

ಕುಮಟಾ: ಪಟ್ಟಣದ ಅಧಿದೇವತೆ, ಗ್ರಾಮದೇವಿ ದೇವರಹಕ್ಕಲದ ಶ್ರೀ ಶಾಂತಿಕಾ ಪರಮೇಶ್ವರಿ ಮಂದಿರದ ಪುನನಿರ್ವಿುತ ಸಮುದಾಯ ಭವನದ ಲೋಕಾರ್ಪಣೆ ಹಾಗೂ ಗುರುವಂದನಾ ಕಾರ್ಯಕ್ರಮ ಮೇ 18ರಂದು ಸಂಜೆ 5.30ಕ್ಕೆ ಎಡನೀರು ಮಠದ ಸಚ್ಚಿದಾನಂದ ಭಾರತೀ ಸ್ವಾಮೀಜಿ ಹಾಗೂ ಗಣ್ಯರ ಉಪಸ್ಥಿತಿಯಲ್ಲಿ ನೆರವೇರಲಿದೆ ಎಂದು ಮಂದಿರದ ಆಡಳಿತ ಮೊಕ್ತೇಸರ ಕೃಷ್ಣ ಬಾಬಾ ಪೈ ತಿಳಿಸಿದರು.
ಗ್ರಾಮದೇವಿ ಮಂದಿರದಲ್ಲಿ ಸೋಮವಾರ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಅವರು ಮಾಹಿತಿ ನೀಡಿದರು.
ಹಿಂದೆ 1984ರಲ್ಲಿ ಎಡನೀರು ಮಠಾಧೀಶ ಕೇಶವಾನಂದ ಭಾರತೀ ಸ್ವಾಮಿಗಳಿಂದ ಗ್ರಾಮದೇವಿಯ ಪುನರ್ಪ್ರತಿಷ್ಠೆ ಹಾಗೂ ಕಲ್ಯಾಣ ಮಂಟಪದ ಲೋಕಾರ್ಪಣೆಯಾಗಿತ್ತು. ಅಲ್ಲಿಂದ ನಾಲ್ಕು ದಶಕಗಳ ಕಾಲ ಅದೆಷ್ಟೋ ಕಾರ್ಯಕ್ರಮಗಳಿಗೆ ಸಾಕ್ಷಿಯಾದ ಕಲ್ಯಾಣ ಮಂಟಪವನ್ನು ಇಂದಿನ ಮತ್ತು ಭವಿಷ್ಯದ ಅಗತ್ಯಗಳಿಗೆ ತಕ್ಕಂತೆ ಪುನರ್ನವೀಕರಣ ಕೈಗೊಳ್ಳಲಾಗಿದೆ.
ಮೂಲ ಸೌಕರ್ಯಗಳ ಅಳವಡಿಕೆ, ಆಸನಗಳ ಹೆಚ್ಚಳ, ಸಂಪೂರ್ಣ ಹವಾನಿಯಂತ್ರಿತಗೊಳಿಸಿದ ಹಾಲ್ಗೆ ಎಲ್ಲ ಆಧುನಿಕ ಸೌಕರ್ಯಗಳು, ವಿಶಾಲ ಊಟದ ಹಾಲ್, ಅಡಚಣೆ ರಹಿತ ಸೌರ ಫಲಕ ಬಳಸಿ ಊಟ ಸಿದ್ಧ ಪಡಿಸುವ ಅತ್ಯಾಧುನಿಕ ಅಡುಗೆ ಮನೆ, ಆಧುನಿಕ ಸ್ನಾನ, ಶೌಚಗೃಹಗಳನ್ನು ಅಳವಡಿಸಿ ಶ್ರೀ ಶಾಂತಿಕಾ ಸಮುದಾಯ ಭವನವಾಗಿ ಅಭಿವೃದ್ಧಿಪಡಿಸಲಾಗಿದೆ.
