ಸಮುದಾಯ ಆರೋಗ್ಯ ಸುಧಾರಣೆ ಮುಖ್ಯ: ಶಿಶು ಅಭಿವೃದ್ಧಿ ಯೋಜನೆಯ ಯೋಜನಾಧಿಕಾರಿ ಬಿ.ಮಂಜುಳಾ

35
Published on

ಮೈಸೂರು: ‘ರಾಷ್ಟ್ರಿಯ ಪೋಷಣ್ ಮಾಹೆ-2024’ ಅಂಗವಾಗಿ ಸುತ್ತ್ತೂರಿನ ಐಸಿಎಆರ್ ಜೆಎಸ್‌ಎಸ್ ಕೃಷಿ ವಿಜ್ಞಾನ ಕೇಂದ್ರದಲ್ಲಿ ವಿವಿಧ ವಯೋಮಾನದವರಿಗೆ ಪೌಷ್ಟಿಕ ಮತ್ತು ಸಮತೋಲನ ಆಹಾರ ಹಾಗೂ ಮಕ್ಕಳಿಗೆ ಪೂರಕ ಆಹಾರದ ಬಗ್ಗೆ ಅಂಗನವಾಡಿ ಕಾರ್ಯಕರ್ತೆಯರಿಗೆ ಇತ್ತೀಚೆಗೆ ತರಬೇತಿ ಆಯೋಜಿಸಲಾಗಿತ್ತು.
ನಂಜನಗೂಡು ತಾಲೂಕು ಬಿಳಿಗೆರೆಯ ಶಿಶು ಅಭಿವೃದ್ಧಿ ಯೋಜನೆಯ ಯೋಜನಾಧಿಕಾರಿ ಬಿ.ಮಂಜುಳಾ ಅವರು ಕಾರ್ಯಕ್ರಮಕ್ಕೆ ಚಾಲನೆ ನೀಡಿ, ಪ್ರಸ್ತುತ ರಾಷ್ಟ್ರೀಯ ಪೋಷಣಾ ಮಾಹೆಯು, ಪೌಷ್ಟಿಕಾಂಶದ ಜ್ಞಾನವನ್ನು ಅಳವಡಿಸಿಕೊಂಡು ಸಕಾರಾತ್ಮಕವಾದ ಬದಲಾವಣೆ ತರುವುದರ ಮೂಲಕ ಸಮುದಾಯದ ಆರೋಗ್ಯ ಮತ್ತು ಪೌಷ್ಟಿಕಾಂಶದ ಸ್ಥಿತಿಯನ್ನು ಸುಧಾರಿಸುವುದು ಮುಖ್ಯ. ಮಕ್ಕಳಲ್ಲಿ, ಗರ್ಭಿಣಿಯರು, ಹಾಲುಣಿಸುವ ತಾಯಂದಿರಲಿ ರಕ್ತಹೀನತೆಯ ಸಮಸ್ಯೆ ಪರಿಹರಿಸಲು ಜಾಗೃತಿ ಮೂಡಿಸಬೇಕು ಎಂದು ಕಾರ್ಯಕರ್ತೆರಿಗೆ ಸಲಹೆ ನೀಡಿದರು.
ಅದೇ ರೀತಿ ಭಾರತದಾದ್ಯಂತ ಆರೋಗ್ಯಕರ ಆಹಾರದ ಆಯ್ಕೆ ಮತ್ತು ಜೀವನಶೈಲಿಯ ಬದಲಾವಣೆಗಳನ್ನು ಉತ್ತೇಜಿಸುವುದು ಯೋಜನೆಯ ಮುಖ್ಯಗುರಿಯಾಗಿದೆ. ಜನರಲ್ಲಿ ಇದರ ಬಗ್ಗೆ ಅರಿವು ಮೂಡಿಸಬೇಕು ಎಂದು ತಿಳಿಸಿದರು.
