

ಸೌಮ್ಯಾ ಆರ್.ಉದನೆ, ಮಂಗಳೂರು
ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳ ಜಾರಿ ಬೆನ್ನಲ್ಲೇ ರೇಷನ್ ಕಾರ್ಡ್ ತಿದ್ದುಪಡಿ ನಡೆಯುತ್ತಿದ್ದು ಸರ್ವರ್ ಬ್ಯುಸಿ, ಜನರಿಗೆ ಮಾಹಿತಿಯ ಕೊರತೆಯ ಕಾರಣದಿಂದ ಜಂಜಾಟ ನಿರಂತರವಾಗಿದೆ.
ಗೃಹಲಕ್ಷ್ಮೀ ಯೋಜನೆಯ ನೋಂದಣಿಗಾಗಿ ಜನ ತಮ್ಮ ಪಡಿತರ ಚೀಟಿಯಲ್ಲಿನ ತಪ್ಪುಗಳನ್ನು ಸರಿಪಡಿಸಲು ಮತ್ತು ಮನೆಯ ಯಜಮಾನಿಯ ಹೆಸರು ಬದಲಾವಣೆಗಾಗಿ ಕಚೇರಿಗಳಿಗೆ ಅಲೆದಾಡುತ್ತಿದ್ದಾರೆ. ಆದರೆ, ಸಮರ್ಪಕ ಮಾಹಿತಿಯ ಕೊರತೆಯಿಂದ ಸರ್ಕಾರಿ ಕಚೇರಿಗಳಲ್ಲಿ ಸೂಚಿಸಿರುವ ದಿನಾಂಕದೊಳಗೆ ತಿದ್ದುಪಡಿ ಕಾರ್ಯ ಕಷ್ಟವಾಗಿದೆ.
ಆಗಸ್ಟ್ 16ರಂದು ಸರ್ಕಾರದ ರೇಷನ್ ತಿದ್ದುಪಡಿ ಕಾರ್ಯ ಮುಕ್ತಾಯಗೊಂಡಿದ್ದು, ಜನರ ವಿನಂತಿ ಮೇರೆಗೆ ಎರಡು ಬಾರಿ ವಿಸ್ತರಿಸಲಾಗಿತ್ತು. ಆದರೆ ಮಾಹಿತಿ ಕೊರತೆ ಮತ್ತು ನಿಖರ ದಾಖಲೆಗಳು ಇಲ್ಲದ ಕಾರಣ ಸರ್ಕಾರ ಅನುಮೋದಿಸಿರುವ ಕೇಂದ್ರಗಳಲ್ಲಿ ಗೊಂದಲ ಉಂಟಾಗುತ್ತಿದೆ. ದೂರದ ಊರುಗಳಿಂದ ಬೆಳಗಿನ ಜಾವ ಬಾಡಿಗೆಗೆ ರಿಕ್ಷಾ ಮಾಡಿಕೊಂಡು ಬರುವವರು, ಹಿರಿಯರು, ಪುರುಷರು, ಮಹಿಳೆಯರು ಅಧಿಕಾರಿಗಳ ಕಚೇರಿಗೆ ನಿಗದಿತ ಗಂಟೆಗೆ ಬರುತ್ತಿದ್ದರೂ, ಕೆಲವು ಕಡೆ ಅಧಿಕಾರಿಗಳೇ ಸರಿಯಾದ ಸಮಯಕ್ಕೆ ಬಾರದಿರುವುದರಿಂದ ನಿಗದಿತ ಸಮಯದಲ್ಲಿ ಕೆಲಸ ಆಗುತ್ತಿಲ್ಲ.
ಒಂದೇ ಆ್ಯಪ್ ಅಡಿಯಲ್ಲಿ ಎಲ್ಲ ತಿದ್ದುಪಡಿ ಕಾರ್ಯ ನಡೆಯುತ್ತಿದ್ದು, ಇದರಿಂದ ಎಲ್ಲವನ್ನೂ ತಿದ್ದುಪಡಿ ಮಾಡಲು ಕಷ್ಟವಾಗಿದೆ. ಇದಕ್ಕೆ ಬೇರೆ ಬೇರೆ ಆ್ಯಪ್ ಮೂಲಕ ಎಲ್ಲ ತಿದ್ದುಪಡಿ ಒಟ್ಟಿಗೆ ಮುಗಿಸಿದರೆ ಜನ ಪದೇಪದೆ ಕಚೇರಿಗಳಿಗೆ ಅಲೆದಾಡುವುದನ್ನು ತಪ್ಪಿಸಬಹುದು ಎಂದು ರೇಷನ್ ಕಾರ್ಡ್ ತಿದ್ದುಪಡಿಗಾಗಿ ಬಹಳ ದಿನಗಳಿಂದ ಓಡಾಡುತ್ತಿರುವ ಕೆಲವರು ಅಭಿಪ್ರಾಯಪಟ್ಟಿದ್ದಾರೆ. ಗ್ರಾಮೀಣ ಭಾಗದ ಜನ ಗಂಟೆಗಟ್ಟಲೆ ಸಾಲುಗಟ್ಟಿ ನಿಂತರೂ ನಿಗದಿತ ಕಚೇರಿಗಳಲ್ಲಿ ತಿದ್ದುಪಡಿ ಕಾರ್ಯ ನಿಧಾನಗತಿಯಲ್ಲಿ ಸಾಗುತ್ತಿದೆ. ಗ್ರಾಮೀಣ ಮಟ್ಟದಲ್ಲಿ ಒಂದೇ ಕೇಂದ್ರದ ಅಡಿಯಲ್ಲಿ ಎಲ್ಲ ತಿದ್ದುಪಡಿ ವ್ಯವಸ್ಥೆ ಕಲ್ಪಿಸಬೇಕೆಂದೂ ಬೇಡಿಕೆ ಇದೆ.
