ಕಾರ್ಮಿಕರ ಹಾದಿ ತಪ್ಪಿಸುತ್ತಿರುವ ಕೋಮುವಾದ : ಕೃಷ್ಣೇಗೌಡ ವಿಷಾದ

26adarshkdga2
Published on

ಮಡಿಕೇರಿ: ಕೋಮುವಾದದ ಮೂಲಕ ಕಾರ್ಮಿಕರ ಹಾದಿ ತಪ್ಪಿಸುವ ಪ್ರಯತ್ನಗಳು ನಡೆಯುತ್ತಿದ್ದು, ಶ್ರಮಿಕ ವರ್ಗದ ನೈಜ ಸಮಸ್ಯೆಗಳನ್ನು ಮರೆ ಮಾಚಲಾಗುತ್ತಿದೆ ಎಂದು ಕರ್ನಾಟಕ ರಾಜ್ಯ ಪ್ರಾಂತ ರೈತ ಸಂಘದ ರಾಜ್ಯ ಮುಖಂಡ ಕೃಷ್ಣೇಗೌಡ ಆರೋಪಿಸಿದರು.


ಸೆಂಟರ್ ಆಫ್ ಇಂಡಿಯನ್ ಟ್ರೇಡ್ ಯೂನಿಯನ್(ಸಿಐಟಿಯು) ಕೊಡಗು ಜಿಲ್ಲಾ ಸಮಿತಿಯ ೧೭ನೇ ಅಖಿಲ ಭಾರತ ಸಮ್ಮೇಳನದ ಭಾಗವಾಗಿ ನಗರದ ಪತ್ರಿಕಾ ಭವನದಲ್ಲಿ ಭಾನುವಾರ ನಡೆದ ‘ಜನಪರ ಚಳವಳಿಗಳು ಹಾಗೂ ಪತ್ರಿಕಾ ಮಾಧ್ಯಮಗಳು’ ಎಂಬ ವಿಚಾರ ಸಂಕಿರಣದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.


ಕೋಮುವಾದವನ್ನಷ್ಟೇ ವಿರೋಧಿಸುವ ಪ್ರಗತಿಪರರ ನಿಲುವು ಸರಿಯಲ್ಲ. ಕೋಮುವಾದದ ಜತೆಗೆ ಉದಾರೀಕರಣವನ್ನೂ ವಿರೋಧಿಸಬೇಕಾಗಿದೆ. ಆಗ ಮಾತ್ರ ಕಾರ್ಮಿಕರ ಹೋರಾಟಕ್ಕೆ ಫಲ ಸಿಗುತ್ತದೆ. ಕೋಮುವಾದ ಮತ್ತು ಉದಾರೀಕರಣ ನೀತಿಯ ವಿರುದ್ಧ ಹೋರಾಟವನ್ನು ತೀವ್ರಗೊಳಿಸುವ ಅನಿವಾರ್ಯತೆ ಎದುರಾಗಿದೆ ಎಂದರು.


ಪ್ರಬಲವಾಗಿರುವ ಕಾರ್ಪೋರೇಟ್ ಜಗತ್ತು ಸರ್ಕಾರ ಮಾತ್ರವಲ್ಲ ಮಾಧ್ಯಮ ರಂಗವನ್ನೂ ನಿಯಂತ್ರಿಸುತ್ತಿದೆ. ಇಂದಿನ ಮಾಧ್ಯಮ ರಂಗವು ಬಹುಪಾಲು ಕಾರ್ಪೋರೇಟ್ ಜಗತ್ತಿನ ಬಿಗಿ ಹಿಡಿತದಲ್ಲಿದೆ. ಜನವಿರೋಧಿ ನೀತಿಗಳನ್ನು ಸರ್ಕಾರ ತಂದಾಗ ಅದರ ವಿರುದ್ಧ ಧ್ವನಿ ಎತ್ತುವ, ಆ ನೀತಿಯ ಮಾರಕ ಪರಿಣಾಮಗಳನ್ನು ಜನರಿಗೆ ತಿಳಿಸಲು ಹಿಂದೇಟು ಹಾಕುವಂತಹ ಸ್ಥಿತಿ ನಿರ್ಮಾಣವಾಗಿದೆ. ಮಾಧ್ಯಮ ರಂಗದಲ್ಲಿ ಕೆಲಸ ಮಾಡುತ್ತಿರುವವರಿಗೂ ಸರಿಯಾದ ವೇತನ ನೀಡುತ್ತಿಲ್ಲ. ಅವರೂ ಅನೇಕ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ ಎಂದು ಟೀಕಿಸಿದರು.


ಪ್ರತಿ ಜಾತಿಗಳೂ ಮೀಸಲಾತಿ ಕೇಳುತ್ತಿರುವುದು ಒಳ್ಳೆಯ ಬೆಳವಣಿಗೆ ಅಲ್ಲ. ಇದು ಒಗಟ್ಟಿನ ಸಮಾಜಕ್ಕೆ ಅಪಾಯಕಾರಿಯಾಗಿ ಪರಿಣಮಿಸಲಿದೆ ಎಂದು ಕೃಷ್ಣೇಗೌಡ ಆತಂಕ ವ್ಯಕ್ತಪಡಿಸಿದರು.


