

ಕಡಬ: ಕಾಪಿನಬಾಗಿಲು ವೃದ್ಧ ದಂಪತಿಯ ಮನೆ ಧ್ವಂಸ ಪ್ರಕರಣದಲ್ಲಿ ನ್ಯಾಯಾಲಯದ ಆದೇಶದಂತೆ ಕ್ರಮ ಕೈಗೊಂಡಿದ್ದೇವೆ. ಆ ಬಡ ಕುಟುಂಬಕ್ಕೆ ಬೇರೆ ಕಡೆ ಜಾಗ ಮಾಡಿಕೊಡುವ ಬಗ್ಗೆ ನಮಗೂ ಮನಸ್ಸಿತ್ತು. ಆದರೆ ನನ್ನ ಮೇಲೆಯೇ ಲೈಂಗಿಕ ದೌರ್ಜನ್ಯ, ಅಟ್ರಾಸಿಟಿ ಕೇಸ್ ದಾಖಲಾಗಿದೆ ಎಂದು ಕಡಬ ತಹಸೀಲ್ದಾರ ಪ್ರಭಾಕರ ಖಜೂರೆ ಹೇಳಿದರು.
ತಾಲೂಕು ಆಡಳಿತ ಸೌಧದ ಸಭಾಂಗಣದಲ್ಲಿ ತಾಲೂಕುಮಟ್ಟದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಕುಂದು-ಕೊರತೆ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ, ಕಾಪಿನಬಾಗಿಲು ವೃದ್ಧ ದಂಪತಿ ಮನೆ ಧ್ವಂಸ ಪ್ರಕರಣದ ಬಗ್ಗೆ ವಿವರ ನೀಡಿದರು.
ಚರ್ಚೆ ಆರಂಭಿಸಿದ ಆನಂದ ಮಿತ್ತಬೈಲು, ಶಶಿಧರ ಬೊಟ್ಟಡ್ಕ, ವಸಂತ ಕುಬಲಾಡಿ, ನಾವು ಸಭೆಗೆ ಹಾಜರಾಗದೆ ಪ್ರತಿಭಟಿಸುವ ಮೂಲಕ ಸಭೆ ಬಹಿಷ್ಕರಿಸುವ ನಿರ್ಧಾರಕ್ಕೆ ಬಂದಿದ್ದೆವು. ಆದರೆ ಪೂರ್ಣಪ್ರಮಾಣದ ಮಾಹಿತಿ ಪಡೆಯುವ ಸಲುವಾಗಿ ಹಾಜರಾಗಿದ್ದೇವೆ ಎಂದರು.
ಆಗ ಉತ್ತರಿಸಿದ ತಹಸೀಲ್ದಾರ್ ವಿವರ ನೀಡಿ, ಅಲ್ಲಿ ಮತ್ತೆ ಮನೆ ನಿರ್ಮಾಣಕ್ಕೆ ಸಿದ್ಧತೆ ನಡೆಸಿದ್ದು ಪರಿಶೀಲನೆಗೆ ತೆರಳಿದ ವಿಎಗೂ ಹಲ್ಲೆ ಮಾಡಲಾಗಿದೆ. 2015ರ ನಂತರ ವಾಸ ಇದ್ದವರಿಗೆ 94ಸಿ ಕೊಡಲು ಸಾಧ್ಯವಿಲ್ಲವೆಂದು ಇಬ್ಬರ ಅರ್ಜಿಯನ್ನು ತಿರಸ್ಕರಿಸಲಾಗಿದೆ ಎಂದರು. ಸಮಗ್ರ ಚರ್ಚೆಯ ಬಳಿಕ ನ್ಯಾಯಾಂಗ ನಿಂದನೆ ಆಗದಂತೆ ಚರ್ಚೆಗೆ ತೆರೆ ಎಳೆಯಲಾಯಿತು.
