

ವಿಜಯವಾಣಿ ಸುದ್ದಿಜಾಲ ಕೋಟ
ಎಂಟನೇ ವರ್ಷಕ್ಕೆ ಪದಾರ್ಪಣೆ ಮಾಡುತ್ತಿರುವ ಸಮುದ್ಯತಾ ಸಂಸ್ಥೆ ಸೀ ಶೋರ್ ಬೀಚ್ ರೆಸಾರ್ಟ್ ಮೂಲಕ ಹೊಸ ಅವಕಾಶಗಳನ್ನು ಪ್ರವಾಸಿಗರಿಗೆ ಮತ್ತು ಆಹಾರ ಪ್ರಿಯರಿಗೆ ಒದಗಿಸಿ ಕೊಡುತ್ತಿದ್ದು, ಉದ್ಯಮ ರಂಗದಲ್ಲಿ ಹೊಸ ಮೈಲಿಗಲ್ಲು ಸ್ಥಾಪಿಸಿದೆ ಎಂದು ಕೋಟದ ಉದ್ಯಮಿ ಆನಂದ ಸಿ.ಕುಂದರ್ ಹೇಳಿದರು.
ಕುಂಭಾಶಿಯ ಕೊರವಡಿ ಕಡಲ ಕಿನಾರೆಯಲ್ಲಿ ಸಮುದ್ಯತಾ ಸಂಸ್ಥೆಯಾಗಿ ಆರಂಭಗೊಂಡ ಸಮುದ್ಯತಾ ಸೀಶೋರ್ ಬೀಚ್ ರೇಸಾರ್ಟನ್ನು ಭಾನುವಾರ ಲೋಕಾರ್ಪಣೆಗೊಳಿಸಿ ಮಾತನಾಡಿ, ಸಮುದ್ಯತಾ ಸಂಸ್ಥೆಯ ಯಶಸ್ಸಿಗೆ ಯೋಗೇಂದ್ರ ತಿಂಗಳಾಯ ಅವರ ತಂಡ ನಡೆದು ಬಂದ ದಾರಿ ನೆನಪಿಟ್ಟುಕೊಂಡು ಮುಂದುವರಿಯುತ್ತಿರುವುದೇ ಕಾರಣ. ಆಧುನಿಕ ಜನರ ಅಭಿಲಾಷೆಗೆ ತಕ್ಕಂತೆ ಓಪನ್ ಲಾನ್ ಕಾಟೇಜ್‌ಗಳು, ವಿವಿಧ ಒಳಾಂಗಣ ಕ್ರೀಡೆಗಳು, ತೊಟ್ಟಿ ಮನೆ ಮೊದಲಾದವುಗಳು ಪ್ರವಾಸಿಗರನ್ನು ಆಕರ್ಷಿಸುವಲ್ಲಿ ಮತ್ತು ಸಂತೃಪ್ತಿಗೊಳಿಸುವಲ್ಲಿ ಯಶಸ್ವಿಯಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಬ್ರಹ್ಮಾವರದ ಚಾರ್ಟೆಡ್ ಅಕೌಂಟೆಂಟ್ ಪದ್ಮನಾಭ ಕಾಂಚನ್, ಬಂಗೇರ ಓವರ್ಸೀಸ್ ಕಾರ್ಖಾನೆ ಮಾಲಿಕ ರಾಜೇಶ್ ಬಂಗೇರ, ಕೋಟೇಶ್ವರದ ಎಲ್‌ಜಿ ಇಂಡಸ್ಟ್ರೀಸ್ ಸಂಸ್ಥೆಯ ಮಾಲಕಿ ಹರ್ಷಾ ಕಾಮತ್, ಮಂಗಳೂರಿನ ಕಾರು ಡೆಕೋ ಮಾಲಕ ಕುಶಲ್ ಹೆಗ್ಡೆ, ಕುಂಭಾಶಿ ಗ್ರಾಮ ಪಂಚಾಯಿತಿ ಸದಸ್ಯ ರಾಘವೇಂದ್ರ ಮೊಗವೀರ, ಕೋಟ-ಪಡುಕೆರೆ ಉದ್ಯಮಿ ರಮೇಶ್ ಎಚ್.ಕುಂದರ್, ಸಮುದ್ಯತಾ ಸಂಸ್ಥೆಯ ಮುಖ್ಯಸ್ಥ ಯೋಗೇಂದ್ರ ತಿಂಗಳಾಯ ಮೊದಲಾದವರು ಉಪಸ್ಥಿತರಿದ್ದರು. ಆಕಾಶ್ ಹೆಬ್ಬಾರ ಸ್ವಾಗತಿಸಿ, ನಿರೂಪಿಸಿದರು. ಸಂಸ್ಥೆಯ ಸದಸ್ಯ ಸಂದೀಪ್ ಶೆಟ್ಟಿ ವಂದಿಸಿದರು.
ಕುಂದಾಪುರದಿಂದ ಸುಮಾರು 10 ಕಿ.ಮೀ ದೂರವಿರುವ ಕೊರವಡಿ ಬೀಚ್ ರಸ್ತೆಯಲ್ಲಿ ಸೀಶೋರ್ ಬೀಚ್ ರೆಸಾರ್ಟ್ ಕಾರ್ಯನಿರ್ವಹಿಸುತ್ತಿದೆ. ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಸಿಗುವ ತೆಕ್ಕಟ್ಟೆಯಿಂದ ಪಶ್ಚಿಮಕ್ಕೆ 3 ಕಿ.ಮೀ ಸಮುದ್ರದ ಬದಿಗೆ ಸಂಚರಿಸಿದಾಗ ಹೊಸ ಇವೆಂಟ್ ಕಾಣಸಿಗುತ್ತದೆ. ಸಮುದ್ಯತಾ ಟಿ.ಎನ್.ಎನ್ ಸೂಟ್ಸ್ ವೆಂಕಟೇಶ್ ಸೀಶೋರ್ ಇವೆಂಟ್‌ನಲ್ಲಿ ಸೌಪರ್ಣಿಕ, ವಾರಾಹಿ, ಕೇದಕ, ಚಕ್ರ ಹಾಗೂ ಕುಬ್ಜ ಎಂಬ ಹೆಸರಿನ ಐದು ವಿಶೇಷ ರೀತಿಯ ಕಾಟೆಜುಗಳನ್ನು ಹೊಂದಿದೆ. ಇದಕ್ಕೆ ತಾಗಿಕೊಂಡೆ ವಿಶಾಲವಾದ ತೆರೆದ ಹುಲ್ಲುಗಾವಲಿನ ಮನೆ. ಜತೆಗೆ ರೈನ್ ಡಾನ್ಸ್, ಬೀನ್ ಬ್ಯಾಗ್ ಕಾನ್ಸೆಪ್ಟ್ ಸಿನಿಮಾ, ಓಪನ್ ಲಾನ್, ಹಳೆಯ ಕಾಲದ ಸಂಸ್ಕೃತಿ ಪ್ರತಿಬಿಂಬಿಸುವ ತೊಟ್ಟಿ ಮನೆ, ಚದುರಂಗ ಮುಂತಾದ ಒಳಾಂಗಣ ಕ್ರೀಡೆಗಳು ಹಾಗೂ ಇನ್ನಿತರ ಸೌಲಭ್ಯಗಳನ್ನು ಒದಗಿಸಲಾಗಿದೆ.