

ಹೊಳೆಹೊನ್ನೂರು: ಶಿವಮೊಗ್ಗ ಸೇರಿದಂತೆ ಗ್ರಾಮೀಣ ಭಾಗದ ವಾತಾವರಣ ಊಹೆಗೂ ನಿಲುಕದಷ್ಟು ಬದಲಾಗಿದೆ. ಬಹುತೇಕ ಕಡೆ ಧರ್ಮ, ಜಾತಿ ಹೆಸರಿನಲ್ಲಿ ಗ್ರಾಮ ಸೌಹಾರ್ದ ಸಂಪೂರ್ಣ ಹದಗೆಟ್ಟಿವೆ ಎಂದು ಎಎಸ್‌ಪಿ ಅನಿಲ್‌ಕುಮಾರ್ ಭೂಮರಡ್ಡಿ ಕಳವಳ ವ್ಯಕ್ತಪಡಿಸಿದರು.
ಹೊಸ ಜಂಬರಘಟ್ಟೆಯಲ್ಲಿ ಖಬರಸ್ಥಾನದಲ್ಲಿ ಅಕೇಶಿಯಾ ಮರದ ಕೊಂಬೆ ಕಡಿದ ಪರಿಣಾಮ ಉಂಟಾಗಿದ್ದ ಕೋಮು ಗಲಾಟೆ ಕುರಿತು ಶನಿವಾರ ಆಯೋಜಿಸಿದ್ದ ಶಾಂತಿಸಭೆಯಲ್ಲಿ ಮಾತನಾಡಿ, ಪುಸ್ತಕ ಹಿಡಿಯಬೇಕಾದ ಮಕ್ಕಳ ಕೈಯಲ್ಲಿ ಚಾಕು, ಮಚ್ಚುಗಳು ಝಳಪಿಸುತ್ತಿವೆ. ಜಿಲ್ಲೆಯಲ್ಲಿ ನಡೆಯುತ್ತಿರುವ ಸಣ್ಣ ಪುಟ್ಟ ಗಲಾಟೆಗಳು ಕೋಮು ಭಾವನೆ ಕೆರಳಿಸುತ್ತಿವೆ. ಪರಿಸ್ಥಿತಿ ಹೀಗೆ ಮುಂದುವರಿದರೆ ಮುಂದಿನ ದಿನಗಳ ಜೀವನ ದುಸ್ತರ ಆಗುವುದರಲ್ಲಿ ಎರಡು ಮಾತಿಲ್ಲ ಎಂದು ಎಚ್ಚರಿಸಿದರು.
ದ್ವೇಷ, ಅಸೂಯೆ ಭಾವನೆಗಳನ್ನು ಮಕ್ಕಳಲ್ಲಿ ಬಿತ್ತುತ್ತಿರುವುದರಿಂದ ಇಂತಹ ಘಟನೆಗಳು ನಡೆಯುತ್ತಿದೆ. ತಂದೆ-ತಾಯಿ ಮನೆಯಲ್ಲಿ ಮಕ್ಕಳ ಮೇಲೆ ಹಿಡಿತ ಹಾಗೂ ನಮ್ಮ ಸಂಸ್ಕೃತಿಯನ್ನು ಧಾರೆ ಎರೆಯುವ ಮೂಲಕ ಕೋಮು ಸೌಹಾರ್ದ ಹುಟ್ಟು ಹಾಕಬಹುದೇ ವಿನಾ ಕಾನೂನಿನಿಂದ ಇದನ್ನು ಸರಿಪಡಿಸಲು ಸಾಧ್ಯವಿಲ್ಲ. ದೇಶ ಶಾಂತಿಯಿಂದ ಇರಬೇಕಾದರೆ ಗ್ರಾಮಗಳಲ್ಲಿ ಸೌಹಾರ್ದ, ಸಹಬಾಳ್ವೆ ನೆಲಸಬೇಕು ಎಂದು ಸಲಹೆ ನೀಡಿದರು.