ಒಂದು ಬಾರಿ ವಿಸ್ತರಣೆಯಾಗಿದ್ದ ತಿದ್ದುಪಡಿ ಕಾರ್ಯದ ಅವಧಿಯನ್ನು ಆಗಸ್ಟ್ 19ರ ತನಕ ಎರಡನೇ ಬಾರಿ ವಿಸ್ತರಿಸಲಾಗಿತ್ತು. ಆಗಲೂ ಸಮಸ್ಯೆ ಬಗೆಹರಿಯದ ಕಾರಣ ಆ.23ರಂದು ವಿಶೇಷ ತಿದ್ದುಪಡಿ ಎಂದು ನಿಗದಿ ಪಡಿಸಲಾಗಿತ್ತು. ಆ ಅವಧಿ ಬುಧವಾರಕ್ಕೆ ಮುಗಿದಿದ್ದು ಈ ಅವಧಿಯಲ್ಲೂ ಹೆಚ್ಚಿನ ಜನರಿಗೆ ತಿದ್ದುಪಡಿ ಮಾಡಲು ಸಾಧ್ಯವಾಗಿಲ್ಲ. ಈಗ ಮತ್ತೊಮ್ಮೆ ದಿನಾಂಕ ವಿಸ್ತರಿಸಲಾಗಿದ್ದು, ಸೆ.1ರಿಂದ 10ರ ತನಕ ತಿದ್ದುಪಡಿಗೆ ಅವಕಾಶ ನೀಡಲಾಗಿದೆ.
ಸೈಬರ್ ಸರ್ಕಾರಿ ಕೇಂದ್ರಗಳಲ್ಲಿ ಸರ್ವರ್ ಬಿಜಿಯಾಗಿದ್ದು ರೇಷನ್ ಕಾರ್ಡ್ ತಿದ್ದುಪಡಿಗೆ ವಾರ, ತಿಂಗಳುಗಟ್ಟಲೆ ಕಾದರೂ ತಿದ್ದುಪಡಿ ಆಗುತ್ತಿಲ್ಲ. ಇದಕ್ಕೆ ಬೇಕಾದ ಪೂರಕ ಮಾಹಿತಿಯೂ ನಮಗೆ ಸರಿಯಾಗಿ ಸಿಗುತ್ತಿಲ್ಲ. ಸರ್ಕಾರ ನಿಗದಿಪಡಿಸಿದ ದಿನಾಂಕದೊಳಗೆ ಪೂರ್ಣ ಪ್ರಮಾಣದಲ್ಲಿ ತಿದ್ದುಪಡಿ ಮಾಡುವುದು ಕಷ್ಟ. ಈ ಬಗ್ಗೆ ಜಿಲ್ಲಾಧಿಕಾರಿಗಳು, ಜನಪ್ರತಿನಿಧಿಗಳು ಗಮನ ಹರಿಸಬೇಕು.-ಹೆಸರು ಹೇಳಲಿಚ್ಛಿಸದ ಫಲಾನುಭವಿಕಾವೂರು ತುಂಬ ಜನ ಏಕಕಾಲದಲ್ಲಿ ಪಡಿತರ ಚೀಟಿ ತಿದ್ದುಪಡಿಗೆ ಪ್ರಯತ್ನಿಸುತ್ತಿರುವ ಕಾರಣ ಸರ್ವರ್ ಸಮಸ್ಯೆ ಸ್ವಲ್ಪ ಇದೆ. ತಿದ್ದುಪಡಿ ಮಾಡಿಕೊಳ್ಳಲು ನಿರಂತರ ಪ್ರಯತ್ನಿಸುತ್ತಿರುವವರಿಗೆ ಕಾಲಾವಕಾಶ ದೊರೆಯಲಿದೆ.-ಡಾ.ಹೇಮಲತಾಉಪನಿರ್ದೇಶಕರು, ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ (ದ.ಕ.) https://www.vijayavani.net/kaniyooru-vijnapana-patra https://www.vijayavani.net/bale-gone-vismaya