ವಿಶ್ವ ಕೊಂಕಣಿ ಕೇಂದ್ರದಲ್ಲಿ ಮಹಾವೀರ್ ಚಕ್ರ ಪುರಸ್ಕೃತ ಕೆ.ಪಿ.ಗೋಪಾಲ ರಾವ್ ಭಾವಚಿತ್ರ ಅನಾವರಣ

konkani 1
Published on

ಮಂಗಳೂರು: ನಗರದ ವಿಶ್ವಕೊಂಕಣಿ ಕೇಂದ್ರದ ಹಾಲ್ ಆಫ್‌ ಫೇಮ್‌ನಲ್ಲಿ ಮಹಾವೀರ್ ಚಕ್ರ ಪುರಸ್ಕೃತ ಕಮಾಡೋರ್ ಕೆ.ಪಿ.ಗೋಪಾಲ ರಾವ್ ಭಾವಚಿತ್ರವನ್ನು ಶನಿವಾರ ಅನಾವರಣಗೊಳಿಸಲಾಯಿತು.


ಭಾವಚಿತ್ರ ಅನಾವರಣಗೊಳಿಸಿ ಮಾತನಾಡಿದ ಎನ್‌ಎಬಿಎ್ಐಡಿ ಅಧ್ಯಕ್ಷ ಕೆ.ವಿ.ಕಾಮತ್, ಮಹಾನ್ ವ್ಯಕ್ತಿಗಳ ಜೀವನ ಚರಿತ್ರೆಯನ್ನು ಮುಂದಿನ ಪೀಳಿಗೆಯ ಜನರಿಗೆ ತಲುಪಿಸುವುದು ಮುಖ್ಯ. ಕೆ.ಪಿ.ಗೋಪಾಲ ರಾವ್ ಅವರ ಭಾವಚಿತ್ರ ಅವರ ಸಾಧನೆಯ ಬಗ್ಗೆ ತಿಳಿಯಲು ನೋಡುಗರಿಗೆ ಖಂಡಿತವಾಗಿಯೂ ಪ್ರೇರಣೆ ನೀಡುತ್ತದೆ ಎಂದು ಹೇಳಿದರು.


ಕೊಂಕಣಿ ಸರದಾರ ಬಸ್ತಿ ವಾಮನ ಶೆಣೈ ದೂರದೃಷ್ಟಿತ್ವದಲ್ಲಿ ರೂಪುಗೊಂಡ ವಿಶ್ವ ಕೊಂಕಣಿ ಕೇಂದ್ರ ಕೊಂಕಣಿ ಭಾಷೆ, ಸಾಹಿತ್ಯ ಹಾಗೂ ಸಮುದಾಯಕ್ಕೆ ಸಲ್ಲಿಸುತ್ತಿರುವ ಸೇವೆ ಅನನ್ಯವಾದುದು. ಮಕ್ಕಳು, ಹೊಸ ಪೀಳಿಗೆಯ ಜನರನ್ನು ಗಮನದಲ್ಲಿಟ್ಟುಕೊಂಡು ಕೇಂದ್ರ ಆಯೋಜಿಸುತ್ತಿರುವ ಕಾರ್ಯಕ್ರಮಗಳು ಎಲ್ಲರಿಗೂ ಮಾದರಿ ಎಂದು ಶ್ಲಾಘಿಸಿದರು.


ಕೆ.ಪಿ.ಗೋಪಾಲ ರಾವ್ ಅವರ ಪುತ್ರಿ ಕೆ.ಪಿ.ಸವಿತಾ ರಾವ್ ಅವರು ತಂದೆಯವರ ಭಾವಚಿತ್ರವನ್ನು ವಿಶ್ವಕೊಂಕಣಿ ಕೇಂದ್ರದಲ್ಲಿ ಅನಾವರಣಗೊಳಿಸಿ ಗೌರವಾರ್ಪಣೆ ಸಲ್ಲಿಸಿರುವುದಕ್ಕೆ ಕೃತಜ್ಞತೆ ವ್ಯಕ್ತಪಡಿಸಿದರು.


ಪ್ರಸ್ತಾವಿಸಿದ ವಿಶ್ವಕೊಂಕಣಿ ಕೇಂದ್ರದ ಅಧ್ಯಕ್ಷ ನಂದಗೋಪಾಲ ಶೆಣೈ, ಕೆ.ಪಿ.ಗೋಪಾಲ ರಾವ್ ನೌಕಾದಳದಲ್ಲಿ ಅಪ್ರತಿಮ ಸೇವೆ ಸಲ್ಲಿಸಿ ವಿಶಿಷ್ಟ ಸೇವಾ ಪದಕ, ಸೇನೆಯಲ್ಲಿ ಎರಡನೇ ಅತ್ಯುನ್ನತ ಪುರಸ್ಕಾರ ಮಹಾವೀರ್ ಚಕ್ರ ಪುರಸ್ಕಾರ ಪುರಸ್ಕರತ ಸಾಧಕರಾಗಿದ್ದಾರೆ ಎಂದು ಸ್ಮರಿಸಿದರು.


ವಿಶ್ವಕೊಂಕಣಿ ಕೇಂದ್ರದ ಉಪಾಧ್ಯಕ್ಷ ಗಿಲ್ಬರ್ಟ್ ಡಿಸೋಜ, ಕಾರ್ಯದರ್ಶಿ ಗಿರಿಧರ್ ಕಾಮತ್, ಕೋಶಾಧಿಕಾರಿ ಬಿ.ಆರ್.ಭಟ್, ಟ್ರಸ್ಟಿಗಳಾದಡಾ.ಲೆ.ಮೋಹನ್ ಪೈ, ರಮೇಶ್ ನಾಯಕ್, ಪಯ್ಯನ್ನೂರು ರಮೇಶ್ ಪೈಶಕುಂತಳಾ ಕಿಣಿ, ವಾಥಿಕಾ ಕಾಮತ್, ಕೆ.ಬಿ.ಖಾರ್ವಿ, ವಿಲಿಯಂ ಡಿಸೋಜ, ಕಮಾಡೋರ್ ಕೆ.ಪಿ.ಗೋಪಾಲ ರಾವ್ ಅವರ ಕುಟುಂಬದ ಸದಸ್ಯರು ಉಪಸ್ಥಿತರಿದ್ದರು.
ಸಿಇಒ ಗುರುದತ್ ಬಂಟ್ವಾಳ್‌ಕಾರ್ ಕಾರ್ಯಕ್ರಮ ನಿರೂಪಿಸಿದರು. ಸ್ನೇಹಾ ಶೆಣೈ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net