

ಮೈಸೂರು: ಕೋಮುವಾದ ತನ್ನ ಬಾಹುಗಳನ್ನು ಎಲ್ಲ ಕಡೆ ಚಾಚುತ್ತದೆ. ರಾಜಕೀಯ ಭ್ರಮೆಯಿಂದ ಕೂಡಿದ ಅಸತ್ಯವಾದ ಸಮಸ್ಯೆಗಳನ್ನೇ ಕೋಮುವಾದ ಬಳಸಿಕೊಳ್ಳಲಿದೆ ಎಂದು ವಿಮರ್ಶಕ ಪ್ರೊ.ರಾಜೇಂದ್ರ ಚೆನ್ನಿ ವಿಶ್ಲೇಷಿಸಿದರು.
ಪ್ರಗತಿಪರ ಸಂಘಟನೆಗಳ ಒಕ್ಕೂಟದಿಂದ ನಗರ ಕಲಾಮಂದಿರದಲ್ಲಿ ಶನಿವಾರ ಆಯೋಜಿಸಿದ್ದ ಪ.ಮಲ್ಲೇಶ್ 90 ಅಂತಾರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ ಕೋಮುವಾದದ ಸ್ವರೂಪಗಳು ವಿಷಯದ ಕುರಿತು ಅವರು ಮಾತನಾಡಿದರು.
ಡಾ.ಬಿ.ಆರ್.ಅಂಬೇಡ್ಕರ್ ಅವರು ರಾಜಕೀಯ ಬಹುಮತ ಮತ್ತು ಕೋಮುವಾದದ ಬಹುಮತ ಎಂಬ ಎರಡು ವಿಷಯಗಳ ಬಗ್ಗೆ ಪ್ರಸ್ತಾಪ ಮಾಡಿದ್ದು, ರಾಜಕೀಯ ಬಹುಮತ ಸಂದರ್ಭಕ್ಕೆ ತಕ್ಕಂತೆ ಬದಲಾಗಲಿದೆ. ಆದರೆ ಕೋಮು ಅಥವಾ ಧರ್ಮಧಾರಿತ ಬಹುಮತ ಎಂದಿಗೂ ಬದಲಾಗುವುದಿಲ್ಲ. ಧರ್ಮಧಾರಿತ ಬಹುಮತಕ್ಕೆ ಯಾವಾಗಲೂ ಜನ ಬೆಂಬಲ ಇರಲಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಜಾತಿ ವ್ಯವಸ್ಥೆ ಮತ್ತು ಕೋಮುವಾದ ನಮ್ಮ ಅಂತಃಕರಣ ಕೊಂದು ಆರೋಗ್ಯಕರವಾದ ಸಮಾಜವನ್ನು ನಾಶ ಮಾಡುತ್ತಿದೆ. ಈ ಕೋಮುವಾದಕ್ಕೆ ಮೂಲ ಸ್ವರೂಪವಿಲ್ಲ. ಅದು ನಾನಾ ರೀತಿಯ ವೇಷವನ್ನು ಧರಿಸುತ್ತದೆ. ಸಂದರ್ಭ, ಕಾಲ, ಯುಗಧರ್ಮ ಬದಲಾದಂತೆ ಕೋಮುವಾದವು ಬದಲಾಗಲಿದೆ. ಕೋಮುವಾದ ತನ್ನ ಲೆಕ್ಕಾಚಾರಕ್ಕೆ ಅನುಗುಣವಾಗಿ ಧರ್ಮವನ್ನು ಬಳಸಿಕೊಳ್ಳಲಿದೆ ಎಂದರು.
ಕೋಮುವಾದ ರಾಷ್ಟ್ರೀಯತೆಗೆ ಹತ್ತಿರ ಬಂದಿರುವುದು ದುರಂತ. ಯಾರನ್ನು ಒಳಗೊಳ್ಳಬೇಕು ಮತ್ತು ಯಾರನ್ನು ದೇಶದಿಂದ ಹೊರಗಿಡಬೇಕು ಎಂಬ ಕ್ರೂರ ಆಲೋಚನೆ ಮಟ್ಟಕ್ಕೆ ರಾಷ್ಟ್ರೀಯತೆ ಪರಿಕಲ್ಪನೆಯನ್ನು ಇಳಿಸಲಾಗಿದೆ. ಇಂತಹ ಸಂದರ್ಭದಲ್ಲಿ ಅವರು ವ್ಯಕ್ತಿ ಪೂಜೆ ಮತ್ತು ನಾಯಕತ್ವದ ಆರಾಧನೆಯ ಅಪಾಯವನ್ನು ಗುರುತಿಸಿ ವಿರೋಧಿಸಿದ್ದರು ಎಂದರು.
ಇಂದಿನ ಶಿಕ್ಷಣ ವ್ಯವಸ್ಥೆಯಲ್ಲಿ ಭಾರತೀಯ ಮಾದರಿಯ ಶಿಕ್ಷಣದ ಹೆಸರಿನಲ್ಲಿ ಕೋಮುವಾದವನ್ನು ಬಿತ್ತರಿಸಲಾಗುತ್ತಿದೆ. ನಮ್ಮ ಜಾನಪದ ತತ್ವ ಪರಂಪರೆ ಎಲ್ಲವನ್ನೂ ಒಳಗೊಳ್ಳುತ್ತಿತ್ತು. ಈ ಜಾನಪದ ಪರಂಪರೆಯನ್ನು ಹೊರಗಿಟ್ಟು ಕಪೋಲ ಕಲ್ಪಿತವಾದ ಏಕ ವಿಕ ಸಂಸ್ಕೃತಿಯನ್ನು ಅಳವಡಿಸಲಾಗುತ್ತಿದೆ ಎಂದರು.