ಪುತ್ತೂರು ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕಿ ವಿನಯ ಕುಮಾರಿ ಪಾಲನಾ ವರದಿ ಮಂಡಿಸಿದರು. ಹಿಂದಿನ ಸಭೆಯಲ್ಲಿ ಅಂಬೇಡ್ಕರ್ ಭವನಕ್ಕೆ ಹೆಚ್ಚುವರಿ 0.50 ಎಕರೆ ಹತ್ತಿರದ ಸರ್ಕಾರಿ ಜಾಗವನ್ನು ಕಾದಿರಿಸುವಂತೆ ಒತ್ತಾಯಿಸಿದ್ದರು. ಆದರೆ ಈಗ ಇರುವ ಅಂಬೇಡ್ಕರ್ ಭವನದ ಬಳಿ ಆಕ್ಷೇಪರಹಿತ ಸರ್ಕಾರಿ ಜಮೀನು ಇಲ್ಲವೆಂದು ತಹಸೀಲ್ದಾರ್ ಹೇಳಿದ್ದರು. ಹೀಗಾಗಿ ಕೋಡಿಂಬಾಳ ಗ್ರಾಮದಲ್ಲಿ ಸರ್ವೇ ನಂ.243/1 ಎಪಿ2ರಲ್ಲಿ 0.30 ಎಕರೆ ಜಮೀನು ಕಾಯ್ದಿರಿಸಿದ್ದು, ಇದಕ್ಕೆ ಸಭೆಯಲ್ಲಿ ಮುಖಂಡರಾದ ಶಶಿಧರ ಬೊಟ್ಟಡ್ಕ ಆಕ್ಷೇಪ ವ್ಯಕ್ತಪಡಿಸಿದರು. ಮರು ಸರ್ವೇ ಮಾಡಿ ಅಂಬೇಡ್ಕರ್ ಭವನದ ಬಳಿಯೇ ಜಾಗ ಕಾಯ್ದಿರಿಸುವಂತೆ ಒತ್ತಾಯಿಸಲಾಯಿತು. ಸಭೆಯಲ್ಲಿ ವಿವಿಧ ಇಲಾಖೆಗಳ ಅಧಿಕಾರಿಗಳು, ಗ್ರಾ.ಪಂ. ಅಭಿವೃದ್ದಿ ಅಧಿಕಾರಿಗಳು, ಗ್ರಾಮ ಕರಣಿಕರು ಹಾಜರಿದ್ದರು.
ದೇವಸ್ಥಾನದಲ್ಲಿ ಅಸ್ಪಶ್ಯತೆ
ಕೊಂಬಾರು ಗ್ರಾಮದ ದೇವಸ್ಥಾನವೊಂದರಲ್ಲಿ ಸಾರ್ವಜನಿಕ ಕಾರ್ಯಕ್ರಮದಲ್ಲಿ ಅಸ್ಪಶ್ಯತೆ ನಡೆದಿರುವ ವಿಚಾರವನ್ನು ಆನಂದ ಮಿತ್ತಬೈಲು ಅಧಿಕಾರಿಗಳ ಗಮನಕ್ಕೆ ತಂದರು. ವಿದ್ಯಾವಂತ ಸಮುದಾಯದಲ್ಲೂ ಈ ರೀತಿಯ ನಿಂದನೆ ಮುಂದುವರಿದರೆ ದೇವಸ್ಥಾನದ ಆಡಳಿತ ಮಂಡಳಿಯನ್ನು ಹೊಣೆ ಮಾಡಬೇಕಾಗುತ್ತದೆ. ಕೊಂಬಾರು ಗ್ರಾಮ ಮಾತ್ರವಲ್ಲ ಬೇರೆ ಕಡೆಯೂ ಇಂತಹ ಕೀಳು ಮನಸ್ಥಿತಿಯವರು ಇದ್ದಾರೆ. ಕೇಸ್ ದಾಖಲಿಸಿ ಅವರನ್ನು ಜೈಲಿನಲ್ಲಿ ಕೊಳೆಯುವಂತೆ ಮಾಡಲು ನಾವು ತಯಾರಿಲ್ಲ. ಆದರೆ ಇಂತಹ ಕೀಳು ಮನೋಸ್ಥಿತಿ ಬದಲಾಯಿಸಲು ತಹಸೀಲ್ದಾರ್ ಸೂಕ್ತ ಸಲಹೆ ನೀಡಿ, ನೋಟಿಸ್ ಮೂಲಕ ಆಡಳಿತ ಮಂಡಳಿಯನ್ನು ಎಚ್ಚರಿಸಬೇಕೆಂದು ಒತ್ತಾಯಿಸಿದರು.