

ಹುಬ್ಬಳ್ಳಿ: ಉಣಕಲ್ಲ್ ಸಾಯಿನಗರ ಮುಖ್ಯ ರಸ್ತೆಯಲ್ಲಿ 80 ಲಕ್ಷ ರೂ. ವೆಚ್ಚದಲ್ಲಿ ನಿರ್ವಿುಸಿದ ನೂತನ ಸಮುದಾಯ ಭವನದ ಉದ್ಘಾಟನಾ ಸಮಾರಂಭ ಅ. 23ರಂದು ಸಂಜೆ 4 ಗಂಟೆಗೆ ಆಯೋಜಿಸಲಾಗಿದೆ ಎಂದು ಪಾಲಿಕೆ ಸದಸ್ಯ ರಾಜಣ್ಣ ಕೊರವಿ ತಿಳಿಸಿದರು.
ಹುಬ್ಬಳ್ಳಿಯಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಉದ್ಘಾಟಿಸುವರು. ಕೇಂದ್ರ ಸಚಿವ ಪ್ರಲ್ಹಾದ ಜೋಶಿ, ಸಭಾಪತಿ ಬಸವರಾಜ ಹೊರಟ್ಟಿ, ಇತರರು ಪಾಲ್ಗೊಳ್ಳುವರು ಎಂದರು.
ಖಾಸಗಿಯವರು ಮಹಾನಗರ ಪಾಲಿಕೆ ಜಾಗವನ್ನು ಕಬಳಿಸಲು ಮುಂದಾಗಿದ್ದರು. ವಾರ್ಡ್ (ನಂ. 36) ಮಹಿಳೆಯರು ಹೋರಾಟ ಮಾಡಿ ಜಾಗವನ್ನು ಉಳಿಸಿಕೊಂಡಿದ್ದಾರೆ. ಇಲ್ಲಿ ಸಮುದಾಯ ಭವನ ನಿರ್ಮಾಣ ಮಾಡಬೇಕೆಂಬದು ಮಹಿಳೆಯರ ಬೇಡಿಕೆಯಾಗಿತ್ತು. ಈಗ ಅದೇ ಜಾಗದಲ್ಲಿ ಪಾಲಿಕೆಯ ಅನುದಾನದಲ್ಲಿ ಸಮುದಾಯ ಭವನ ನಿರ್ವಿುಸಲಾಗಿದೆ. ಅ. 23ರಂದು ಕಿತ್ತೂರ ರಾಣಿ ಚನ್ನಮ್ಮ ವಿಜಯೋತ್ಸವ ದಿನವಾಗಿದ್ದು, ಅಂದೇ ಸಮುದಾಯ ಭವನದ ಉದ್ಘಾಟನಾ ಸಮಾರಂಭ ಇಟ್ಟುಕೊಂಡಿದ್ದೇವೆ ಎಂದು ತಿಳಿಸಿದರು.
ಸಮುದಾಯ ಭವನದ ಕೆಳ ಮಹಡಿಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ವೇದಿಕೆ ನಿರ್ವಿುಸಲಾಗಿದೆ. ಮೇಲ್ಮಮಹಡಿಯಲ್ಲಿ ಜಿಮ್ ಸ್ಥಾಪಿಸಿದ್ದೇವೆ. ಮಾಜಿ ಸಿಎಂ ಜಗದೀಶ ಶೆಟ್ಟರ್ ಸೇರಿ ಶಿಷ್ಟಾಚಾರದ ಪ್ರಕಾರ ಎಲ್ಲರನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಿದ್ದೇವೆ. ಮೊದಲು ನಾವು ಆಹ್ವಾನ ಪತ್ರಿಕೆ ರೆಡಿ ಮಾಡಿದ್ದೇವು. ಬಳಿಕ ಪಾಲಿಕೆಯವರು ಶಿಷ್ಟಾಚಾರದ ಪ್ರಕಾರ ಅಹ್ವಾನ ಪತ್ರಿಕೆ ಮುದ್ರಿಸಿದ್ದಾರೆ. ಹಾಗಾಗಿ ಸಮುದಾಯ ಭವನದ ಉದ್ಘಾಟನಾ ಸಮಾರಂಭದ ಕುರಿತು ಎರಡೆರಡು ಆಹ್ವಾನ ಪತ್ರಿಕೆಗಳಾಗಿವೆ ಎಂದು ಸ್ಪಷ್ಟನೆ ನೀಡಿದರು.
ಸುದ್ದಿಗೋಷ್ಠಿಯಲ್ಲಿ ವಿಶ್ವನಾಥ ಗಿಣಿಮಾವ, ಎಸ್.ಐ. ನೇಕಾರ, ಸಿದ್ದು ಮಾಯಣ್ಣವರ, ಬಸವರಾಜ ಮಾಡಳ್ಳಿ ಇದ್ದರು.