

ಕೊಳ್ಳೇಗಾಲ: ಪಟ್ಟಣದ ಬಾಪುನಗರ ಬಡಾವಣೆಯಲ್ಲಿರುವ ಡಾ.ಬಾಬು ಜಗಜೀವನ್ ರಾಮ್ ಸಮುದಾಯ ಭವನದ ಮುಂದುವರಿದ ಕಾಮಗಾರಿಗೆ ಶಾಸಕ ಎ.ಆರ್.ಕೃಷ್ಣಮೂರ್ತಿ ಹಾಗೂ ವಿಧಾನ ಪರಿಷತ್ ಸದಸ್ಯ ಡಾ.ತಿಮ್ಮಯ್ಯ ಸೋಮವಾರ ಚಾಲನೆ ನೀಡಿದರು.
ಶಾಸಕ ಎ.ಆರ್.ಕೃಷ್ಣಮೂರ್ತಿ ಮಾತನಾಡಿ, ಬಾಪುನಗರದಲ್ಲಿ ಸಮುದಾಯ ಭವನಕ್ಕೆ ಈ ಹಿಂದೆ ವಿ.ಶ್ರೀನಿವಾಸಪ್ರಸಾದ್ ಅವರು ಅನುದಾನ ನೀಡಿದ್ದರು. ಆದರೆ, ಭವನ ನಿರ್ಮಾಣ ಪೂರ್ಣಗೊಳಿಸಲು ಅನುದಾನ ಕೊರತೆಯಾಗಿ ಸ್ಥಗಿತಗೊಂಡಿತ್ತು. ಚುನಾವಣಾ ಪೂರ್ವದಲ್ಲಿ ನೀಡಿದ ಭರವಸೆಯಂತೆ ಶಾಸಕರ ಅನುದಾನದಡಿ 10 ಲಕ್ಷ ರೂ. ಹಾಗೂ ವಿಧಾನಪರಿಷತ್ ಸದಸ್ಯರ ಅನುದಾನದಡಿ 5 ಲಕ್ಷ ರೂ. ಸೇರಿ ಒಟ್ಟು 15 ಲಕ್ಷ ರೂ. ಅನುದಾನದಲ್ಲಿ ಭವನ ಪೂರ್ಣ ಕಾಮಗಾರಿಗೆ ಚಾಲನೆ ನೀಡಲಾಗಿದೆ ಎಂದರು.
ಈ ಸಂದರ್ಭದಲ್ಲಿ ನಗರಸಭಾ ಅಧ್ಯಕ್ಷೆ ರೇಖಾ ರಮೇಶ್, ಉಪಾಧ್ಯಕ್ಷ ಎ.ಪಿ.ಶಂಕರ್, ಸದಸ್ಯರಾದ ನಾಗಸಂದ್ರಮ್ಮ, ಬಸ್ತೀಪುರ ಶಾಂತರಾಜು, ಧರಣೇಶ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ತೋಟೇಶ್ ಮತ್ತಿತರಿದ್ದರು.