ಹುಬ್ಬಳ್ಳಿ : reservation ಮಹಿಳಾ ಮೀಸಲಾತಿ (ನಾರಿ ಶಕ್ತಿ ವಂದನಾ) ಹಾಗೂ ಲೋಕಸಭೆ ಕ್ಷೇತ್ರ ಪುನರ್ ವಿಂಗಡಣೆಗೆ ಬದ್ಧರಾಗಿದ್ದೇವೆ. ಈ ಕುರಿತು ಜನಜಾಗೃತಿ ಮೂಡಿಸುತ್ತೇವೆ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಹೇಳಿದರು.
ನಗರದಲ್ಲಿ ಬಿಜೆಪಿ ಕಚೇರಿಯಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಎಚ್.ಡಿ. ದೇವೆಗೌಡರು ಪ್ರಧಾನಿಯಾಗಿದ್ದ ಕಾಲದಿಂದಲೂ ಕಾಂಗ್ರೆಸ್ ಮಹಿಳಾ ಮೀಸಲಾತಿ ವಿರೋಧಿಸುತ್ತಲೇ ಬಂದಿದೆ.
ದೇವೆಗೌಡರು ಪ್ರಧಾನಿಯಾಗಿದ್ದ ಸಮಯದಲ್ಲಿ ಮಹಿಳಾ ಮೀಸಲಾತಿ ಜಾರಿಗೊಳಿಸಲು ಯತ್ನಿಸಿದ್ದರು. ಆದರೆ, ಆ ಯತ್ನಕ್ಕೆ ಕಾಂಗ್ರೆಸ್ ಅವಕಾಶ ನೀಡಲಿಲ್ಲ. ಆದರೆ, ಆ ಪ್ರಯತ್ನಕ್ಕೆ ಬಿಜೆಪಿ ಬೆಂಬಲ ನೀಡಿತ್ತು ಎಂದರು.
1998ರಲ್ಲಿ ಅಂದಿನ ಪ್ರಧಾನಿ ಎ.ಬಿ. ವಾಜಪೇಯಿ ಅವರು ಸಹ ಮಹಿಳಾ ಮೀಸಲಾತಿ ಕಾಯ್ದೆ ಜಾರಿಗೆ ಪ್ರಯತ್ನಿಸಿದ್ದರು. ಎನ್ಡಿಎ ಮಿತ್ರ ಪಕ್ಷಗಳೆಲ್ಲ ಸಹಕಾರ ನೀಡಿದ್ದವು. ಆದರೆ, ಕಾಂಗ್ರೆಸ್ ಮತ್ತೆ ತನ್ನ ಹಳೆಯ ಚಾಳಿ ಮುಂದುವರೆಸಿ, ವಿರೋಧ ವ್ಯಕ್ತಪಡಿಸಿತ್ತು ಎಂದು ಹೇಳಿದರು.
2003ರಲ್ಲಿ ವಾಜಪೇಯಿ ಅವರು ಮತ್ತೊಮ್ಮೆ ಈ ಕಾಯ್ದೆಗೆ ಮುಂದಾದಾಗ ಕಾಂಗ್ರೆಸ್ ಮಿತ್ರ ಪಕ್ಷಗಳ ಸಂಸದರು ಬಿಲ್ ಹರಿದು ಬೀಸಾಕಿದ್ದರು ಎಂದು ಆರೋಪಿಸಿದರು.
ಯುಪಿಎ ಸರ್ಕಾರದ ಅವಧಿಯಲ್ಲಿ ಈ ಕಾಯ್ದೆ ರಾಜ್ಯಸಭೆಯಲ್ಲಿ ಅಂಗೀಕಾರಗೊಂಡಿತು. ಬಿಜೆಪಿಯವರು ಸಂಪೂರ್ಣ ಸಹಕಾರ ನೀಡಿದ್ದರು. ಆದರೆ, ಲೋಕಸಭೆಯಲ್ಲಿ ಕಾಯ್ದೆ ಮಂಡನೆ ಆಗಲೇ ಇಲ್ಲ ಎಂದು ತಿಳಿಸಿದರು.
ಮಹಿಳಾ ಮೀಸಲಾತಿ ಪರವಾಗಿ ಇದ್ದೇವೆ ಎಂಬ ಕಾಂಗ್ರೆಸ್ ಹೇಳಿಕೆ ಬೊಗಳೆಯಷ್ಟೇ. ಮತ್ತೊಂದೆಡೆ ಲೋಕಸಭೆ ಕ್ಷೇತ್ರ ಪುನರ್ ವಿಂಗಡಣೆಯಿಂದ ದಕ್ಷಿಣ ರಾಜ್ಯಗಳಿಗೆ ಅನ್ಯಾಯವಾಗುತ್ತದೆ ಎಂಬ ಹೇಳಿಕೆ ನೀಡುವ ಮೂಲಕ ಕಾಂಗ್ರೆಸ್ ಜನರಲ್ಲಿ ತಪ್ಪು ಮಾಹಿತಿ ಹರಡುತ್ತಿದೆ ಎಂದರು.
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ತಮ್ಮ ಇಡೀ ಜೀವನವನ್ನು ವಿಧಾನಸಭೆ, ರಾಜ್ಯಸಭೆ ಹಾಗೂ ಲೋಕಸಭೆಯಲ್ಲಿ ಕಳೆದಿದ್ದರು ಸಹ ತಳಮಟ್ಟದ ರಾಜಕೀಯ ಮಾಡುತ್ತಿದ್ದಾರೆ ಎಂದು ಜೋಶಿ ಟೀಕಿಸಿದರು.
ಮೇಯರ್ ಜ್ಯೋತಿ ಪಾಟೀಲ, ಮಹಾನಗರ ಜಿಲ್ಲಾ ಬಿಜೆಪಿ ಮಹಿಳಾ ಮೋರ್ಚಾ ಅಧ್ಯಕ್ಷೆ ಸೀಮಾ ಲದವಾ, ಅಕ್ಕಮ್ಮ ಹೆಗಡೆ, ಸವಿತಾ ಚವ್ಹಾಣ, ಶಾಂತಕ್ಕ ನಿಡವಣಿ, ನಾಗರತ್ನ ಬಳ್ಳಾರಿ ಸುದ್ದಿಗೋಷ್ಠಿಯಲ್ಲಿ ಇದ್ದರು.