ಒಳಮೀಸಲಿಗೆ ಸಮಾಜದ ವಿರೋಧ: ಪ್ರಕಾಶ್ ರಾಥೋಡ್

banjara
ಶಿವಮೊಗ್ಗದಲ್ಲಿ ಏರ್ಪಡಿಸಿದ್ದ ಒಳಮೀಸಲಾತಿ-ಬಂಜಾರ ಸಮುದಾಯಕ್ಕೆ ಪೂರಕವೇ? ಬಾಧಕವೇ? ಕುರಿತ ವಿಚಾರ ಸಂಕಿರಣವನ್ನು ಡೆಪ್ಯುಟಿ ಸ್ಪೀಕರ್ ರುದ್ರಪ್ಪ ಲಮಾಣಿ ಉದ್ಘಾಟಿಸಿದರು. ಎಂಎಲ್‌ಸಿ ಪ್ರಕಾಶ್ ರಾಥೋಡ್, ಶಾಸಕಿ ಶಾರದಾ ಪೂರ‌್ಯಾನಾಯ್ಕಾ, ತಾಂಡಾ ಅಭಿವೃದ್ಧಿ ನಿಗಮದ ಅಧ್ಯಕ್ಷ ಜಯದೇವ ನಾಯ್ಕ, ಮಾಜಿ ಸಂಸದ ಉಮೇಶ್ ಜಾಧವ್, ಮಾಜಿ ಶಾಸಕರಾದ ಕೆ.ಬಿ.ಅಶೋಕ ನಾಯ್ಕ, ಪಿ.ರಾಜೀವ್ ಮುಂತಾದವರಿದ್ದರು.
Published on

ಶಿವಮೊಗ್ಗ: ಒಳಮೀಸಲಾತಿ ವಿರುದ್ಧ ನಮ್ಮ ಮುಂದಿನ ರಾಜಕೀಯ ಇಲ್ಲವೇ ಕಾನೂನಾತ್ಮಕ ಹೋರಾಟದ ಬಗ್ಗೆ ಚರ್ಚಿಸಲು ಶೀಘ್ರದಲ್ಲೇ ಬಂಜಾರ, ಭೋವಿ, ಕೊರಮ, ಕೊರಚ ಮುಂತಾದ ಸಮುದಾಯಗಳ ಸಭೆ ಕರೆಯಲಾಗುವುದು ಎಂದು ಬಂಜಾರ ಸಮಾಜದ ಮುಖಂಡ, ವಿಧಾನ ಪರಿಷತ್ ಸದಸ್ಯ ಪ್ರಕಾಶ್ ರಾಥೋಡ್ ತಿಳಿಸಿದರು.

ಒಳಮೀಸಲಾತಿ ಬಂಜಾರ ಸಮುದಾಯಕ್ಕೆ ಪೂರಕವೇ? ಬಾಧಕವೇ? ವಿಷಯದ ಕುರಿತು ರಾಜ್ಯ ಮೀಸಲಾತಿ ಸಂರಕ್ಷಣಾ ಒಕ್ಕೂಟ ಏರ್ಪಡಿಸಿದ್ದ ರಾಜ್ಯ ಮಟ್ಟದ ವಿಚಾರ ಸಂಕಿರಣದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇಂದಿನ ವಿಚಾರ ಸಂಕಿರಣದಲ್ಲಿ ಅತ್ಯುತ್ತಮ ಚರ್ಚೆಗಳಾಗಿವೆ ಎಂದರು.
ರಾಜ್ಯ ಸರ್ಕಾರ ಒಳಮೀಸಲು ಜಾರಿ ಮಾಡಬಹುದೆಂದು ಸುಪ್ರೀಂಕೋರ್ಟ್ ಆದೇಶ ನೀಡಿರುವುದರಿಂದ ಗೊಂದಲವಾಗಿರುವುದು ನಿಜ. ಒಳಮೀಸಲು ಜಾರಿಯಾದರೆ ಬಂಜಾರ, ಕೊರಮ, ಕೊರಚ, ಭೋವಿ ಮುಂತಾದ ಸಮುದಾಯಗಳಿಗೆ ನಷ್ಟವಾಗಲಿದೆ. ಹೀಗಾಗಿ ನಾವು ಮುಂದೆ ಯಾವ ರೀತಿಯ ಹೋರಾಟ ನಡೆಸಬೇಕೆಂಬ ಬಗ್ಗೆ ನಿರ್ಧರಿಸಬೇಕಿದೆ ಎಂದು ಹೇಳಿದರು.
ಸುಪ್ರೀಂಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಬಹುದೇ? ನಿಯೋಗದಲ್ಲಿ ತೆರಳಿ ರಾಜ್ಯ ಸರ್ಕಾರದ ಮನವೊಲಿಸಬಹುದೇ? ಒಳಮೀಸಲು ಜಾರಿ ವಿಷಯದಲ್ಲಿ ಸರ್ಕಾರದ ನಿಲುವು ಏನಿರಬಹುದು ಎಂದು ತಿಳಿದು ಮುಂದಿನ ಹೆಜ್ಜೆ ಇರಿಸಬಹುದೇ? ಎಂಬ ಬಗ್ಗೆ ಇಂದಿನ ವಿಚಾರ ಸಂಕಿರಣದಲ್ಲಿ ಚರ್ಚೆ ಮಾಡಲಾಗಿದೆ ಎಂದು ತಿಳಿಸಿದರು.
ಬಂಜಾರ ಸಮುದಾಯ ಒಳಮೀಸಲಾತಿಯನ್ನು ಸಂಪೂರ್ಣವಾಗಿ ವಿರೋಧಿಸುತ್ತದೆ. ನಮ್ಮ ಸಮಾಜ ಮುಖ್ಯ ವಾಹಿನಿಗೆ ಬರುತ್ತಿರುವ ಸಂದರ್ಭದಲ್ಲಿ ಒಳಮೀಸಲಾತಿ ಜಾರಿಯಾದರೆ ನಮಗೆ ನಷ್ಟ ಉಂಟಾಗುತ್ತದೆ. ಇಂದಿನ ವಿಚಾರ ಸಂಕಿರಣ ಪಕ್ಷಾತೀತವಾಗಿ ನಡೆದಿದೆ. ಮುಂದಿನ ದಿನಗಳಲ್ಲಿ ಉತ್ತಮ ಫಲಿತಾಂಶಕ್ಕೆ ಇದು ಕಾರಣವಾಗಲಿದೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net