

ಲಕ್ಕೂರು: ಶ್ರೀ ಪ್ರಸನ್ನ ವೆಂಕಟರಮಣಸ್ವಾಮಿ ದೇವಾಲಯದಲ್ಲಿ ಪ್ರಮುಖ ಹಬ್ಬ ಹರಿದಿನಗಳು ಸೇರಿ ವಿಶೇಷ ದಿನಗಳಲ್ಲಿ ಸಮಿತಿಯ ಸದಸ್ಯರು ತಪ್ಪದೇ ಹಾಜರಾಗಿ ದೇವಾಲಯದ ಅಭಿವೃದ್ಧಿಗೆ ಸಹಕಾರ ನೀಡಬೇಕು ಎಂದು ತಾಲೂಕು ಪಂಚಾಯಿತಿ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ವಿ.ನಾಗೇಶ್ ಹೇಳಿದರು.
ಚಿಕ್ಕತಿರುಪತಿ ಗ್ರಾಮದ ಶ್ರೀ ಪ್ರಸನ್ನ ವೆಂಕಟರಮಣಸ್ವಾಮಿ ದೇವಾಲಯದಲ್ಲಿ ವಿಜಯದಶಮಿ ಪ್ರಯುಕ್ತ ಶುಕ್ರವಾರ ದೇವಾಲಯದ ಕಚೇರಿಯಲ್ಲಿ ಪ್ರಧಾನ ಅರ್ಚಕ ಶ್ರೀಧರ್ ಹಾಗೂ ಗೋಪಾಲಕೃಷ್ಣ ಭಾರಧ್ವಜ್ ನೇತೃತ್ವದಲ್ಲಿ ಹಮ್ಮಿಕೊಂಡಿದ್ದ ವಿಶೇಷ ಪೂಜೆ ನಂತರ ಮಾತನಾಡಿದರು.
ವಿ.ನಾಗೇಶ್ ಮಾತನಾಡಿ, ದೇವಾಲಯಕ್ಕೆ ಆಗಮಿಸುವ ಭಕ್ತಾಧಿಗಳ ಸಂಖ್ಯೆ ಹೆಚ್ಚಾಗುತ್ತಿದ್ದು, ಪ್ರತಿ ದಿನ ವ್ಯವಸ್ಥಾಪನ ಸಮಿತಿಯ ಸದಸ್ಯರು ದೇವಾಲಯದಲ್ಲಿ ಹಾಜರಿದ್ದು ಮೇಲ್ವಿಚಾರಣೆ ಮಾಡಬೇಕು. ಸಮಿತಿಯ ಅಧ್ಯಕ್ಷ ಗೋಪಾಲ್ ಹಾಗೂ ಸದಸ್ಯ ಕೃಷ್ಣಮೂರ್ತಿ ಮಾತ್ರ ಹಾಜರಾಗಿ ಭಕ್ತಾಧಿಗಳ ಸರತಿ ಸಾಲನ್ನು ನಿರ್ವಹಿಸುತ್ತಿದ್ದಾರೆ. ಅನ್ನ ಪ್ರಸಾದ ವಿತರಣೆ ಮಾಡುವ ಭವನದಲ್ಲಿ ಹಾಗೂ ದೇವಾಲಯದ ಹೊರಾಂಗಣದಲ್ಲಿ ನಿರ್ವಹಣೆ ಮಾಡುವುದಕ್ಕೆ ದೇವಾಲಯದ ಸಿಬ್ಬಂದಿ ಜತೆ ಸಮಿತಿಯ ಸದಸ್ಯರು ಕೈ ಜೋಡಿಸುವ ಮೂಲಕ ಸಹಕಾರ ನೀಡಬೇಕು ಎಂದು ತಿಳಿಸಿದರು.