ನಾಗಮಂಗಲ: ಬಡಪೀಡಿತ ತಾಲೂಕು ಎಂಬ ಹಣೆಪಟ್ಟಿಯನ್ನು ಹೊಂದಿರುವ ನಾಗಮಂಗಲ ತಾಲೂಕಿಗೆ ನೀರಾವರಿ ಯೋಜನೆಗಳನ್ನು ರೂಪಿಸುವ ಜತೆಗೆ ಕೈಗಾರಿಕೆ ಸ್ಥಾಪನೆ ಸೇರಿದಂತೆ ಮುಂತಾದ ರೀತಿಯಲ್ಲಿ ಸರ್ವಾಂಗೀಣ ಅಭಿವೃದ್ಧಿಗೆ ಕಟಿಬದ್ಧನಾಗಿದ್ದು ನಾಗಮಂಗಲವನ್ನು ಮಾದರಿ ತಾಲೂಕನ್ನಾಗಿಸಲು ಶ್ರಮಿಸುವೆ ಎಂದು ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ಹೇಳಿದರು.
ತಾಲೂಕಿನ ಬೆಳ್ಳೂರು ಪಟ್ಟಣದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಮಂಗಳವಾರ ಭೂಮಿಪೂಜೆ ನೆರವೇರಿಸಿದ ನಂತರ ಮಾತನಾಡಿ, ತಾಲೂಕಿನ ಹೊಣಕೆರೆ ಹೋಬಳಿಯ ಕೆಲವು ಭಾಗ ಹಾಗೂ ಬಿಂಡಿಗನವಿಲೆ ಹೋಬಳಿ ವ್ಯಾಪ್ತಿಗೆ ನೀರಾವರಿ ಯೋಜನೆಯನ್ನು ಕಲ್ಪಿಸಲಾಗುವುದು. ಇದರ ಜತೆಗೆ ಬರಪೀಡಿತ ತಾಲೂಕು ಎಂಬ ಹಣೆಪಟ್ಟಿಯನ್ನು ತೊಡೆದು ಹಾಕಲು ಎಲ್ಲ ರೀತಿಯಲ್ಲಿಯೂ ಶ್ರಮಿಸುತ್ತೇನೆ ಎಂದರು.
ತಾಲೂಕಿನ ರೈತಾಪಿ ವರ್ಗಕ್ಕೆ ಜಿಲ್ಲೆಯ ಇತರ ತಾಲೂಕಿನಲ್ಲಿರುವಂತೆ ನೀರಾವರಿ ಸೌಲಭ್ಯಗಳನ್ನು ಕಲ್ಪಿಸಿಕೊಡಲು ಪ್ರಾಮಾಣಿಕವಾಗಿ ಶ್ರಮಿಸುತ್ತೇನೆ. ತಾಲೂಕಿನ ಅಭಿವೃದ್ಧಿ ವಿಚಾರದಲ್ಲಿ ಯಾವುದೇ ರಾಜಕೀಯ ತಾರತಮ್ಯ ಮಾಡುವ ಪ್ರಮೇಯವೇ ಇಲ್ಲ. ಅಭಿವೃದ್ಧಿ ವಿಚಾರವೇ ಬೇರೆ, ರಾಜಕೀಯವೇ ಬೇರೆ. ತಾಲೂಕಿನ ಜನತೆ ನನಗೆ ನೀಡಿರುವ ಅಧಿಕಾರದ ಋಣವನ್ನು ತಾಲೂಕನ್ನು ಅಭಿವೃದ್ಧಿಪಡಿಸುವ ಮೂಲಕ ತೀರಿಸುತ್ತೇನೆ. ಎಲ್ಲ ಗ್ರಾಮಗಳಿಗೂ ಮೂಲ ಸೌಲಭ್ಯಗಳನ್ನು ಕಲ್ಪಿಸಲು ಮೊದಲ ಆದ್ಯತೆ ನೀಡುತ್ತಿದ್ದು ಅದರ ಜತೆಗೆ ಇತರ ಅಭಿವೃದ್ಧಿ ಕಾಮಗಾರಿಗಳನ್ನು ಮಾಡಲಾಗುವುದು. ಜನತೆ ಕಾಂಗ್ರೆಸ್ ಸರ್ಕಾರದ ಅಭಿವೃದ್ಧಿ ಕೆಲಸಗಳು ಹಾಗೂ ಜನಪರವಾದ ಯೋಜನೆಗಳನ್ನು ಗಮನದಲ್ಲಿಟ್ಟುಕೊಂಡು ಮುಂಬರುವ ಲೋಕಸಭೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಬೇಕು ಎಂದರು.
ತೋಟಗಾರಿಕೆ ಇಲಾಖೆ ವತಿಯಿಂದ ವಿವಿಧ ಯೋಜನೆಗಳ ಫಲಾನುಭವಿಗಳಿಗೆ ಸವಲತ್ತುಗಳನ್ನು ವಿತರಿಸಲಾಯಿತು. ಬೆಳ್ಳೂರು ಪಟ್ಟಣದ ಆದಿಮಾದವರಾಯಸ್ವಾಮಿ, ಮೂಲಸಿದ್ದೇಶ್ವರಸ್ವಾಮಿ ದೇವಸ್ಥಾನಗಳ ಜೀರ್ಣೋದ್ಧಾರ ಕಾಮಗಾರಿ ಹಾಗೂ ಉಮರ್ ನಗರದಲ್ಲಿ ಸಿಸಿ ರಸ್ತೆ ಕಾಮಗಾರಿಗೆ ಸಚಿವರು ಭೂಮಿಪೂಜೆ ನೆರವೇರಿಸಿದರು.
ಬೆಳ್ಳೂರು ಪಟ್ಟಣ ಪಂಚಾಯಿತಿ ಸ್ಥಾಯಿ ಸಮಿತಿ ಅಧ್ಯಕ್ಷ ಮಹಮ್ಮದ್ ಯಾಸೀನ್, ಪಟ್ಟಣ ಪಂಚಾಯಿತಿ ಸದಸ್ಯ ಲ್ಯಾಬ್ ಮಂಜು, ಮನ್‌ಮುಲ್ ನಿರ್ದೇಶಕರಾದ ಲಕ್ಷ್ಮೀನಾರಾಯಣ ಮತ್ತು ಮರಿಸ್ವಾಮಿ, ತಾಪಂ ಮಾಜಿ ಸದಸ್ಯ ವೆಂಕಟೇಶ್, ತಾಪಂ ಮಾಜಿ ಅಧ್ಯಕ್ಷ ಮೂಡ್ಲೀಗೌಡ, ಮುಖಂಡರಾದ ಸಮರ್ಥ, ಪಾಪಣ್ಣ, ನರೇಶ್, ವಿಜಯ್ ಸೇರಿದಂತೆ ಮತ್ತಿತರರಿದ್ದರು.