

ಮಾಸ್ತಿ: ಹಾಲು ಉತ್ಪಾದಕರ ಅನುಕೂಲಕ್ಕಾಗಿ ಹಾಗೂ ಹಾಲಿನ ಗುಣಮಟ್ಟ ಕಾಪಾಡುವ ನಿಟ್ಟಿನಲ್ಲಿ ಸರ್ಕಾರದ ಆದೇಶದಂತೆ ಎಲ್ಲ ಹಾಲು ಉತ್ಪಾದಕರ ಸಹಕಾರ ಸಂಘಗಳಲ್ಲಿ ಕಾಮನ್ ಸಾಫ್ಟವೇರ್ಅನ್ನು ಸ್ಥಾಪನೆ ಮಾಡಲು ತೀಮಾರ್ನಿಸಲಾಗಿದೆ ಎಂದು ಶಾಸಕ, ಕೋಚಿಮುಲ್ ಅಧ್ಯಕ್ಷ ಕೆ.ವೈ.ನಂಜೇಗೌಡ ಹೇಳಿದರು.
ಮಾಲೂರು ತಾಲೂಕು ಮಾಸ್ತಿ ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘದ ಸಭಾಂಗಣದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಪ್ರಸಕ್ತ ಸಾಲಿನ ಸರ್ವ ಸದಸ್ಯರ ವಾರ್ಷಿಕ ಮಹಾ ಸಭೆಯಲ್ಲಿ ಮಾತನಾಡಿದರು.
ಕಾಮನ್ ಸಾಫ್ಟ್ವೇರ್ ಅಳವಡಿಗೆ 1 ಲಕ್ಷ ರೂ. ಖರ್ಚು ಬರಲಿದ್ದು, ಶೇ.50 ಹಣವನ್ನು ಒಕ್ಕೂಟವೇ ಭರಿಸಲಿದೆ. ಉಳಿದ ಶೇ.50 ಸಹಕಾರ ಸಂಘಗಳು ಪಾವತಿ ಮಾಡಬೇಕಾಗುತ್ತದೆ. ಇದರ ಅಳವಡಿಕೆಯಿಂದ ಕಳಪೆ ಹಾಲು ಪೂರೈಕೆ ತಡೆಗಟ್ಟಬಹುದು ಎಂದರು. ಮಾಸ್ತಿ ಗ್ರಾಮದಲ್ಲಿ ಬಹುತೇಕ ರೈತರು ಹೈನುಗಾರಿಕೆಯನ್ನೇ ಮುಖ್ಯ ಕಸುಬನ್ನಾಗಿಸಿಕೊಂಡು ಬದುಕು ಸಾಗಿಸುತ್ತಿದ್ದು ಡೇರಿಗೆ ಗುಣಮಟ್ಟದ ಹಾಲು ಪೂರೈಕೆ ಮಾಡುತ್ತಿದ್ದಾರೆ. ಕೋಲಾರ-& ಚಿಕ್ಕಬಳ್ಳಾಪುರ ಹಾಲು ಒಕ್ಕೂಟದಿಂದ ನಿತ್ಯ 12.80 ಲಕ್ಷ ಲೀಟರ್ ಹಾಲು ಉತ್ಪಾದನೆ ಮಾಡಲಾಗುತ್ತಿದೆ. ತಾಲೂಕಿನ ಹಾಲು ಉತ್ಪಾದಕರ ಸಹಕಾರ ಸಂಘಗಳಿಂದ ಪ್ರತಿದಿನ 1.30 ಲಕ್ಷ ಲೀ. ಹಾಲು ಸಂಗ್ರಹವಾಗುತ್ತಿದೆ. ಎರಡು ಸಾವಿರ ಹಾಲು ಉತ್ಪಾದಕರ ಸಹಕಾರ ಸಂಘಗಳಿಗೆ ಶೇ.100 ಬಿಎಂಸಿಗಳನ್ನು ನೀಡಲಾಗಿದೆ. ಹಾಲು ಉತ್ಪಾದಕರಿಗೆ ವಿಮೆ ಮಾಡಿಸಲಾಗಿದೆ ಎಂದರು.
