

ಬಾಗಲಕೋಟೆ: ನಗರದ ಬಿವಿವಿ ಸಂಘದ ಬಸವೇಶ್ವರ ಇಂಜಿನಿಯರಿಂಗ್ ಕಾಲೇಜು ವಿಶ್ವ ಮಟ್ಟದ ಸೌಲಭ್ಯಗಳನ್ನು ಹೊಂದಿದ್ದು, ಇಲ್ಲಿ ಅಧ್ಯಯನ ಮಾಡಿದ ವಿದ್ಯಾರ್ಥಿಗಳಿಗೆ ಉತ್ತಮ ಭವಿಷ್ಯವಿದೆ ಎಂದು ಅಮೆರಿಕದ ಓಜ್ಲೊ ಕಂಪನಿ ಸಹ ಸಂಸ್ಥಾಪಕ ಮತ್ತು ಸಿಟಿಒ ಹಾಗೂ ಬಿಇಸಿ ಹಳೆಯ ವಿದ್ಯಾರ್ಥಿ ಎನ್.ಬಿ. ಪಾಟೀಲ್ ಹೇಳಿದರು.
ಬಸವೇಶ್ವರ ಇಂಜಿನಿಯರಿಂಗ್ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ಓಪನ್ ಡೇ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಇಂಜಿನಿಯರಿಂಗ್ ಪ್ರವೇಶಾಕಾಂಕ್ಷಿಗಳನ್ನು ಉತ್ತೇಜಿಸಿ ಮಾತನಾಡಿದ ಅವರು, ಈ ಭಾಗದಲ್ಲಿ ಪ್ರತಿಭೆಗಳಿಗೆ ಕೊರತೆ ಇಲ್ಲ. ಇದನ್ನು ಅರಿತ ಬಿವಿವಿ ಸಂಘ ತನ್ನ ಇಂಜಿನಿಯರಿಂಗ್ ಕಾಲೇಜಿನಲ್ಲಿ ವಿಶ್ವಮಟ್ಟದ ಸೌಲಭ್ಯಗಳನ್ನು ಒದಗಿಸಿದೆ. ಇಡಿ ಉತ್ತರ ಕರ್ನಾಟಕ ಸೇರಿದಂತೆ ರಾಜ್ಯಾದ್ಯಂತ ಈ ಮಹಾವಿದ್ಯಾಲಯದ ಹೆಸರು ಮುಂಚೂಣಿಯಲ್ಲಿರುವುದು ಬಾಗಲಕೋಟೆಗೆ ಹೆಮ್ಮೆಯ ವಿಷಯವಾಗಿದೆ. ವಿದ್ಯಾರ್ಥಿಗಳಿಗೆ ಇದೊಂದು ಸ್ವರ್ಗವಿದ್ದಂತೆ ಇಲ್ಲಿ ಅಧ್ಯಯನ ಮಾಡಿದ ವಿದ್ಯಾರ್ಥಿಗಳಿಗೆ ಉತ್ತಮ ಭವಿಷ್ಯವಿದ್ದು, ಉತ್ತಮ ಸಂವಹನ ಕೌಶಲ್ಯದಿಂದ ಉನ್ನತವಾದದ್ದನ್ನು ವಿದ್ಯಾರ್ಥಿಗಳು ಸಾಧಿಸಬೇಕು ಎಂದರು.
ತಾಂತ್ರಿಕ ಶಿಕ್ಷಣ ಸಂಸ್ಥೆಗಳ ನಿರ್ದೇಶಕ ಡಾ. ಆರ್.ಎನ್. ಹೆರಕಲ್, ನಮ್ಮ ಸಂಸ್ಥೆಯಲ್ಲಿರುವ ಕೇಂದ್ರ ಸರ್ಕಾರದ ಅಟಲ್ ಟಿಂಕರಿಂಗ್ ಲ್ಯಾಬ್, ಬಾಷ್ ಲ್ಯಾಬ್ ಮತ್ತು ಐಡಿಯಾ ಲ್ಯಾಬ್ಗಳು ಉನ್ನತ ತಂತ್ರಜ್ಞಾನದ ಸೌಲಭ್ಯಗಳಿಂದ ಕೂಡಿವೆ. ಕಾಲೇಜಿನಲ್ಲಿ ಅತ್ಯಾಧುನಿಕ ಬೋಧನಾ ಮತ್ತು ಕಲಿಕಾ ಸೌಲಭ್ಯಗಳಿವೆ, ಪ್ರತಿಯೊಂದನ್ನೂ ಸದ್ಬಳಕೆ ಮಾಡಿಕೊಂಡು ಉತ್ತಮ ತಂತ್ರಜ್ಞಾನದ ವ್ಯಕ್ತಿತ್ವ ರೂಪಿಸಿಕೊಳ್ಳಲು ವಿದ್ಯಾರ್ಥಿಗಳಿಗೆ ಹೇಳಿದರು.
ಪ್ರಾಚಾರ್ಯರಾದ ಡಾ. ವೀಣಾ ಸೋರಗಾವಿ ಕಾಲೇಜಿನಲ್ಲಿ ಲಭ್ಯವಿರುವ ಎಲ್ಲ ಕೋರ್ಸುಗಳು ಹಾಗೂ ಸೌಲಭ್ಯಗಳ ಕುರಿತು ವಿಸ್ತೃತ ಮಾಹಿತಿ ನೀಡಿದರು. ಅಕಾಡೆಮಿಕ್ ಡೀನ್ ಡಾ .ಪಿ.ಎನ್. ಕುಲಕರ್ಣಿ ಅತಿಥಿಗಳನ್ನು ಸ್ವಾಗತಿಸಿದರು. ಆರ್ ಆ್ಯಂಡ್ ಡಿ ವಿಭಾಗದ ಡೀನ್ ಡಾ. ಮಹಾಬಳೇಶ್ ಎಸ್.ಕೆ, ಡಾ. ಎಸ್.ಎಂ. ಫಾರ್ಶಿ, ಪ್ಲೇಸ್ಮೆಂಟ್ ಡೀನ್ ಎಸ್.ಜಿ. ಕಂಬಾಳಿಮಠ, ಡಾ. ಮಮತಾ ಸತರೆಡ್ಡಿ, ಕಾಲೇಜಿನ ಆಡಳಿತ ಮಂಡಳಿ ಸದಸ್ಯರಾದ ರಾಜೇಂದ್ರ ತಪಶೆಟ್ಟಿ, ಚೆನ್ನಯ್ಯ ಬಳೂಲಮಠ, ವಸತಿ ನಿಲಯಗಳ ಕಾರ್ಯಾಧ್ಯಕ್ಷ ಕುಮಾರಸ್ವಾಮಿ ಹಿರೇಮಠ ಅನೇಕರು ಭಾಗವಹಿಸಿದ್ದರು.