ಸಿಐಟಿಯು ಮಾಜಿ ಅಧ್ಯಕ್ಷ ಐ.ಆರ್.ದುರ್ಗಾಪ್ರಸಾದ್ ಮಾತನಾಡಿ, ಕಾರ್ಮಿಕ ವರ್ಗ ಒಗಟ್ಟಿನಿಂದ ಹೋರಾಟ ನಡೆಸಿದಾಗ ಮಾತ್ರ ಹಕ್ಕುಗಳನ್ನು ಪಡೆಯಬಹುದಾಗಿದೆ. ಕಾರ್ಮಿಕ ಚಳುವಳಿಗಳನ್ನು ಜಾತಿ, ಧರ್ಮದ ಹೆಸರಿನಲ್ಲಿ ವಿಭಜಿಸುವ ಹುನ್ನಾರ ನಡೆಯುತ್ತಿದೆ. ಶ್ರಮಿಕ ವರ್ಗ ಸಂಘಟಿತರಾಗದಿದ್ದರೆ ಎಲ್ಲಾ ಹೋರಾಟಗಳು ವಿಫಲವಾಗಲಿದೆ ಎಂದು ಅಭಿಪ್ರಾಯಪಟ್ಟರು.


ಕನ್ನಡ ಸಾಹಿತ್ಯ ಪರಿಷತ್ತಿನ ನಿಕಟಪೂರ್ವ ಜಿಲ್ಲಾಧ್ಯಕ್ಷ ಟಿ.ಪಿ.ರಮೇಶ್ ಮಾತನಾಡಿ, ಇಂದು ಜನಪರವಾಗಿ ಕಾರ್ಯನಿರ್ವಹಿಸುವ ಪತ್ರಿಕೆಗಳನ್ನು ನಿರ್ವಹಿಸುವುದು ಕಷ್ಟಸಾಧ್ಯವಾಗಿದೆ. ಸಮಾಜದಲ್ಲಿ ಇಂದು ಕೋಮುವಾದ ಬಲಗೊಳ್ಳುತ್ತಿದ್ದು, ದುಡಿಯುವ ವರ್ಗಗಳ ಚಳುವಳಿ ಬಲಹೀನಗೊಳ್ಳುತ್ತಿದೆ. ಹೋರಾಟಗಳಲ್ಲಿ ಹಿಂದೆ ಇದ್ದ ಗಟ್ಟಿತನ ಈಗ ಇಲ್ಲ ಎಂದು ಬೇಸರ ವ್ಯಕ್ತಪಡಿಸಿದರು.


ಸಿಐಟಿಯು ಕೊಡಗು ಜಿಲ್ಲಾಧ್ಯಕ್ಷ ಪಿ.ಆರ್.ಭರತ್ ಮಾತನಾಡಿ, ಬೆಲೆ ಏರಿಕೆ, ಬಂಡವಾಳಶಾಹಿ ಪರ ಆಡಳಿತ ಮತ್ತು ಸರ್ಕಾರದ ಜನವಿರೋಧಿ ನೀತಿಗಳಿಂದಾಗಿ ಕಾರ್ಮಿಕರಿಗೆ ಉಳಿಗಾಲವಿಲ್ಲದ ಪರಿಸ್ಥಿತಿ ಉದ್ಭವಿಸಿದೆ. ಅಖಿಲ ಭಾರತ ಸಮ್ಮೇಳನದ ಭಾಗವಾಗಿ ಕಾರ್ಮಿಕ ಕಾನೂನು ತಿದ್ದುಪಡಿ, ರೈತರ ಆತ್ಮಹತ್ಯೆ, ಬೆಲೆ ಏರಿಕೆಯಂತಹ ವಿಷಯಗಳನ್ನು ಜನರಿಗೆ ಮನವರಿಕೆ ಮಾಡಿಕೊಡುವ ಉದ್ದೇಶದಿಂದ ವಿಚಾರ ಸಂಕಿರಣಗಳನ್ನು ಆಯೋಜಿಸಿ ಜಾಗೃತಿ ಮೂಡಿಸಲಾಗುತ್ತಿದೆ ಎಂದು ಹೇಳಿದರು.


ವಕೀಲ ಕುಂಞ ಅಬ್ದುಲ್ಲ ಮಾತನಾಡಿ, ಸಿಐಟಿಯು ಕೊಡಗು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎ.ಸಿ.ಸಾಬು, ಖಜಾಂಚಿ ಎನ್.ಡಿ.ಕುಟ್ಟಪ್ಪನ್, ಸಹಕಾರ್ಯದರ್ಶಿ ಶಾಜಿ ರಮೇಶ್, ರಾಚಪ್ಪಾಜಿ ಮತ್ತಿತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net