

ದೇವದುರ್ಗ: ಉತ್ತಮ ಸೇವೆ ಒದಗಿಸಲು ಆರೋಗ್ಯ ಇಲಾಖೆ ಶ್ರಮಿಸುತ್ತಿದ್ದು, ಸಾರ್ವಜನಿಕರು ವೈದ್ಯರ ಸಲಹೆ-ಸೂಚನೆ ಪಾಲನೆ ಜತಗೆ ಆರೋಗ್ಯ ಸುರಕ್ಷತೆ ಒದಗಿಸುವ ಆಯುಷ್ಮಾನ್‌ಭವ ಯೋಜನೆ ಸದ್ಬಳಕೆ ಮಾಡಿಕೊಳ್ಳಬೇಕು ಎಂದು ನಾಗಡದಿನ್ನಿ ಆರೋಗ್ಯ ಮತ್ತು ಕ್ಷೇಮ ಕೇಂದ್ರದ ಸಮುದಾಯ ಆರೋಗ್ಯಾಧಿಕಾರಿ ಡಾ.ಪ್ರಶಾಂತ ಹೇಳಿದರು.
ತಾಲೂಕಿನ ಯರಮರಸ್ ಗ್ರಾಮದಲ್ಲಿ ಆರೋಗ್ಯ ಇಲಾಖೆಯಿಂದ ಆಯೋಜಿಸಿದ್ದ ಆಯುಷ್ಮಾನ್‌ಭವ ಅಭಿಯಾನ ಹಾಗೂ ಆರೋಗ್ಯ ತಪಾಸಣೆ ಶಿಬಿರದಲ್ಲಿ ಮಂಗಳವಾರ ಮಾತನಾಡಿದರು. ಕೇಂದ್ರ ಮತ್ತು ರಾಜ್ಯ ಸರ್ಕಾರದ ಆರೋಗ್ಯ ಸೇವೆಗಳನ್ನು ಎಲ್ಲರೂ ಪಡೆದುಕೊಳ್ಳಬೇಕು. ಆಯುಷ್ಮಾನ್‌ಭವ ಸಾರ್ವಜನಿಕ ಆರೋಗ್ಯ ಅಭಿಯಾನವಾಗಿದ್ದು, ಆರ್ಥಿಕ ದುರ್ಬಲ ಜನರಿಗಾಗಿ ಸೆ.17ರಿಂದ ಈ ಅಭಿಯಾನ ಪ್ರಾರಂಭವಾಗಿದೆ ಎಂದು ತಿಳಿಸಿದರು.
ಕೆಎಚ್‌ಪಿಟಿಐ ತಾಲೂಕು ಅಧಿಕಾರಿ ಮಹಮ್ಮದ್ ರಫಿ ಮಾತನಾಡಿ, ಸೆ.17ರಿಂದ ಪ್ರತಿ ಮಂಗಳವಾರ ಆರೋಗ್ಯ ತಪಾಸಣೆ ಶಿಬಿರ ಗ್ರಾಮೀಣ ಭಾಗದಲ್ಲಿ ಆಯೋಜಿಸಲಾಗುವುದು. ರಕ್ತದೊತ್ತಡ, ಸಕ್ಕರೆ ಕಾಯಿಲೆ ಸೇರಿ ವಿವಿಧ ರೋಗಗಳ ತಪಾಸಣೆ ನಡೆಸಿ ಚಿಕಿತ್ಸೆ ನೀಡಲಾಗುವುದು. ಗ್ರಾಮೀಣರು ಶಿಬಿರದ ಪ್ರಯೋಜನೆ ಪಡೆದುಕೊಳ್ಳಬೇಕು ಎಂದರು.
ಮಹಿಳಾ ಆರೋಗ್ಯ ಸಹಾಯಕಿ ಸತ್ಯವತಿ, ಆಶಾ ಕಾರ್ಯಕರ್ತೆ ಬಸಲಿಂಗಮ್ಮ, ಅಂಗನವಾಡಿ ಕಾರ್ಯಕರ್ತೆ ಗೌರಮ್ಮ ಇತರರಿದ್ದರು.