ಮೇ 15ರಿಂದ ಗೋಕರ್ಣದ ವಿದ್ವಾನ್ ನಾರಾಯಣ ಉಮಾಶಿವ ಉಪಾಧ್ಯ, ಗೋಕರ್ಣ ಮಾರ್ಗದರ್ಶನಲ್ಲಿ ಧಾರ್ವಿುಕ ಕಾರ್ಯಕ್ರಮಗಳು ಆರಂಭಗೊಳ್ಳಲಿದ್ದು ರಾಕ್ಷೋಘ್ನ, ಸುದರ್ಶನ, ಅಘೊರಾಸ್ತ್ರ, ಮಹಾಗಣಪತಿ ಅಥರ್ವಶೀರ್ಷ, ಲಕ್ಷ್ಮೀನಾರಾಯಣ ಹೃದಯ, ದುರ್ಗಾಹವನಗಳು ನೆರವೇರಲಿವೆ.
ಮೇ 16ರಂದು ಸಂಜೆ 5ಗಂಟೆಗೆ ಎಡನೀರು ಶ್ರೀಗಳು ಆಗಮಿಸಲಿದ್ದು, ಪ್ರಾರಂಭೋತ್ಸವ, ಗುರುಗಳ ಪಾದಪೂಜೆ ಹಾಗೂ ಆಶೀರ್ವಚನ ನಡೆಯಲಿದೆ. ಮಾಜಿ ಸಂಸದ ನಳೀನಕುಮಾರ ಕಟೀಲು ಉಪಸ್ಥಿತರಿರುತ್ತಾರೆ.
ಮೇ 17ರಂದು ಸಂಜೆ 5-30ಕ್ಕೆ ನೂತನ ಸಭಾಗೃಹದಲ್ಲಿ ಶಿವಪಾರ್ವತಿ ಪೂಜೆ ನಡೆಯಲಿದ್ದು, ಬಳಿಕ ಶ್ರೀಗಿರಿಜಾ ಕಲ್ಯಾಣ ಕಥಾ ನೃತ್ಯರೂಪಕ ಪ್ರದರ್ಶನಗೊಳ್ಳಲಿದೆ.
ಮೇ 18ರಂದು ಮಧ್ಯಾಹ್ನ ಪೂರ್ಣಾಹುತಿ, ಮಹಾಪೂಜೆ ಬಳಿಕ ಮಹಾ ಅನ್ನಸಂತರ್ಪಣೆ ಇರಲಿದೆ. ಸಂಜೆ 5-30ಕ್ಕೆ ಸಮುದಾಯ ಭವನದ ಲೋಕಾರ್ಪಣೆ, ಗುರುವಂದನಾ ಕಾರ್ಯಕ್ರಮ, ಸನ್ಮಾನ, ಆಶೀರ್ವಚನ ಹಾಗು ಭಕ್ತಿಸಂಗೀತ ಕಾರ್ಯಕ್ರಮಗಳು ಇರಲಿದೆ.
ಶಾಸಕ ದಿನಕರ ಶೆಟ್ಟಿ, ಪುರಸಭಾ ಅಧ್ಯಕ್ಷೆ ಸುಮತಿ ಭಟ್ಟ ಇನ್ನಿತರ ಗಣ್ಯರು ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು.
ಕಾರ್ಯಕ್ರಮ ಸಮಿತಿಯ ಎಂ.ಬಿ.ಪೈ, ಎನ್.ಆರ್.ಗಜು, ಜಯದೇವ ಬಳಗಂಡಿ, ಅರುಣ ಮಣಕಿಕರ, ಎಂ.ಟಿ.ನಾಯ್ಕ, ಪ್ರಶಾಂತ ನಾಯ್ಕ, ಅರ್ಚಕರಾದ ರಾಜು ಗುನಗ, ಪ್ರಶಾಂತ ಗುನಗ, ಪ್ರಕಾಶ ಗುನಗ, ಎಂ.ಎಂ.ನಾಯ್ಕ, ಮಹಿಳಾ ಮಂಡಳಿಯ ರಾಜೇಶ್ವರಿ ಗುನಗಾ ಹಾಗೂ ಸದಸ್ಯರು ಇದ್ದರು.