

ಲಿಂಗಸುಗೂರು: ಮುದಗಲ್ ಪಪಂ ವ್ಯಾಪ್ತಿಯಲ್ಲಿನ ಅಲೆಮಾರಿ ಕುಟುಂಬಗಳಿಗೆ ನಿವೇಶನ ಹಕ್ಕುಪತ್ರ ಮಂಜೂರು ಮಾಡಬೇಕೆಂದು ಒತ್ತಾಯಿಸಿ ಸಹಾಯಕ ಆಯುಕ್ತ ಅವಿನಾಶ ಶಿಂಧೆಗೆ ಕರ್ನಾಟಕ ಅಲೆಮಾರಿ, ಅರೆ ಅಲೆಮಾರಿ ಮತ್ತು ವಿಮುಕ್ತ ಬುಡಕಟ್ಟುಗಳ ಒಕ್ಕೂಟದ ನೇತೃತ್ವದಲ್ಲಿ ಗುರುವಾರ ಮನವಿ ಸಲ್ಲಿಸಲಾಯಿತು.
ಮುದಗಲ್ ಪಟ್ಟಣದ ವಾರ್ಡ್ ನಂ.21 ರ ಶಾದಿಮಹಲ್, ಮೇಗಳಪೇಟೆ, ಎಪಿಎಂಸಿ, ಪೆಟ್ರೋಲ್ ಬಂಕ್ ಹತ್ತಿರ ಸೇರಿ ಇತರೆಡೆ ಅಲೆಮಾರಿ ಸುಡಗಾಡು ಸಿದ್ಧರು, ಬುಡ್ಗು ಜಂಗಮ, ಕೊರವರು, ಮೇದರು, ಚನ್ನದಾಸರು ಕಳೆದ ಆರು ದಶಕಗಳಿಂದ ನಿವೇಶನ ಮತ್ತು ವಸತಿ ಇಲ್ಲದೆ ಮೂಲ ಸೌಲಭ್ಯಗಳಿಂದ ವಂಚಿತರಾಗಿ ಜೋಪಡಿ, ಟೆಂಟ್‌ನಲ್ಲಿ ವಾಸಿಸುತ್ತಿದ್ದಾರೆ. ಮಳೆ, ಗಾಳಿ, ಸಿಡಿಲು, ವಿಷಜಂತುಗಳ ಭೀತಿಯಿಂದ ಬದುಕು ಸಾಗಿಸಲಾಗುತ್ತಿದೆ. ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಸರ್ವೆ ನಂ. 593 ರ 65 ಎಕರೆ ಸರ್ಕಾರಿ ಜಮೀನಿನಲ್ಲಿ 6 ಎಕರೆ ಜಮೀನನ್ನು ಅಲೆಮಾರಿಯ 105 ಕುಟುಂಬಗಳಿಗೆ ಹಂಚಿಕೆ ಮಾಡಿ ಹಕ್ಕುಪತ್ರ ವಿತರಿಸಬೇಕೆಂದು ಒತ್ತಾಯಿಸಲಾಯಿತು.