

ಹುಬ್ಬಳ್ಳಿ: ಮುಸ್ಲಿಂ ಸಮುದಾಯಕ್ಕೆ ಯಾವುದೇ ಕಾರಣಕ್ಕೂ ಅನ್ಯಾಯ ಆಗಲು ಬಿಡುವುದಿಲ್ಲ. ನಿಮ್ಮ ರಕ್ಷಣೆಗೆ ನಮ್ಮ ಸರ್ಕಾರವಿದೆ. ಮುಸ್ಲಿಮರಷ್ಟೇ ಅಲ್ಲ ಎಲ್ಲ ಸಮುದಾಯದವರನ್ನೂ ಸಂರಕ್ಷಣೆ ಮಾಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ವಾಗ್ದಾನ ಮಾಡಿದರು.
ತಾಲೂಕಿನ ಪಾಳೆ ಬಳಿಯ ಬಾಷಾ ಪೀರಾ ದರ್ಗಾ ಆವರಣದಲ್ಲಿ ಸೋಮವಾರ ಏರ್ಪಡಿಸಿದ್ದ ದಕ್ಷಿಣ ಭಾರತದ ಮುಸ್ಲಿಂ ಧರ್ಮಗುರುಗಳ ಸಮಾವೇಶದಲ್ಲಿ ಅವರು ಮಾತನಾಡಿದರು.
ನಮ್ಮ ಸರ್ಕಾರದಲ್ಲಿ ಮೇಲು, ಕೀಳೆಂಬ ಭೇದವಿಲ್ಲ. ನಾವು ಅಧಿಕಾರದಲ್ಲಿ ಇರುವವರೆಗೆ ಸಮಾಜದಲ್ಲಿ ಸೌಹಾರ್ದತೆ, ಶಾಂತಿ ಉಂಟುಮಾಡುವ ಕೆಲಸ ಮಾಡುತ್ತೇವೆ ಎಂದರು.
ಬಹುತ್ವದ ದೇಶ ಭಾರತ. ಇಲ್ಲಿ ಅನೇಕ ಧರ್ಮ, ಜಾತಿ, ಭಾಷೆಗಳಿವೆ. ಸಂವಿಧಾನ ಶಿಲ್ಪಿ ಅಂಬೇಡ್ಕರ್ ಅವರು ಕೊಟ್ಟ ಸಂವಿಧಾನದಲ್ಲಿ ಅವರವರು ತಮ್ಮ ಧರ್ಮವನ್ನು ಪಾಲನೆ ಮಾಡಬಹುದು ಎಂಬುದಿದೆ. ಎಲ್ಲ ಧರ್ಮಗಳೂ ಮನುಷತ್ವವನ್ನೇ ಬೋಧಿಸುತ್ತವೆ. ನಮ್ಮ ಸಮಾಜದಲ್ಲಿ ವೈವಿಧ್ಯತೆ ಇದೆ. ಆದರೆ, ಏಕತೆ ಕಾಣುವ ಅವಶ್ಯಕತೆ ಇದೆ. ಇದಕ್ಕಾಗಿ ವೈಚಾರಿಕತೆಯುಳ್ಳ ಶಿಕ್ಷಣ ನೀಡುವ ಅಗತ್ಯವಿದೆ ಎಂದರು.
ರಾಜಕಾರಣಕ್ಕಾಗಿ ಕೆಲವರು ಜಾತಿ, ಧರ್ಮದ ನಡುವ ಸಂಘರ್ಷವನ್ನುಂಟು ಮಾಡುತ್ತಿದ್ದಾರೆ. ಇದರಿಂದ ಅವರಿಗೆ ತಾತ್ಕಾಲಿಕ ಜಯ ಸಿಗಬಹುದು. ಬಸವಾದಿ ಶರಣರು, ಬುದ್ಧ ಹಾಗೂ ಮೊಹಮ್ಮದ್ ಪೈಗಂಬರ್ ಅವರು ಜಾತಿ, ವರ್ಗ ರಹಿತ ಸಮಾಜದ ಕನಸು ಕಂಡವರು. ಅವರ ತತ್ವವನ್ನು ನಾವೆಲ್ಲ ಪಾಲಿಸಬೇಕು ಎಂದರು.
ಶಾಸಕ ಪ್ರಸಾದ ಅಬ್ಬಯ್ಯ ಮಾತನಾಡಿ, ಕೋಮುವಾದಿ ಸರ್ಕಾರಗಳು ಅಧಿಕಾರಕ್ಕೆ ಬಂದಾಗಲೆಲ್ಲ ಜನರ ಭಾವನೆಗೆ ಧಕ್ಕೆ ತರವ ಕೆಲಸ ಮಾಡುತ್ತಿವೆ. ಇತ್ತೀಚಿನ ದಿನಗಳಲ್ಲಿ ಜಾತಿ, ಧರ್ಮದ ವಿಚಾರದಲ್ಲಿ ದೇಶ ಛಿದ್ರವಾಗುತ್ತಿದೆ. ಹೀಗಾಗಿ ದೇಶದಲ್ಲಿ ಶಾಂತಿ, ಸಮಾನತೆ, ಶೈಕ್ಷಣಿಕ ಹಾಗೂ ಸಾಮಾಜಿಕ ನ್ಯಾಯಕ್ಕಾಗಿ ಈ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದರು.
ವೇದಿಕೆ ಕಾರ್ಯಕ್ರಮಕ್ಕೂ ಮೊದಲು ತಮ್ಮ ಮಂತ್ರಿಮಂಡಲದ ಕೆಲ ಸದಸ್ಯರೊಂದಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ದರ್ಗಾಕ್ಕೆ ತೆರಳಿ ಪ್ರಾರ್ಥನೆ ಸಲ್ಲಿಸಿದರು.
ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ನಾಸೀರ್ ಅಹ್ಮದ್, ಸಚಿವರಾದ ಎಚ್.ಕೆ. ಪಾಟೀಲ, ಸಂತೋಷ ಲಾಡ್, ಶಾಸಕರಾದ ಶ್ರೀನಿವಾಸ ಮಾನೆ, ಎನ್.ಎಚ್. ಕೋನರಡ್ಡಿ, ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್, ಮಾಜಿ ಸಂಸದ ಪ್ರೊ. ಐ.ಜಿ. ಸನದಿ, ಮಾಜಿ ಸಚಿವ ಎ.ಎಂ. ಹಿಂಡಸಗೇರಿ, ಸೈಯದ್ ತಾಜುದ್ದೀನ್ ಖಾದ್ರಿ, ಖಾಜಾ ಬಂದೇನವಾಜ್ ದರ್ಗಾದ ಡಾ. ಸೈಯದ್ ಖುಸ್ರುಹುಸೇನಿ ಸಾಹೇಬ್ ಖಿಬ್ಲಾ ಹಾಗೂ 200ಕ್ಕೂ ಹೆಚ್ಚು ಧರ್ಮಗುರುಗಳು ಇದ್ದರು.