ಟ್ರಕ್ ಟರ್ಮಿನಲ್‌ನಲ್ಲಿ ಮಳಿಗೆ ನಿರ್ಮಾಣಕ್ಕೆ ಸಮಿತಿ ಸಭೆ

8
Published on

ಮೈಸೂರು: ರಾಜ್ಯದಲ್ಲಿಯೇ ಎರಡನೆಯದಾಗಿ ನಿರ್ಮಾಣಗೊಂಡಿರುವ ಮೈಸೂರಿನ ಟ್ರಕ್ ಟರ್ಮಿನಲ್‌ನಲ್ಲಿ ಗೂಡ್ಸ್‌ಗಳನ್ನು ದಾಸ್ತಾನು ಮಾಡುವ ಮಳಿಗೆ ನಿರ್ಮಿಸಲು ಅರ್ಜಿ ಆಹ್ವಾನಿಸಲು ನಿರ್ಣಯಿಸಲಾಯಿತು.
ಎಪಿಎಂಸಿ ಬಳಿ ಇರುವ ಟ್ರಕ್ ಟರ್ಮಿನಲ್‌ನಲ್ಲಿ ಮಂಗಳವಾರ ಆಯೋಜಿಸಿದ್ದ ಲಾರಿ ಮಾಲೀಕರು, ವರ್ತಕರು, ಏಜೆಂಟರು, ಟ್ರಕ್ ಟರ್ಮಿನಲ್ ಸಮಿತಿ ಸಭೆಯಲ್ಲಿ ಈ ನಿರ್ಣಯ ಕೈಗೊಂಡು ಅದನ್ನು ಜಿಲ್ಲಾಧಿಕಾರಿಗೆ ಕಳುಹಿಸಲು ನಿರ್ಧರಿಸಲಾಯಿತು.
ಮೈಸೂರು ಲಾರಿ ಮಾಲೀಕರ ಸಂಘದ ಜಿಲ್ಲಾಧ್ಯಕ್ಷ ಬಿ.ಕೋದಂಡರಾಮ ಮಾತನಾಡಿ, ಬೆಂಗಳೂರಿನಲ್ಲಿ ಮಳಿಗೆಗಳು ಇಕ್ಕಟ್ಟಾಗಿದ್ದು, ಸ್ವಚ್ಛತೆಗೂ ತೊಡಕಾಗುತ್ತಿದೆ. ಆದ್ದರಿಂದ ಮೈಸೂರಿನ ನಿವೇಶನಗಳನ್ನು ವಿಶಾಲವಾಗಿ ಮಳಿಗೆ ನಿರ್ಮಿಸಲು ಜಾಗ ನಿಗದಿ ಪಡಿಸಬೇಕು, ಎಪಿಎಂಸಿ ದರಕ್ಕಿಂತ ಹೆಚ್ಚು ದರ ನಿಗದಿಪಡಿಸಿದರೆ ನಿವೇಶನ ಖರೀದಿಸಲು ಲಾರಿ ಮಾಲೀಕರು, ವರ್ತಕರು, ಏಜೆಂಟರಿಗೆ ತೊಂದರೆ ಅಗುವುದರಿಂದ ಕೈಗೆಟಕುವ ದರದಲ್ಲಿ ನಿವೇಶನ ಹಂಚಿಕೆ ಮಾಡಬೇಕು ಎಂದು ಆಗ್ರಹಿಸಲಾಯಿತು.
ದೂರದ ಊರುಗಳಿಂದ ವಸ್ತುಗಳನ್ನು ತುಂಬಿ ಬರುವ ಲಾರಿ ಚಾಲಕರು, ಕ್ಲೀನರ್‌ಗಳಿಗೆ ಕನಿಷ್ಠ ಸೌಲಭ್ಯ ಕಲ್ಪಿಸಲು ಕ್ರಮ ಕೈಗೊಳ್ಳಬೇಕು. ಇಂದಿರಾ ಕ್ಯಾಂಟಿನ್ ಮಾದರಿ ಕಡಿಮೆ ಬೆಲೆಗೆ ಉತ್ತರ ಆಹಾರ ನೀಡುವ ಉತ್ತಮ ಕ್ಯಾಂಟಿನ್, ಸ್ನಾನ, ಶೌಚಗೃಹ, ಪ್ರಾಥಮಿಕ ಆರೋಗ್ಯ ಕೇಂದ್ರ ವ್ಯವಸ್ಥೆ ಮಾಡಬೇಕು. ಸ್ವಚ್ಛತೆಗೆ ಆದ್ಯತೆ ನೀಡಬೇಕು ಎಂದು ಕೋರಲಾಯಿತು.
ರಾಜ್ಯ ಲಾರಿ ಮಾಲೀಕರ ಸಂಘದ ಅಧ್ಯಕ್ಷ ಶ್ರೀನಿವಾಸರಾವ್, ಒಕ್ಕೂಟದ ಅಧ್ಯಕ್ಷ ನಾರಾಯಣ ಪ್ರಕಾಶ್, ಜಿಲ್ಲಾ ಉಪಾಧ್ಯಕ್ಷ ಪ್ರಕಾಶ್, ನಂಜನಗೂಡಿನ ವಿಶ್ವನಾಥ್, ಬನ್ನೂರಿನ ಪ್ರದೀಪ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net