

ಹೊಸದುರ್ಗ: ಸಾಮಾಜಿಕ, ಆರ್ಥಿಕವಾಗಿ ಹಿಂದುಳಿದಿರುವ ದೇವಾಂಗ ಸಮುದಾಯವು ಶೈಕ್ಷಣಿಕ ಪ್ರಗತಿಯ ಮೂಲಕ ಅಭಿವೃದ್ಧಿಯತ್ತ ಮುನ್ನಡೆಯಬೇಕು ಎಂದು ತಹಸೀಲ್ದಾರ್ ಬಿ.ಆರ್. ಮಂಜುನಾಥ ತಿಳಿಸಿದರು.
ತಾಲೂಕಿನ ಶ್ರೀರಾಂಪುರ ಗ್ರಾಮದಲ್ಲಿ ಭಾನುವಾರ ದೇವಾಂಗ ನೌಕರರ ಹಾಗೂ ತಾಲೂಕು ದೇವಾಂಗ ಸಮುದಾಯ ಆಯೋಜಿಸಿದ್ದ ದೇವಲ ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಪ್ರತಿಭೆಗಳನ್ನು ಪುರಸ್ಕರಿಸಿ ಮಾತನಾಡಿದರು.
ದೇವಲ ಮಹರ್ಷಿಯಿಂದ ಆರಂಭವಾದ ದೇವಾಂಗ ಸಮುದಾಯ ಭಗವಂತನಿಗೆ ವಸ್ತ್ರ ನೇಯ್ದು ಕೊಟ್ಟ ಇತಿಹಾಸ ಇದೆ. ಇಂತಹ ಸಮುದಾಯ ಮುಖ್ಯವಾಹಿನಿಗೆ ಬರಲು ಶಿಕ್ಷಣ ಹಾಗೂ ರಾಜಕೀಯ ಪ್ರಾತಿನಿಧ್ಯ ಅಗತ್ಯವಾಗಿದೆ. ಮಕ್ಕಳಿಗೆ ಉತ್ತಮ ಶಿಕ್ಷಣದ ಅವಕಾಶಗಳನ್ನು ದೊರಕಿಸುವ ಜತೆಗೆ ಪ್ರತಿ ವರ್ಷ ಕನಿಷ್ಠ ಇಬ್ಬರು ಯುಪಿಎಸ್‌ಸಿ ಪರೀಕ್ಷೆಯಲ್ಲಿ ಯಶಸ್ವಿಯಾಗುವಂತಹ ಸ್ಥಿತಿ ನಿರ್ಮಾಣವಾಗಬೇಕು. ಈ ನಿಟ್ಟಿನಲ್ಲಿ ಸಮುದಾಯದ ಹಿರಿಯರು ಚಿಂತಿಸಬೇಕು ಎಂದರು.
ಸಹೋದರ ಸಮುದಾಯಗಳನ್ನು ವಿಶ್ವಾಸಕ್ಕೆ ಪಡೆದು ರಾಜಕೀಯ ಶಕ್ತಿ ಪಡೆಯಬೇಕು. ಅದರಿಂದ ಸಮಾಜದ ಬೆಳವಣಿಗೆಗೆ ಅವಕಾಶವಾಗುತ್ತದೆ. ಸಾಧಕ ಮಕ್ಕಳನ್ನು ಕರೆದು ಗೌರವಿಸುವ ಮೂಲಕ ಅವರ ಜವಾಬ್ದಾರಿ ನೆನಪಿಸುವ ಕೆಲಸ ಮಾಡುತ್ತಿರುವುದು ಶ್ಲಾಘನೀಯವಾದುದು. ಪುರಸ್ಕಾರ ಪಡೆದ ಮಕ್ಕಳು ಉನ್ನತ ಸ್ಥಾನಕ್ಕೆ ಹೋಗಿ ಸಮಾಜಕ್ಕೆ ಶಕ್ತಿಯಾಗಬೇಕು ಎಂದರು.
ಜವಳಿ ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ ಗೋ.ತಿಪ್ಪೇಶ್ ಮಾತನಾಡಿ, ದೇವಾಂಗ ಸಮುದಾಯದ ಮಕ್ಕಳನ್ನು ಬೆನ್ನುತಟ್ಟುವ ಉದ್ದೇಶದಿಂದ 2002 ರಿಂದ ದೇವಲ ಪುರಸ್ಕಾರ ಆರಂಭಿಸಲಾಯಿತು. ದೇವಾಂಗ ನೌಕರರ ಸಂಘ ಯಶಸ್ವಿಯಾಗಿ ಮುನ್ನಡೆಸುತ್ತಿದೆ. ದೇವರ ದಾಸಿಮಯ್ಯ ಅವರ ಬದುಕಿನ ಆದರ್ಶಗಳು ದಾರಿದೀಪವಾಗಬೇಕು ಎಂದು ಕಿವಿಮಾತು ಹೇಳಿದರು.
2021-22ನೇ ಸಾಲಿನ ಎಸ್‌ಎಸ್‌ಎಲ್‌ಸಿ, ಪಿಯುಸಿ ಹಾಗೂ ಯುಪಿಎಸ್‌ಸಿ ಪರೀಕ್ಷೆಗಳಲ್ಲಿ ಸಾಧನೆ ಮಾಡಿದವರನ್ನು ಸನ್ಮಾನಿಸಲಾಯಿತು.
ಬನಶಂಕರಿ ಬ್ಯಾಂಕ್ ಅಧ್ಯಕ್ಷ ಟಿ.ಮಂಜುನಾಥ್, ಸಮುದಾಯದ ಅಧ್ಯಕ್ಷ ಡಿ.ಆರ್.ಗೋವಿಂದರಾಜು, ನೌಕರರ ಸಂಘದ ಅಧ್ಯಕ್ಷ ಚಂದ್ರಶೇಖರ್, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬುರುಡೇಕಟ್ಟೆ ರಾಜೇಶ್, ಎಂ.ಆರ್.ಶಾಂತಪ್ಪ, ಎ.ಆರ್.ಶಮಂತ್, ಉದ್ಯಮಿ ಬಿ.ಬಿ.ರವಿಕುಮಾರ್, ಕಾಚಾಪುರ ರಂಗಪ್ಪ ಇತರರಿದ್ದರು.