

ಉಡುಪಿ: ಜಿಲ್ಲೆಯಲ್ಲಿ ಗಂಡು ಮತ್ತು ಹೆಣ್ಣು ಮಕ್ಕಳ ಅನುಪಾತದಲ್ಲಿ ಸಕಾರಾತ್ಮಕ ಹೆಚ್ಚಳವಾಗಿದ್ದು, ಸಾವಿರ ಗಂಡುಮಕ್ಕಳಿಗೆ 978 ಹೆಣ್ಣು ಮಕ್ಕಳಿದ್ದಾರೆ. ಸರಾಸರಿ ಅನುಪಾತದಲ್ಲಿ ಉಡುಪಿ ಜಿಲ್ಲೆ ರಾಜ್ಯದಲ್ಲಿ ಪ್ರಥಮ ಸ್ಥಾನದಲ್ಲಿದೆ ಎಂದು ಜಿಲ್ಲಾಧಿಕಾರಿ ಡಾ. ಕೆ ವಿದ್ಯಾಕುಮಾರಿ ತಿಳಿಸಿದರು.
ಬುಧವಾರ ನಗರದ ಮಣಿಪಾಲ ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಜಿಲ್ಲಾ ಮಟ್ಟದ ಪ್ರಸವ ಪೂರ್ವ ಭ್ರೂಣಲಿಂಗ ಪತ್ತೆ ಕಾಯಿದೆಯ ಜಿಲ್ಲಾ ಸಮನ್ವಯ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
2023-24 ನೇ ಸಾಲಿನಲ್ಲಿ ಜಿಲ್ಲೆಯಲ್ಲಿ 5845 ಗಂಡು ಮಕ್ಕಳು ಹಾಗೂ 5827 ಹೆಣ್ಣು ಮಕ್ಕಳ ಜನನವಾಗಿದೆ. 1000 ಗಂಡು ಮಕ್ಕಳಿಗೆ 968 ಹೆಣ್ಣು ಮಕ್ಕಳಿದ್ದರು. 2024-&25 ನೇ ಸಾಲಿನಲ್ಲಿ ಈ ಪ್ರಮಾಣವು 978 ಆಗಿದ್ದು, ರಾಜ್ಯದಲ್ಲಿಯೇ ಲಿಂಗಾನುಪಾತದಲ್ಲಿ ಉಡುಪಿ ಮೊದಲ ಸ್ಥಾನದಲ್ಲಿದೆ. ದಾವಣಗೆರೆ, ರಾಮನಗರ. ಶಿವಮೊಗ್ಗ ಕ್ರಮವಾಗಿ ನಂತರದ ಸ್ಥಾನದಲ್ಲಿದೆ. ಜಿಲ್ಲೆಯಲ್ಲಿ ಸಮಾನುಪಾತಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು ಎಂದರು.
ಪಿ.ಸಿ.ಪಿ.ಎನ್.ಡಿ.ಟಿ ಕಾಯ್ದೆಯಡಿ ಜಿಲ್ಲೆಯಾದ್ಯಂತ ಮಾಹಿತಿ ಶಿಕ್ಷಣ ಚಟುವಟಿಕೆಗಳನ್ನು ನಡೆಸಬೇಕು. ಹೆಚ್ಚು ಲಿಂಗಾನುಪಾತ ಇರುವ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಹೆಚ್ಚು ಹೆಚ್ಚು ಅರಿವು ಕಾರ್ಯಕ್ರಮ ನಡೆಸಬೇಕೆಂದರು. ಗರ್ಭಪೂರ್ವ ಮತ್ತು ಪ್ರಸವಪೂರ್ವ ಭ್ರೂಣಲಿಂಗ ಪತ್ತೆ ಹಚ್ಚುವುದು ಕಾನೂನಿನ ಅಡಿಯಲ್ಲಿ ಶಿಕ್ಷಾರ್ಹ ಅಪರಾಧವಾಗಿದೆ. ಭ್ರೂಣಲಿಂಗ ಪತ್ತೆಯಿಂದ ಹೆಣ್ಣು ಮತ್ತು ಗಂಡು ಮಕ್ಕಳ ಅನುಪಾತದಲ್ಲಿ ಹೆಚ್ಚಿನ ವ್ಯತ್ಯಾಸವಾಗಿ ಸಮಾಜದಲ್ಲಿ ಅಸಮತೋಲನ ಉಂಟಾಗಿ ಮಹಿಳೆಯರ ಮೇಲೆ ಅಪರಾಧಿಕ ಪ್ರಕರಣಗಳೂ ಸಹ ಹೆಚ್ಚಾಗುವ ಸಾಧ್ಯತೆಗಳು ಇರುತ್ತವೆ. ಇದಕ್ಕೆ ಆಸ್ಪದ ನೀಡಬಾರದು ಎಂದರು. ಪ್ರತಿಯೊಂದು ಸ್ಕಾನಿಂಗ್ ಸೆಂಟರ್ಗಳು ಸರ್ಕಾರದ ಮಾರ್ಗ ಸೂಚಿ ಅನ್ವಯ ದಾಖಲೆಗಳನ್ನು ನಿರ್ವಹಣೆ ಮಾಡಬೇಕು. ಒಂದೊಮ್ಮೆ ಇದನ್ನು ಉಲ್ಲಂಘಿಸಿದಲ್ಲಿ ನಿರ್ದಾಕ್ಷಿಣ್ಯವಾಗಿ ಕಾನೂನು ಕ್ರಮ ಕೈಗೊಳ್ಳಬೇಕು ಎಂದರು.
ಸಭೆಯಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಬಸವರಾಜ್ ಹುಬ್ಬಳ್ಳಿ, ಜಿಲ್ಲಾ ಆರ್.ಸಿ.ಹೆಚ್ ಅಧಿಕಾರಿ ಡಾ. ಜ್ಯೋತ್ಸ್ನಾ ಬಿ.ಕೆ, ಕುಟುಂಬ ಕಲ್ಯಾಣ ಅಧಿಕಾರಿ ಡಾ.ಶ್ರೀರಾಮರಾವ್, ಜಿಲ್ಲಾ ಕುಷ್ಠರೋಗ ನಿವಾರಣಾಧಿಕಾರಿ ಡಾ.ಲತಾ ನಾಯಕ್, ಡಿ.ಎಸ್.ಓ ಡಾ. ನಾಗರತ್ನ, ಜಿಲ್ಲಾ ಏಡ್ಸ್ ರೋಗ ನಿಯಂತ್ರಣಾಧಿಕಾರಿ ಡಾ. ಚಿದಾನಂದ ಸಂಜು, ಜಿಲ್ಲಾ ಸರ್ಜನ್ ಡಾ. ಎಚ್.ಅಶೋಕ್, ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ ಡಾ.ಪ್ರಶಾಂತ್ ಭಟ್ ಮತ್ತಿತರರು ಉಪಸ್ಥಿತರಿದ್ದರು.