

ಕೆ.ಎಂ.ದೊಡ್ಡಿ: ಮದ್ದೂರು ಕ್ಷೇತ್ರ ವ್ಯಾಪ್ತಿಯ ಕಾಡುಕೊತ್ತನಹಳ್ಳಿ ಗ್ರಾಮದಲ್ಲಿನ ಪರಿಶಿಷ್ಟ ಕಾಲನಿಯ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸಲಾಗುವುದು ಎಂದು ಶಾಸಕ ಕೆ.ಎಂ.ಉದಯ್ ಭರವಸೆ ನೀಡಿದರು.
ಸಮೀಪದ ಕಾಡುಕೊತ್ತನಹಳ್ಳಿ ಗ್ರಾಮದಲ್ಲಿ ಸಮಾಜ ಕಲ್ಯಾಣ ಇಲಾಖೆಯ ವತಿಯಿಂದ 1 ಕೋಟಿ ರೂ. ವೆಚ್ಚದಲ್ಲಿ ಸಿ.ಸಿ ರಸ್ತೆ ಮತ್ತು ಚರಂಡಿ ಕಾಮಗಾರಿಗೆ ಭೂಮಿಪೂಜೆ ನೆರೆವೇರಿಸಿ ಮಾತನಾಡಿದ ಅವರು, ಗ್ರಾಮದ ಅಭಿವೃದ್ಧಿಗೆ ಸರ್ಕಾರದಿಂದ ಹೆಚ್ಚಿನ ಅನುದಾನ ತರಲಾಗುವುದು ಎಂದು ಹೇಳಿದರು.
ಗ್ರಾಮದ ಪರಿಶಿಷ್ಟ ಜಾತಿಯ ಕಾಲನಿ ಕಾಂಗ್ರೆಸ್‌ನ ಭದ್ರಕೋಟೆ. ಚುನಾವಣೆಯಲ್ಲಿ ನನಗೆ ಅತಿ ಹೆಚ್ಚು ಮತಗಳು ಬಂದಿವೆ ಎಂದ ಅವರು, ಈಗಾಗಲೇ ಮಾರಮ್ಮ, ಚಾಮುಂಡೇಶ್ವರಿ, ಕಾಳಮ್ಮ, ತಳ್ಳೂರಮ್ಮ, ಸಿದ್ದಪ್ಪಾಜಿ ದೇವಸ್ಥಾನದ ಜೀರ್ಣೋದ್ಧಾರ ಕಾರ್ಯಕ್ಕೆ ತಲಾ ಮೂರು ಲಕ್ಷ ರೂ., ವೀರಭದ್ರಶ್ವರ ದೇವಸ್ಥಾನಕ್ಕೆ 6 ಲಕ್ಷ ರೂ. ನೀಡಲಾಗಿದೆ ಎಂದು ತಿಳಿಸಿದರು.
ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ತಾಲೂಕು ಅಧ್ಯಕ್ಷ ಬಿ.ಬಸವರಾಜು ಮಾತನಾಡಿ, ಸರ್ಕಾರದಿಂದ ಕ್ಷೇತ್ರದ ಅಭಿವೃದ್ಧಿಗೆ 1300 ಕೋಟಿ ರೂ.ಅನುದಾನ ತಂದು ಅಭಿವೃದ್ಧಿ ಕಾರ್ಯಗಳಿಗೆ ಶಾಸಕರು ಮುನ್ನುಡಿ ಬರೆದಿದ್ದಾರೆ. ಕಾಡು ಕೊತ್ತನಹಳ್ಳಿ ಗ್ರಾಮದಲ್ಲಿ 5 ಕೋಟಿ ರೂ. ವೆಚ್ಚದಲ್ಲಿ ಕಾಲುವೆ ಆಧುನೀಕರಣ ಕಾಮಗಾರಿ ಪ್ರಗತಿಯಲ್ಲಿದೆ ಎಂದು ತಿಳಿಸಿದರು.
ಭಾರತೀನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಣ್ಣೂರು ರಾಜೀವ್, ಮನ್‌ಮುಲ್ ನಿರ್ದೇಶಕ ಹರೀಶ್ ಬಾಬು, ಡಿಸಿಸಿ ಬ್ಯಾಂಕ್ ನಿರ್ದೇಶಕ ಸಂದರ್ಶ, ಕೆಪಿಸಿಸಿ ಸದಸ್ಯ ಚಿದಂಬರ ಮೂರ್ತಿ, ಗ್ರಾಪಂ ಅಧ್ಯಕ್ಷ ವೀರಭದ್ರ, ಎಸ್ಸಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಮೀನ್ ಶಿವಲಿಂಗಯ್ಯ, ನಿರ್ಮಿತಿ ಕೇಂದ್ರದ ಯೋಜನಾ ವ್ಯವಸ್ಥಾಪಕ ಜೈ ಪ್ರಕಾಶ್, ಇಂಜಿನಿಯರ್‌ಗಳಾದ ನಿಶಾಂತ್, ಅರ್ಚನ್ ಕುಮಾರ್, ಗ್ರಾ ಪಂ ಸದಸ್ಯರಾದ ಈ.ರುದ್ರಯ್ಯ, ಈ.ರಾಜು, ಮರಿಸ್ವಾಮಿ, ಸುರೇಶ್ , ಉದ್ಯಮಿ ಮಾದೇಗೌಡ, ಪಿಡಿಒ ಅಶ್ವಿನಿ ಹಲವರು ಉಪಸ್ಥಿತರಿದ್ದರು.