

ಮೈಸೂರು: ಶೋಷಿತ ಸಮುದಾಯದ ಏಳಿಗೆಗೆ ಅಗತ್ಯವಿರುವ ಬಹುವಿಧ ಸೌಕರ್ಯಗಳನ್ನೂ ನಮ್ಮ ಸರ್ಕಾರ ಒದಗಿಸುತ್ತಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ. ಮಹದೇವಪ್ಪ ಹೇಳಿದರು.
ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಭಾನುವಾರ ಕಲಾಮಂದಿರಲ್ಲಿ ಆಯೋಜಿಸಿದ್ದ ಶರಣ ನುಲಿಯ ಚಂದಯ್ಯ ಜಯಂತಿಯಲ್ಲಿ ಅವರು ಮಾತನಾಡಿದರು. ಸಮಾನತೆ ಹಾಗೂ ಸಮಾನ ಅವಕಾಶಗಳು ಸಂವಿಧಾನದ ಆಶಯ. ಅದನ್ನು ಸಾಕಾರ ಗೊಳಿಸುವುದು ಸಿಎಂ ಸಿದ್ದರಾಮಯ್ಯ ನೇತೃತ್ವದ ಸರ್ಕಾರದ ಕರ್ತವ್ಯ. ಅವಕಾಶ ವಂಚಿತರಿಗೆ ಬೆಂಬಲಿಸಿ, ಶೋಷಿತ ಸಮುದಾಯಗಳನ್ನು ಮೇಲೆತ್ತುವ ಆಶಯಕ್ಕೆ ಸರ್ಕಾರ ಬದ್ಧ ಎಂದರು.
12ನೇ ಶತಮಾನದ ಶರಣ ಚಳವಳಿ ಸ್ಮರಿಸುವ ಕಾರ್ಯಕ್ರಮವಿದು. ಸಾಮಾಜಿಕ ಪಿಡುಗು ಮತ್ತು ಮೌಢ್ಯಗಳನ್ನು ಪ್ರತಿಪಾದನೆ ವಿರುದ್ಧ ಹೋರಾಡಿ, ಸಲ್ಲದ ಸಂಪ್ರದಾಯಗಳನ್ನು ಧಿಕ್ಕರಿಸಿದ ಬಸವಣ್ಣನವರು ಕಾಯಕ ಸಮುದಾಯಗಳನ್ನು ಬೆಂಬಲಿಸಿದರು.
ಅವರ ಸಮಕಾಲೀನರಾದ ನುಲಿಯ ಚಂದಯ್ಯ ಅವರು ಶ್ರಮ ಹಾಗೂ ಕಾಯಕ ಸಂಸ್ಕೃತಿ ನಂಬಿ ಆದರ್ಶ ಜೀವನ ನಡೆಸಿದವರು. ಸಮ ಸಮಾಜದ ನಿರ್ಮಾಣಕ್ಕೆ ಹೋರಾಡಿದವರು ಎಂದು ಹೇಳಿದರು.
ಅನೇಕ ಧರ್ಮ, ಭಾಷೆ, ವೈವಿಧ್ಯ ಆಚಾರ-ವಿಚಾರದ ನಡುವೆಯೇ ಏಕತೆ ಕಾಣುತ್ತಿದ್ದೇವೆ. ಇದರೊಂದಿಗೆ ಅನುಭವ ಮಂಟಪದ ವಿಚಾರದ ಅಡಿಯಲ್ಲಿ ಪ್ರಜಾಪ್ರಭುತ್ವ ಗಟ್ಟಿಗೊಳಿಸಲು ನಾವೆಲ್ಲರೂ ಒಗ್ಗಟ್ಟಾಗಿ ಹೋರಾಡೋಣ ಎಂದು ಡಾ. ಮಹದೇವಪ್ಪ ನುಡಿದರು. ಶಾಸಕ ಕೆ.ಹರೀಶ್‌ಗೌಡ ಮಾತನಾಡಿ, ಯುವಕರು ಶರಣರ ಸಾಹಿತ್ಯದ ಸಾರ ಮತ್ತು ಉದ್ದೇಶ ತಿಳಿದುಕೊಳ್ಳುವುದು ಬಹಳ ಮುಖ್ಯ ಎಂದರು.
ಕಾಯಕವೇ ಪ್ರಧಾನ: ಕುಂದೂರು ಮಠದ ಶ್ರೀ ಶರತ್‌ಚಂದ್ರ ಸ್ವಾಮೀಜಿ ಮಾತನಾಡಿ, 70 ವರ್ಷ ಬದುಕಿದ್ದ ನುಲಿಯ ಚಂದಯ್ಯ ಕಾಯಕದಲ್ಲೇ ಮುಳುಗಿದ್ದರು. ಅವರೊಬ್ಬ ಮಹಾನ್ ನಾಯಕ ಎಂದು ಕೊಂಡಾಡಿದರು. ಮಹದೇಶ್ವರ ಬೆಟ್ಟ ಸಾಲೂರು ಮಠದ ಶ್ರೀ ಶಾಂತ ಮಲ್ಲಿಕಾರ್ಜುನ ಸ್ವಾಮೀಜಿ ಆಶೀರ್ವಚನ ನೀಡಿದರು. ಮಾಜಿ ಶಾಸಕ ಜಿ.ಚಂದ್ರಣ್ಣ, ಅಲೆಮಾರಿ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಜಿ.ಪಲ್ಲವಿ, ಕೃಷ್ಣದೇವರಾಯ ವಿವಿ ಕುಲಪತಿ ಎನ್.ಮುನಿರಾಜು, ನಿವೃತ್ತ ಜಿಲ್ಲಾಧಿಕಾರಿ ಎಸ್.ಟಿ.ಅಂಜನ್ ಕುಮಾರ್, ಎಕೆಎಂಎಸ್ ಜಂಟಿ ಕಾರ್ಯದರ್ಶಿ ಕಿರಣ್ ಕುಮಾರ್ , ರಾಜ್ಯ ಉಪಾಧ್ಯಕ್ಷೆ ಭೀಮಪುತ್ರಿ ನಾಗಮ್ಮ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಂ.ವೆಂಕಟೇಶ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಎಂ.ಡಿ.ಸುದರ್ಶನ ಇತರರು ಇದ್ದರು.