

ಹೊಸಕೋಟೆ: ತಾಲೂಕಿನಲ್ಲಿ ವಾಲ್ಮೀಕಿ ನಾಯಕ ಜನಾಂಗಕ್ಕೆ ಹೊಸಕೋಟೆಯಲ್ಲಿ ಭವನ ನಿರ್ಮಾಣಕ್ಕೆ ನಿವೇಶನದ ಸಮಸ್ಯೆ ಇದ್ದು, ಆದಷ್ಟು ಬೇಗ ನಿವೇಶನ ನೀಡಿ ಭವನ ನಿರ್ಮಾಣ ಮಾಡಿಕೊಡಲಾಗುವುದು ಎಂದು ವಿಧಾನ ಪರಿಷತ್ ಸದಸ್ಯ ಎಂಟಿಬಿ ನಾಗರಾಜ್ ತಿಳಿಸಿದರು.
ನಗರದ ಬಿಜೆಪಿ ಕಚೇರಿಯಲ್ಲಿ ಮಹರ್ಷಿ ವಾಲ್ಮೀಕಿ ಜಯಂತಿಯಲ್ಲಿ ವಾಲ್ಮೀಕಿ ಭಾವಚಿತ್ರಕ್ಕೆ ಪುಷ್ಪ ಸಮರ್ಪಿಸಿ ಮಾತನಾಡಿದರು.
ವಾಲ್ಮೀಕಿ ಅವರು ರಾಮಾಯಣ ಮಹಾಕಾವ್ಯ ರಚಿಸಿದ ಮಹಾ ಮೇಧಾವಿ. ರಾಮಾಯಣ ವಿಶ್ವದ ಪ್ರತಿಯೊಬ್ಬರ ಜೀವನಕ್ಕೂ ಮಾರ್ಗದರ್ಶಕವಾಗಿದೆ ಎಂದರು.
ರಾಜ್ಯದಲ್ಲಿ ವಾಲ್ಮೀಕಿ ಸಮುದಾಯದ ಮೀಸಲಾತಿಗೆ ಹೋರಾಟ ನಡೆಯುತ್ತಿವೆ. ಶೇ.5 ರಷ್ಟಿರುವ ಮೀಸಲಾತಿಯನ್ನು ಶೇ. 7ಕ್ಕೆ ಏರಿಸಲು ಮನವಿ ಮಾಡಲಾಗುತ್ತಿದೆ. ಇದೇ ಸಂದರ್ಭದಲ್ಲಿ ಕುರುಬ ಸಮುದಾಯ ಸಹ ಪರಿಶಿಷ್ಟ ಪಂಗಡಕ್ಕೆ ಸೇರಿಸಲು ಹೋರಾಟ ಮಾಡುತ್ತಿದೆ ಎಂದರು.
ಸಮುದಾಯದ ಮುಖಂಡರಾದ ಕೃಷ್ಣಪ್ಪ, ರಮೇಶ್, ಆರ್.ಮುನಿಯಪ್ಪ, ಶ್ರೀನಿವಾಸ್ ನಾಯಕ್, ಬಿಜೆಪಿ ಮಹಿಳಾ ಮೋರ್ಚಾ ಅಧ್ಯಕ್ಷೆ ಸುಜಾತಾ ನಾಗರಾಜ್, ಟೌನ್ ಅಧ್ಯಕ್ಷೆ ರಾಧಾ, ನಗರಸಭೆ ಅಧ್ಯಕ್ಷ ಎಸ್. ಅರುಣ್ ಕುಮಾರ್ ಹಾಜರಿದ್ದರು.