಂತಹ ನಾಯಕರನ್ನು ಕೊಡುಗೆಯಾಗಿ ನೀಡುತ್ತಿದೆ. ಸರ್ಕಾರದಿಂದ ಮಾತ್ರ ಅಭಿವೃದ್ಧಿ ಕೆಲಸಗಳನ್ನು ನಿರೀಕ್ಷಿಸುವುದು ಸಾಧ್ಯವಿಲ್ಲ. ಇಂತಹ ಸಂಘ ಸಂಸ್ಥೆಗಳು ನೆರವಿಗೆ ನಿಂತು ಸಮಾಜಮುಖಿ ಚಟುವಟಿಕೆಗಳನ್ನು ಹಮ್ಮಿಕೊಳ್ಳಬೇಕು ಎಂದರು.
ನೂತನ ಸದಸ್ಯರಿಗೆ ವಲಯ 14ರ ಉಪಾಧ್ಯಕ್ಷ ಬಿ.ಎಂ.ಮಲ್ಲಿಕಾರ್ಜುನ ಪ್ರಮಾಣ ವಚನ ಬೋಧಿಸಿದರು. ರಾಷ್ಟ್ರೀಯ ಪೂರ್ವಾಧ್ಯಕ್ಷ ಟಿ.ವಿ.ಎನ್.ಮೂರ್ತಿ, ಕಾರ್ಯದರ್ಶಿ ಐ.ಓ.ವಿನೋದ, ಪ್ರದೀಪ್, ನಿಕಟ ಪೂರ್ವ ಅಧ್ಯಕ್ಷ ಅಯೂಬ್ ಅಹಮದ್, ಮಾರ್ಗದ ಮಧು, ವಿರೇಶ್ ಬಾಬು, ಲಕ್ಷ್ಮಣ್ ಗೌಡ, ಪದಾಧಿಕಾರಿಗಳಾದ ಪ್ರಮೋದ್, ಮಂಜುಳಾ ನರಸಿಂಹಮೂರ್ತಿ, ಸಂತೋಷ್ ಕುಮಾರ್, ಅರುಣ್ ಕುಮಾರ್ ಇದ್ದರು.