

ಹುಬ್ಬಳ್ಳಿ: ರಾಜ್ಯ ಸರ್ಕಾರ ದ್ವಿಭಾಷಾ ನೀತಿ ಜಾರಿಗೆ ತಂದಲ್ಲಿ ಭಾಷೆಯ ಜ್ಞಾನದ ಕೊರತೆಯಿಂದಾಗಿ ಸಂವಹನದ ಸಮಸ್ಯೆ ಎದುರಾಗುತ್ತದೆ. ಈ ಹಿಂದೆ ಇದ್ದಂತೆ ಯಥಾವತ್ತಾಗಿ ತ್ರಿಭಾಷಾ ಸೂತ್ರವನ್ನು ಮುಂದುವರಿಸಬೇಕೆಂದು ಸಭಾಪತಿ ಬಸವರಾಜ ಹೊರಟ್ಟಿ ಆಗ್ರಹಿಸಿದ್ದಾರೆ.
ಈ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ, ಶಿಕ್ಷಣ ಸಚಿವ ಮಧು ಬಂಗಾರಪ್ಪ, ಸರ್ಕಾರದ ಮುಖ್ಯ ಕಾರ್ಯದರ್ಶಿ ಹಾಗೂ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಪ್ರಧಾನ ಕಾರ್ಯದರ್ಶಿ ಅವರಿಗೆ ಪತ್ರ ಬರೆದಿರುವ ಅವರು, ಭಾಷೆಗಳ ಕಲಿಕೆಯಿಂದ ವಿದ್ಯಾರ್ಥಿಗಳಿಗೆ ಅನುಕೂಲವೇ ಹೊರತು ಅನಾನುಕೂಲವೇನಿಲ್ಲ ಎಂಬುದು ಭಾಷಾ ತಜ್ಞರ ಅಭಿಪ್ರಾಯವಾಗಿದೆ ಎಂದು ತಿಳಿಸಿದ್ದಾರೆ.
ಭಾಷೆ, ಭಾವಗಳ ಅಭಿವ್ಯಕ್ತಿ ಮಾಧ್ಯಮ. ಹೆಚ್ಚು ಹೆಚ್ಚು ಭಾಷೆಗಳನ್ನು ಕಲಿಯುವುದರಿಂದ ಮನುಷ್ಯನ ಮೆದುಳಿನ ಬೆಳವಣಿಗೆ ಅಧಿಕವಾಗುತ್ತದೆ ಎಂಬುದನ್ನು ಮನೋವಿಜ್ಞಾನವು ಪ್ರತಿಪಾದಿಸುತ್ತದೆ. ರಾಷ್ಟ್ರೀಯ ಏಕತೆಯ ಹಿತದೃಷ್ಟಿಯಿಂದ ಹಾಗೂ ಬಹು ಭಾಷೆಗಳ ಕಲಿಕೆ ಉತ್ತೇಜಿಸುವ ಉದ್ದೇಶದಿಂದ ತ್ರಿಭಾಷಾ ಸೂತ್ರವನ್ನು ದೇಶದಲ್ಲಿ 1961ರಿಂದ ಜಾರಿಗೆ ತರಲಾಗಿದೆ ಎಂದು ಹೇಳಿದ್ದಾರೆ.
ತ್ರಿಭಾಷಾ ಸೂತ್ರವು ವಿದ್ಯಾರ್ಥಿಗಳಿಗೆ ವಿವಿಧ ಭಾಷೆಗಳಲ್ಲಿ ಪರಿಣಾಮಕಾರಿಯಾಗಿ ಸಂವಹನ ಮಾಡಲು ಅನುವು ಮಾಡಿಕೊಡುತ್ತದೆ. ವಿದ್ಯಾರ್ಥಿಗಳು ಮುಂದಿನ ಜೀವನದಲ್ಲಿ ಅನ್ಯ ರಾಜ್ಯಗಳಲ್ಲಿ ವೃತ್ತಿನಿರತರಾಗಲು ಹಾಗೂ ವಿದ್ಯಾಭ್ಯಾಸ ಮಾಡಲು ಅನುಕೂಲ ಮಾಡಿಕೊಡುತ್ತದೆ. ಸಂವಿಧಾನ ಪೀಠಿಕೆಯಲ್ಲಿರುವಂತೆ ಭ್ರಾತೃತ್ವ ಹಾಗೂ ಭಾಷಾ ವೈವಿಧ್ಯವನ್ನು ತ್ರಿಭಾಷಾ ಸೂತ್ರವು ಗೌರವಿಸುತ್ತದೆ ಮತ್ತು ಸಂರಕ್ಷಿಸುತ್ತದೆ ಎಂದು ವಿವರಿಸಿದ್ದಾರೆ.
ಹಿಂದಿ ಭಾಷೆ ಜ್ಞಾನದ ಕೊರತೆಯಿಂದಾಗಿ ನಮ್ಮ ರಾಜ್ಯದ ಅನೇಕ ಸಂಸದರಿಗೆ ಭಾಷೆಯ ತೊಂದರೆ ಆಗುತ್ತಿದೆ. ರಾಜ್ಯಾದ್ಯಂತ ಸರ್ಕಾರಿ ಹಾಗೂ ಅನುದಾನಿತ ಪ್ರೌಢಶಾಲೆಗಳಲ್ಲಿ ಕೆಲಸ ನಿರ್ವಹಿಸುತ್ತಿರುವ ಸುಮಾರು 15 ಸಾವಿರ ಶಿಕ್ಷಕರ ಗತಿ ಏನು? ಅನುದಾನ ರಹಿತ ಪ್ರೌಢ ಶಾಲೆಗಳ ಹಿಂದಿ ಶಿಕ್ಷಕರು ಕಡಿಮೆ ವೇತನದಲ್ಲಿ ತಮ್ಮ ಜೀವನ ನಡೆಸುತ್ತಿದ್ದು, ಅವರ ಜೀವನ ಬೀದಿಗೆ ಬರುವಂತಾಗುತ್ತದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
ಮುಂದಿನ ಪೀಳಿಗೆ ಅವಕಾಶಗಳಿಂದ ವಂಚಿತರಾಗಬಾರದು ಎಂದಾದಲ್ಲಿ ಈಗಿರುವ ತ್ರಿಭಾಷಾ ಸೂತ್ರವನ್ನು ಮುಂದುವರಿಸಿಕೊಂಡು ಹೋಗಬೇಕೆಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಈಗಾಗಲೇ ತೃತೀಯ ಭಾಷೆಯ ಬದಲಾಗಿ ಎನ್ಎಸ್ಕ್ಯೂಎಫ್ ಜಾರಿಗೆ ತಂದಿರುವುದರಿಂದ ದೇಶದ ಆಡಳಿತ ಭಾಷೆಯಾದ ಹಿಂದಿಗೆ ಹಿನ್ನಡೆಯುಂಟು ಮಾಡಿದೆ. ಎನ್ಎಸ್ಕ್ಯೂಎಫ್ ವಿಷಯವನ್ನು ಈಗಿರುವ ವಿಷಯಗಳೊಂದಿಗೆ ಪ್ರತ್ಯೇಕ ವಿಷಯವನ್ನಾಗಿ ಬೋಧನೆ ಮಾಡಲು ಅವಕಾಶ ಕೊಟ್ಟರೆ ಮಕ್ಕಳು ಸದುಪಯೋಗ ಪಡೆದುಕೊಳ್ಳುತ್ತಾರೆ ಎಂದು ಹೇಳಿದ್ದಾರೆ.