ಸಾಮಾಜಿಕ ಜಾಲತಾಣಗಳನ್ನು ಒಳ್ಳೆಯ ಉದ್ದೇಶಕ್ಕೆ ಬಳಸಬೇಕು. ಆದರೆ ಸಾಮಾಜಿಕ ಪಿಡುಗುಗಳಿಗೆ ಬಳಸುತ್ತಿರುವುದರಿಂದ ಕೋಮು ಗಲಭೆಗಳು ಹೆಚ್ಚಾಗುತ್ತಿವೆ. ಸಮಾಜದ ಎಲ್ಲ ಹಿರಿಯರು ತಾವು ಅನುಭವಿಸಿರುವ ಒಳ್ಳೆಯ ಜೀವನ ಕ್ರಮವನ್ನು ಮಕ್ಕಳಿಗೆ ತಿಳಿಸಬೇಕು. ಸಮಾಜದಲ್ಲಿ ಯಾವ ಧರ್ಮಗಳು ಅಶಾಂತಿಯನ್ನು ಬಯಸುವುದಿಲ್ಲ. ಜಗಳ, ದೊಂಬಿಗಳಿಗೆ ಹೋಗುವ ಬದಲು ಮಾತುಕತೆಯ ಮುಖಾಂತರ ಗಂಭೀರ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಬಹುದು. ಗ್ರಾಮಗಳಲ್ಲಿ ಆಯಾ ಸಮುದಾಯಗಳ ಮುಖಂಡರ ಮಾತಿಗೆ ಮನ್ನಣೆ ದೊರೆತರೆ ಠಾಣೆ ಮೆಟ್ಟಿಲೇರುವ ಪ್ರಮೇಯ ಉದ್ಭವಿಸುವುದಿಲ್ಲ. ಮಕ್ಕಳ ಮನಸಿನಲ್ಲಿನರುವ ಕೋಮು ವಿಷಬೀಜನ್ನು ಕಿತ್ತೆಸೆದು. ಸಂಸ್ಕೃತಿ ಎಂಬ ಸಸಿಗಳನ್ನು ನಾಟಿ ಮಾಡಬೇಕಿದೆ ಎಂದು ಕಿವಿಮಾತು ಹೇಳಿದರು.
ಸಿಪಿಐ ಲಕ್ಷ್ಮೀಪತಿ, ಪಿಎಸ್‌ಐ ಚಂದ್ರಶೇಖರ್, ಪ್ರಮುಖರಾದ ನಾಗರಾಜ್, ನಿಂಗರಾಜು, ಕೃಷ್ಣಪ್ಪ, ಚಂದ್ರಪ್ಪ, ನಂಜುಂಡಪ್ಪ, ನಜೀರ್ ಸಾಬ್, ಅನ್ವರ್ ಸಾಬ್, ಅಮೀರ್ ಸಾಬ್, ಮುನೀರ್ ಸಾಬ್ ಸೇರಿದಂತೆ ಗ್ರಾಮಸ್ಥರು ಹಾಜರಿದ್ದರು.
ಆರೋಪ-ಪ್ರತ್ಯಾರೋಪಗಳ ಸುರಿಮಳೆ: ಶಾಂತಿಸಭೆಯು ಎರಡು ಸಮುದಾಯಗಳ ಮುಖಂಡರ ಆರೋಪ ಪ್ರತ್ಯಾರೋಪಗಳಿಗೆ ವೇದಿಕೆಯಾಯಿತು. ಗ್ರಾಮದಲ್ಲಿ ಗಲಾಟೆ ನಡೆಸಿ ತಲೆಮರೆಸಿಕೊಂಡಿರುವ ನಾಲ್ವರು ಆರೋಪಿಗಳನ್ನು ಸಭೆಯ ಜಾಗಕ್ಕೆ ಕರೆಸಬೇಕೆಂದು ಕೆಲ ಗ್ರಾಮಸ್ಥರು ಆಗ್ರಹಿಸಿದರು. ಯುವಕರನ್ನು ಹಿಡಿತದಲಿಟ್ಟುಕೊಳ್ಳುವಲ್ಲಿ ಮುಸ್ಲಿಂ ಮುಖಂಡರು ಸಂಪೂರ್ಣವಾಗಿ ವಿಫಲರಾಗಿದ್ದಾರೆ. ಗ್ರಾಮದಲ್ಲಿ ಐದಾರು ಬಾರಿ ಹಿಂದುಗಳ ಮನೆಗಳಿಗೆ ನುಗ್ಗಿ ದಾಂಧಲೆ ನಡೆಸಿ ರಾಜಿ ಪಂಚಾಯಿತಿ ನಡೆದಿರುವ ಪ್ರಕರಣಗಳನ್ನು ಗ್ರಾಮದ ಮುಖಂಡರು ಶಾಂತಿ ಸಭೆಯ ಗಮನಕ್ಕೆ ತಂದರು. ಮುಸ್ಲಿಂರಲ್ಲಿನ ಒಗ್ಗಟು ಅನ್ಯಧರ್ಮೀಯರಿಗೆ ಮುಳುವಾಗುತ್ತಿದ್ದು ಗ್ರಾಮದ ಸಾಮರಸ್ಯ ಹದಗೆಡುತ್ತಿದೆ. ಗಲಾಟೆ ನಡೆಸುವಾಗ ಮುಸ್ಲಿಂ ಮುಖಂಡರು ಯುವಕರನ್ನು ತಡೆಯುವ ಕೆಲಸ ಮಾಡದೆ ಪ್ರಚೋದನೆ ನೀಡುತ್ತಾರೆ. ಮರ ಕಡಿದ ವಿಚಾರದಲ್ಲಿ ಗಲಾಟೆಯಾಗುವಾಗ ಸ್ಥಳಲ್ಲಿದ್ದ ಮುಸ್ಲಿಂ ಮುಖಂಡರು ಹಲ್ಲೆಯನ್ನು ತಡೆಯುವ ಬದಲು ಪ್ರಚೋದನೆ ನೀಡಿದ್ದರಿಂದ ಗಲಭೆಯಲ್ಲಿ ನಮ್ಮೂರಿನ ಮಹಿಳೆಯರಿಗೂ ಗಾಯಾಗಳಾದವು ಎಂದರು ಆರೋಪಿಸಿದರು. ಗ್ರಾಮದಲ್ಲೇ ನೂರಾರು ಮರಗಳಿವೆ. ಅಕ್ಕಪಕ್ಕದ ಜಮೀನುಗಳಲ್ಲಿ ಸಾಕಷ್ಟು ವಿಭಿನ್ನ ಜಾತಿಯ ಮರಗಳಿವೆ. ಉದ್ದೇಶ ಪೂರ್ವಕವಾಗಿಯೇ ವ್ಯಕ್ತಿಗಳಿಬ್ಬರು ಸೇರಿ ಖಬರಸ್ಥಾನದ ಜಾಗದಲ್ಲಿನ ಮರ ಕಡಿದುಕೊಂಡು ಬಂದಿದ್ದರಿಂದ ಗಲಾಟೆಯಾಯಿತು. ನಮ್ಮವರಿಗೆ ನೋವಾದಾಗ, ನೋವು ನೀಡಿದವರ ಮನೆಗೆ ಹೋಗುವುದು ತಪ್ಪೆಂದರೆ ಹೇಗೆ? 5-6 ಬಾರಿ ಗ್ರಾಮಸ್ಥರ ಮನೆಗಳಿಗೆ ನುಗ್ಗಿ ಮುಸ್ಲಿಮರು ಗಲಾಟೆ ಮಾಡಲು ಹಣಕಾಸು ವ್ಯವಹಾರ, ಮೈಗೆ ಕೆಸರು ನೀರು ಸಿಡಿಸಿದ್ದು ಸೇರಿದಂತೆ ಇತ್ಯಾದಿ ಕಾರಣಗಳಿವೆ. ಮರ ಕಡಿದಿದ್ದರಿಂದ ಗಲಭೆಯಾಯಿತು. ಗಲಾಟೆಯಲ್ಲಿ ಕೇವಲ ನಮ್ಮದೆ ತಪ್ಪಿದೆ ಎನ್ನುವುದು ಸರಿಯಲ್ಲ. ನಮ್ಮ ಮಸೀದಿಯಿಂದ ಗ್ರಾಮದ ಯಾವೊಬ್ಬ ಹಿಂದುಗಳಿಗೂ ನಾವು ದಂಡ ವಿಧಿಸಿಲ್ಲ ಎಂದು ಮುಸ್ಲಿಂ ಮುಖಂಡರು ಆರೋಪಗಳಿಗೆ ಪ್ರತ್ಯಾರೋಪ ಮಾಡಿದರು. ಸಭೆಯಲ್ಲಿ ಆವೇಶದಿಂದ ಮಾತನಾಡಿದರೂ ಯಾರೊಬ್ಬರು ಏಕವಚನ ಬಳಸಲಿಲ್ಲ. ಮುಸ್ಲಿಂರು ಅಣ್ಣ, ಕಾಕಾ ಎಂದು ಮಾತು ಆರಂಭಿಸಿದರೆ. ಹಿಂದುಗಳು ಬೈಯಾ, ದಾದಾ ಎಂದು ಸಂಬೋಧಿಸಿದ್ದು ವಿಶೇಷವಾಗಿತ್ತು.