ಹಾಲು ಉತ್ಪಾದಕರ ಸಂಘಗಳಿಂದ ಬೆಸ್ಕಾಂಗೆ ಹೆಚ್ಚಿನ ಮೊತ್ತವನ್ನು ಪಾವತಿಸುತ್ತಿದ್ದು, ಇದು ಹೊರೆಯಾಗುತ್ತಿದೆ. ಈ ನಿಟ್ಟಿನಲ್ಲಿ ಹಾಲು ಉತ್ಪಾದಕರ ಸಹಕಾರ ಸಂಘಗಳಿಗೆ ಸೋಲಾರ್ ಅಳವಡಿಸಲು ಕ್ರಮ ಕೈಗೊಳ್ಳಲಾಗಿದ್ದು, 12 ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆಯಾಗುತ್ತದೆ. ಇದರಿಂದ ಹೆಚ್ಚಿನ ಹಣ ಉಳಿತಾಯವಾಗಲಿದೆ ಎಂದರು.
ಮಾಸ್ತಿ ಹಾಲು ಉತ್ಪಾದಕರ ಸಹಕಾರ ಸಂಘದ ಸಿಇಒ ಎಸ್.ರಾಜ್ಕುಮಾರ್ ವಾರ್ಷಿಕ ವರದಿ ವಾಚಿಸಿದರು. ಸಂಘಕ್ಕೆ 275 ಮಂದಿ ರೈತರು ಹಾಲು ಪೂರೈಕೆ ಮಾಡುತ್ತಿದ್ದು, ವಾರ್ಷಿಕವಾಗಿ 56.82,759 ಲಕ್ಷ ರೂ. ಹಾಲಿನ ವ್ಯವಹಾರ ನಡೆಸುತ್ತಿದೆ. ನಿವ್ವಳ ಲಾಭ 19,83,400 ಲಕ್ಷ ರೂ.ಗಳಾಗಿದೆ. ಒಟ್ಟಾರೆ 58,15,247 ಲಕ್ಷ ರೂ. ಲಾಭದಲ್ಲಿ ಸಂ ನಡೆಯುತ್ತಿದ್ದು, ಹಾಲು ಉತ್ಪಾದಕರ ಸಹಕಾರ ಸಂಘವು ಜಿಲ್ಲೆಗೆ ಮಾದರಿ ಸಂಘವಾಗಿದೆ ಎಂದರು.
ಗ್ರಾಪಂ ಅಧ್ಯಕ್ಷೆ ಲಕ್ಷ್ಮಮ್ಮ ಆಂಜಿನಪ್ಪ, ಉಪಾಧ್ಯಕ್ಷ ಎಂ.ವಿ.ಚೇತನ್ಕುಮಾರ್, ಎಪಿಎಂಸಿ ಮಾಜಿ ಸದಸ್ಯ ಸಬ್ದರ್ ಬೇಗ್, ಶಿಬಿರ ಕಚೇರಿಯ ಉಪ ವ್ಯವಸ್ಥಾಪಕ ಡಾ.ಎಂ.ಬಿ.ಲೋಹಿತ್, ವಿಸ್ತರಣಾಧಿಕಾರಿ ಉಲ್ಲೂರಪ್ಪ, ಗ್ರಾಪಂ ಸದಸ್ಯರಾದ ಎ.ವಿ.ರಾಜಪ್ಪ, ಶೌಕತ್ಉಲ್ಲಾಬೇಗ್, ನಾಗರಾಜ್, ಫಯಾಜ್ ಅಹ್ಮದ್, ಪುಟ್ಟಪ್ಪ, ಸಂಘದ ನಿರ್ದೇಶಕರಾದ ಅಮ್ಜದ್, ಚಿಕ್ಕಕೊಳಂದಪ್ಪ, ಜಿ.ಎಂ.ನಾರಾಯಣಗೌಡ, ರಾಮನಾಥರಾವ್, ಶ್ಯಾಮಲಾ ಬಾಯಿ, ಮಂಜುಳಾ, ಹಾಲು ಪರೀಕ್ಷಕ ಕೆ.ಎಂ.ಅಪ್ಪಯ್ಯ, ಗುಮಾಸ್ತ ಆರ್.ಕಾರ್ತಿಕ್, ಸಹಾಯಕರಾದ ಮುನಿರಾಜು, ಎಂ.ವಿ.ಮುನಿಯಪ್ಪ, ಕೆ.ಸುಧಾಕರ್ ಇದ್ದರು.