

ಹುಲಸೂರು: ಅಧಿಕಾರಿಗಳು ಸರ್ಕಾರದ ಗ್ಯಾರಂಟಿ ಯೋಜನೆಗಳ ಲಾಭ ಜನರಿಗೆ ತಲುಪಿಸುವ ನಿಟ್ಟಿನಲ್ಲಿ ಶ್ರಮಿಸುವಂತೆ ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ತಾಲೂಕು ಅಧ್ಯಕ್ಷ ಸಿದ್ರಾಮ ಕಾಮಣ್ಣ ತಾಕೀತು ಮಾಡಿದರು.
ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಶುಕ್ರವಾರ ಸಮಿತಿಯ ಪ್ರಗತಿ ಪರಿಶೀಲನಾ ಸಭೆ ನಡೆಸಿದ ಅವರು, ಬಸವಕಲ್ಯಾಣ, ಬೇಲೂರು, ಹುಲಸೂರು, ಮಾರ್ಗವಾಗಿ ಭಾಲ್ಕಿ, ಬೀದರ್‌ಗೆ ತೆರಳುವ ಬಸ್‌ಗಳು ಕಡಿಮೆ ಇದ್ದುದರಿಂದ ವಿದ್ಯಾರ್ಥಿ ಮತ್ತು ಪ್ರಯಾಣಿಕರಿಗೆ ತೊಂದರೆಯಾಗುತ್ತಿದೆ. ಆದಷ್ಟು ಬೇಗ ಪ್ರತ್ಯೇಕವಾಗಿ ಬಸವಕಲ್ಯಾಣದಿಂದ ಹುಲಸೂರು, ಸಸ್ತಾಪುರ ಬಂಗ್ಲಾಗೆ ಹೊಸ ಬಸ್‌ಗಳನ್ನು ಓಡಿಸಬೇಕು ಎಂದರು.
ಎಂ.ಕೆ. ಪಾರಶೇಟ್ಟಿ ಸರ್ಕಾರಿ ಡಿಗ್ರಿ ಕಾಲೇಜು ಹತ್ತಿರ ಬಸ್ ನಿಲುಗಡೆ ಅನುಮತಿ ಇದ್ದರೂ ಕೆಲ ಚಾಲಕರು ನಿಲ್ಲಿಸುತ್ತಿಲ್ಲ ಎಂದು ಸಾರ್ವಜನಿಕರು ಗೋಳು ತೋಡಿಕೊಂಡರು. ಅನುಮತಿ ಇದ್ದರೂ ಏಕೆ ಬಸ್‌ಗಳನ್ನು ನಿಲ್ಲಿಸುತ್ತಿಲ್ಲ ಎಂದು ಸಭೆಯಲ್ಲಿದ್ದ ಕೆಕೆಆರ್‌ಟಿಸಿ ಘಟಕ ವ್ಯವಸ್ಥಾಪಕರನ್ನು ಪ್ರಶ್ನಿಸಿದರು. ಆದಷ್ಟು ಬೇಗ ಸಮಸ್ಯೆ ಬಗೆಹರಿಸುವುದಾಗಿ ವ್ಯವಸ್ಥಾಪಕರು ಹೇಳಿದರು.
ಗೃಹಲಕ್ಷ್ಮಿಅಡಿ ಕೆಲ ಫಲಾನುಭವಿಗಳಿಗೆ ಹಣ ಬರುತ್ತಿಲ್ಲ. ಏನೇ ಸಮಸ್ಯೆ ಇದ್ದರೂ ಶೀಘ್ರ ಬಗೆಹರಿಸಿ ಫಲಾನುಭವಿಗಳ ಖಾತೆಗೆ ಹಣ ಜಮೆ ಮಾಡಬೇಕು ಎಂದು ಸಿಡಿಪಿಒ ಗೌತಮ ಶಿಂದೆ ಅವರಿಗೆ ಸೂಚಿಸಿದರು.
ಗೃಹಜ್ಯೋತಿ, ಗೃಹಲಕ್ಷ್ಮಿ, ಶಕ್ತಿ, ಅನ್ನಭಾಗ್ಯ, ಯುವನಿಧಿ ಯೋಜನೆಗಳ ಕುರಿತು ಸಂಬಂಧಿತ ಅಧಿಕಾರಿಗಳು ವರದಿ ಸಲ್ಲಿಸಿದರು.
ತಹಸೀಲ್ದಾರ್ ಶಿವಾನಂದ ಮೇತ್ರೆ, ತಾಪಂ ಇಒ ಮಹಾದೇವ ಬಾಬಳಗಿ, ಸಾರಿಗೆ ಇಲಾಖೆ ವ್ಯವಸ್ಥಾಪಕ ನೈಯಮಸಾಬ್, ತಾಪಂ ಎಡಿ ಮಹಾದೇವ ಜಮ್ಮು, ಗ್ಯಾರಂಟಿ ಯೋಜನೆಗಳ ಅನುಷ್ಠಾನ ತಾಲೂಕು ಸಮಿತಿ ಸದಸ್ಯರಾದ ತ್ರಿಬುಂಕರಾವ ಜಿವಾಯಿ, ವೆಂಕಟೇಶ ಗುತ್ತೇದಾರ್, ವಿನಾಯಕ ಪವಾರ್, ಈಶ್ವರ ಮೇತ್ರೆ, ಶಿವಕುಮಾರ ಕೋಳಿ, ಪ್ರೀತಮ ಜಾಧವ್, ಮಹೇಶ ಪಾಟೀಲ್, ಭಾಗವತ ಪುಂಡೆ, ಸುನೀಲ ಪಾಟೀಲ್ ಇತರರಿದ್ದರು.