ತಮಿಳು ಸಮಾಜ ಶೈಕ್ಷಣಿಕ ಉನ್ನತಿ ಸಾಧಿಸಲಿ

ckm
Published on

ಚಿಕ್ಕಮಗಳೂರು: ಸಮಾಜದ ಅಂಕುಡೊಂಕು ತಿದ್ದಲು ಜಾತಿ, ವರ್ಗ ಸಂಘರ್ಷಗಳನ್ನು ಮೀರಿ ಸಮಾನತೆಯ ಸಮಾಜ ನಿರ್ವಣಕ್ಕಾಗಿ ಹೋರಾಟ ಮಾಡಿದವರು ಶ್ರೀ ಸುಬ್ರಹ್ಮಣ್ಯ ಭಾರತಿ ಎಂದು ಜಿಪಂ ಮಾಜಿ ಅಧ್ಯಕ್ಷ ಎ.ಎನ್.ಮಹೇಶ್ ಹೇಳಿದರು.

ನಗರದ ಅಂಬೇಡ್ಕರ್ ಭವನದಲ್ಲಿ ಶ್ರೀ ಸುಬ್ರಹ್ಮಣ್ಯ ಭಾರತಿ ಮಹಾಸಭಾ ಗುರುವಾರ ಹಮ್ಮಿಕೊಂಡಿದ್ದ ತಮಿಳು ಸಂಘದ 5ನೇ ಸಮಾವೇಶದಲ್ಲಿ ಮಾತನಾಡಿದರು.

ಸುಬ್ರಹ್ಮಣ್ಯ ಭಾರತಿಗಳ ಹೆಸರಲ್ಲಿ ಸಮುದಾಯದವನ್ನು ಮುನ್ನಡೆಸುತ್ತಿರುವುದು ಉತ್ತಮ ಬೆಳವಣಿಗೆ. ತಮಿಳರು ಎಂದೊಡನೆ ಹಗುರವಾಗಿ ನೋಡಲಾಗುತ್ತದೆ. ಕರ್ನಾಟಕ, ತಮಿಳುನಾಡು ಎಂದು ಭಿನ್ನ ಮಾಡುತ್ತೇವೆ. ಆದರೆ ಕನ್ನಂಬಾಡಿ ಅಣೆಕಟ್ಟು ಸೇರಿ ರಾಜ್ಯದ ಬಹಳಷ್ಟು ಅಭಿವೃದ್ಧಿ ಕೆಲಸಗಳಲ್ಲಿ ಈ ಸಮಾಜದ ಶ್ರಮವಿದೆ ಎಂದರು.

ಕೇವಲ ಭಾಷೆಯಿಂದ ಸಮಾಜವನ್ನು ಅಳೆಯುವುದು ಸಾಧ್ಯವಿಲ್ಲ. ಅಖಂಡ ಭಾರತದಲ್ಲಿ ಭಾಷಾವಾರು ಪ್ರಾಂತ್ಯ ರಚಿಸಿದ ನಂತರ ಯಾರು ಎಲ್ಲೆಲ್ಲಿ ಜೀವಿಸಿದ್ದರೋ ಅಲ್ಲೇ ಉಳಿದು ಪ್ರೀತಿ ವಿಶ್ವಾಸದಿಂದ ಸಹಬಾಳ್ವೆ ಮಾಡುತ್ತಿದ್ದಾರೆ. ಮಕ್ಕಳನ್ನು ಶೈಕ್ಷಣಿಕವಾಗಿ ಮುಂದೆ ತರಲು ಪಾಲಕರು ಶ್ರಮಿಸಬೇಕು. ನೀವು ಮತ್ತು ನಿಮ್ಮ ಸಂಘಟನೆ ಭದ್ರವಾಗಿ ಎಷ್ಟು ವಿಸ್ತಾರವಾದಂತೆ ರಾಜಕಾರಣಿಗಳು ನಿಮ್ಮ ಹಿಂದಿರುತ್ತಾರೆ. ಸಮಾಜದ ಸಮುದಾಯ ಭವನಕ್ಕೆ ರಾಜ್ಯಸಭಾ ಸದಸ್ಯರು ಅಥವಾ ಪಕ್ಷದ ಜನಪ್ರತಿನಿಧಿಗಳ ಮೂಲಕ ಅನುದಾನ ಕೊಡಿಸಲು ಬದ್ಧನಿದ್ದೇನೆ ಎಂದು ಭರವಸೆ ನೀಡಿದರು.