ಜೆಎಸ್‌ಎಸ್ ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಧ ಡಾ.ಬಿ.ಎನ್.ಜ್ಞಾನೇಶ್ ಮಾತನಾಡಿ, ಕೇಂದ್ರ ಸರ್ಕಾರ ಪೋಷಣ್ ಅಭಿಯಾನದ ಉಪಕ್ರಮದ ಅಡಿಯಲ್ಲಿ ಸೆಪ್ಟೆಂಬರ್ ತಿಂಗಳಲ್ಲಿ ರಾಷ್ಟ್ರೀಯ ಪೋಷಣ್ ಮಾಸ ಎಂದು ಆಚರಿಸಿಕೊಂಡು ಬರುತ್ತಿದೆ. ಈ ತಿಂಗಳ ಅಭಿಯಾನವು ಸರಿಯಾದ ಪೋಷಣೆ ದೈಹಿಕ ಚಟುವಟಿಗೆಯ ಮಹತ್ವದ ಬಗ್ಗೆ ಜಾಗೃತಿ ಮೂಡಿಸುವುದರ ಮೂಲಕ, ವಿಶೇಷವಾಗಿ ಸಾಮಾನ್ಯರಲ್ಲಿ ಅಪೌಷ್ಟಿಕತೆಯನ್ನು ನಿರ್ಮೂಲನೆ ಮಾಡುವುದರ ಮೇಲೆ ಕೇಂದ್ರೀಕರಿಸುತ್ತದೆ ಎಂದು ಹೇಳಿದರು.
ಈ ಮೂಲಕ ಕೃಷಿ ವಿಜ್ಞಾನ ಕೇಂದ್ರವು ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದೆ. ಅನೇಕ ಗ್ರಾಮಗಳಲ್ಲಿನ ಶಾಲೆ ಹಾಗೂ ಅಂಗನವಾಡಿ ಕೇಂದ್ರಗಳಲ್ಲಿ ಪೌಷ್ಟಿಕ ಕೈತೋಟ ಮಾಡುವುದಕ್ಕೆ ತಾಂತ್ರಿಕ ನೆರವು ನೀಡುವುದರ ಮೂಲಕ ಪೌಷ್ಟಿಕ ಆಹಾರ ಪದ್ಧತಿಗಳನ್ನು ಅನುಸರಿಸಬೇಕು ಎಂದರು.
ಕೆವಿಕೆಯ ವಿಜ್ಞಾನಿ ಎಚ್.ವಿ.ದಿವ್ಯಾ, ಉತ್ತಮ ಆಹಾರ ಪದ್ಧತಿಗಳ ಬಗ್ಗೆ ಮಾಹಿತಿ ನಿಡಿದರು. ಅಧ್ಯಕ್ಷತೆ ವಹಿಸಿದ್ದ ಜೆಎಸ್‌ಎಸ್ ಮಹಾವಿದ್ಯಾಪೀಠದ ತೋಟಗಾರಿಕೆ ನಿರ್ದೇಶಕ ಎನ್.ಎಂ.ಶಿವಶಂಕರಪ್ಪ ಮಾತನಾಡಿದರು. ಸಂಪನ್ಮೂಲ ವ್ಯಕ್ತಿಗಳಾದ ಡಾ. ದೀಪಕ್ ಅವರು ವಿವಿಧ ವಯೋಮಾನದವರಿಗೆ ಪೌಷ್ಟಿಕ ಮತ್ತು ಸಮತೋಲನ ಆಹಾರ ಬಗ್ಗೆ ಮಾಹಿತಿ ತಿಳಿಸಿದರು. ಜೆಎಸ್‌ಎಸ್‌ಉನ್ನತ ಶಿಕ್ಷಣ ಮತ್ತು ಸಂಶೋಧನೆ ಅಕಾಡೆಮಿಯ ಸಹಾಯಕ ಪ್ರಾಧ್ಯಾಪಕಿ ಡಾ.ಬಿ.ಎಂ.ವೀಣಾ ಅವರು, ಮಕ್ಕಳ ಪೂರಕ ಆಹಾರ ಹಾಗೂ ರಕ್ತಹೀನತೆ ಬಗ್ಗೆ ಮಾತನಾಡಿದರು.
ಅಂಗನವಾಡಿ ಮೇಲ್ವಿಚಾರಕಿ ಎಸ್.ಸುಧಾ, ಇಲಾಖೆಯ ವಿವಿಧ ಯೋಜನೆಗ ಬಗ್ಗೆ ಮಾಹಿತಿ ನೀಡಿದರು. ಕೆವಿಕೆಯ ಕ್ಷೇತ್ರ ವ್ಯವಸ್ಧಾಪಕ ಗಂಗಪ್ಪ ಹಿಪ್ಪರಗಿ ಅವರು ಸಾಂಪ್ರದಾಯಿಕ ಆಹಾರ ಪದ್ಧತಿ ಬಗ್ಗೆ ತಿಳಿಸಿಕೊಟ್ಟರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net