ಕಸ್ತೂರಿ ರಂಗನ್ ವರದಿ ವಿರೋಧಿ ಹೋರಾಟ ಸಮಿತಿ ಪ್ರಧಾನ ಸಂಚಾಲಕ ಎಸ್.ವಿಜಯ್ಕುಮಾರ್ ಮಾತನಾಡಿ, ಕುಮಾರಗಿರಿಯಲ್ಲಿ ದೇವಾಲಯವನ್ನು ಸ್ಥಾಪಿಸಿ ಸರಳ ಸಾಮೂಹಿಕ ವಿವಾಹ ಮಹೋತ್ಸಕ್ಕೆ ಮುಂದಾಗಿರುವುದು ಬಡವರಿಗೆ ಸಹಕಾರಿಯಾಗಿದೆ. ಎಲ್ಲ ಸಮುದಾಯದ ಸಮಾರಂಭಗಳಿಗೂ ಒಂದೇ ವಿಧದ ಶುಲ್ಕದಲ್ಲಿ ಭವನ ನೀಡುತ್ತಿದೆ ಎಂದರೆ ಅದು ತಮಿಳು ಸಮುದಾಯ ಮಾತ್ರ. ದೇವಾಲಯದಲ್ಲಿ ಸಮುದಾಯ ಭವನ ನಿರ್ವಣಕ್ಕೆ ಶಾಸಕ ಸಿ.ಟಿ.ರವಿ ಅವರು ಪ್ರವಾಸೋಧ್ಯಮ ಇಲಾಖೆಯಿಂದ ಒಂದು ಕೋಟಿ ರೂ. ಅನುದಾನ ಬಿಡುಗಡೆ ಮಾಡಿಸಿದ್ದು, ಕೆಲಸ ಆರಂಭಿಸಲಾಗಿದೆ. ಯಾತ್ರಿ ನಿವಾಸ್ ಕಾರ್ಯ ಪೂರ್ಣಗೊಂಡಿದೆ ಎಂದರು.

ಕರೊನಾ ಸೇನಾನಿ ಕಾರ್ತಿಕ್ ಚೆಟ್ಟಿಯಾರ್ ಅವರನ್ನು ಗೌರವಿಸಲಾಯಿತು. ಸಿಡಿಎ ಅಧ್ಯಕ್ಷ ಸಿ.ಆನಂದ್, ಬಿಎಸ್​ಪಿ ಜಿಲ್ಲಾಧ್ಯಕ್ಷ ಕೆ.ಟಿ.ರಾಧಾಕೃಷ್ಣ, ನಗರಸಭಾ ಮಾಜಿ ಅಧ್ಯಕ್ಷ ಮುತ್ತಯ್ಯ, ಸಿಪಿಐ ಜಿಲ್ಲಾ ಕಾರ್ಯದರ್ಶಿ ಎಚ್.ಎಂ.ರೇಣುಕಾರಾಧ್ಯ , ಜಿ.ರಘು, ತಿರುವಳ್ಳವರ್ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಜಿ.ಶಂಕರ್​ಕುಮಾರ್, ಮಾಜಿ ಅಧ್ಯಕ್ಷ ಆರ್.ರವಿ, ಸಿ.ಎನ್.ರಾಮಸ್ವಾಮಿ, ವರದರಾಜ್, ಎಸ್.ಅಣ್ಣವೇಲು, ಕೆ.ಕೃಷ್ಣರಾಜು , ಎನ್.ಶಕ್ತಿವೇಲು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net