ಕೋಲಾರ ಅಭಿವೃದ್ಧಿಗೆ ಬದ್ಧ

CM sidramayya meeting
ಬೆಂಗಳೂರಿನ ಮುಖ್ಯಮಂತ್ರಿಗಳ ಗೃಹ ಕಚೇರಿ ಕೃಷ್ಣದಲ್ಲಿ ಕೋಲಾರ ಜಿಲ್ಲೆಯ ಶಾಸಕರ ಸಭೆಯು ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ನಡೆಯಿತು. ಡಿಸಿಎಂ ಡಿ.ಕೆ.ಶಿವಕುಮಾರ್​, ಕೋಲಾರ ಜಿಲ್ಲಾ ಉಸ್ತುವಾರಿ ಸಚಿವ ಬಿ.ಎಸ್​.ಸುರೇಶ(ಬೈರತಿ), ಮುಖ್ಯಮಂತ್ರಿಯವರ ರಾಜಕೀಯ ಕಾರ್ಯದರ್ಶಿ ನಸೀರ್​ ಅಹ್ಮದ್​, ಶಾಸಕರಾದ ಕೆ.ವೈ.ನಂಜೇಗೌಡ, ಎಂ.ರೂಪಕಲಾ, ಎಸ್​.ಎನ್​.ನಾರಾಯಣಸ್ವಾಮಿ, ಕೊತ್ತೂರು ಮಂಜುನಾಥ್​ ಇದ್ದರು.
Published on

ಸಿಎಂ ಸಿದ್ದರಾಮಯ್ಯ ಭರವಸೆ | ಸೆಪ್ಟೆಂಬರ್​ ಅಂತ್ಯಕ್ಕೆ ಯರಗೋಳ್​ ಡ್ಯಾಂ ಉದ್ಘಾಟನೆ

ಕೋಲಾರ: ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಎಲ್ಲ ರೀತಿಯ ಸಹಕಾರ ನೀಡುತ್ತೇನೆ. ಪ್ರಸ್ತುತ ಗ್ಯಾರಂಟಿ ಯೋಜನೆಗಳಿಗೆ ಆದ್ಯತೆ ನೀಡಿದ್ದರಿಂದ ಹಿಂದುಳಿದ ಜಿಲ್ಲೆಗೆ ವಿಶೇಷವಾಗಿ ಯೋಜನೆ ಅಥವಾ ಅನುದಾನ ನಿರೀಕ್ಷಿತ ಪ್ರಮಾಣದಲ್ಲಿ ಒದಗಿಸಲಾಗಿಲ್ಲ. ಮುಂದಿನ ದಿನಗಳಲ್ಲಿ ಆದ್ಯತೆ ಮೇರೆಗೆ ಹಂತ ಹಂತವಾಗಿ ಅಭಿವೃದ್ಧಿಪಡಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ನೀಡಿದರು.
ಬೆಂಗಳೂರಿನ ಮುಖ್ಯಮಂತ್ರಿಗಳ ಗೃಹ ಕಚೇರಿ ಕೃಷ್ಣದಲ್ಲಿ ಬುಧವಾರ ಜಿಲ್ಲೆಯ ಆಡಳಿತ ಪಕ್ಷದ ಶಾಸಕರ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಜಿಲ್ಲೆಯ ಪ್ರಮುಖ ಬೇಡಿಕೆಗಳನ್ನು ಈಡೇರಿಸಲು ಸರ್ಕಾರ ಕಟಿಬದ್ಧವಾಗಿದೆ. ಕುಡಿಯುವ ನೀರು, ರಸ್ತೆ ಸೇರಿ ಮೂಲಸೌಲಭ್ಯಗಳಿಗೆ ಆದ್ಯತೆ ನೀಡಲಾಗುವುದು ಎಂದರು.
ಸಭೆಯಲ್ಲಿ ಶಾಸಕ ಕೊತ್ತೂರು ಜಿ.ಮಂಜುನಾಥ್​ ಮಾತನಾಡಿ, ತಾವು ಕೋಲಾರದಿಂದ ಶಾಸಕರಾಗಬೇಕೆಂದು ನಮ್ಮೆಲ್ಲರ ಅಪೇಕ್ಷೆಯಾಗಿತ್ತು. ಆದರೆ ಕಡೇ ಗಳಿಗೆಯಲ್ಲಿ ನನ್ನನ್ನು ಕಣಕ್ಕಿಳಿಸಿದಿರಿ. ಜನರ ನಿರೀಕ್ಷೆ ಹೆಚ್ಚಾಗಿದ್ದು, ಅಭಿವೃದ್ಧಿ ಕುರಿತು ಪ್ರಶ್ನಿಸಲಾರಂಭಿಸಿದ್ದಾರೆ. ಪ್ರಮುಖವಾಗಿ 500 ಎಂಸಿಎ್​ ಸಾಮರ್ಥ್ಯದ ಯರಗೋಳ್​ ಜಲಾಶಯ ತುಂಬಿರುವುದು, ಕೋಲಾರಕ್ಕೆ ಪರೀಕ್ಷಾರ್ಥ ನೀರು ಸರಬರಾಜು ಮಾಡಿ ಯಶಸ್ವಿಯಾಗಿರುವುದರಿಂದ ಮುಂದಿನ ತಿಂಗಳು ಕೋಲಾರ, ಮಾಲೂರು, ಬಂಗಾರಪೇಟೆ ಮತ್ತು ಪೈಪ್​ಲೈನ್​ ಮಾರ್ಗದ 45 ಹಳ್ಳಿಗಳಿಗೆ ನೀರು ಸರಬರಾಜು ಮಾಡಲು ಕ್ರಮಕೈಗೊಳ್ಳಬೇಕಿದೆ. ಡ್ಯಾಂ ನಿಮಾರ್ಣಕ್ಕೆ ಸಹಕರಿಸಿರುವ ತಾವೇ ಉದ್ಘಾಟನೆಗೂ ಬರಬೇಕು ಎಂದು ಮನವಿ ಮಾಡಿದರು. ಇದಕ್ಕೆ ಮುಖ್ಯಮಂತ್ರಿಯವರು ಅಸ್ತು ಎಂದಿದ್ದು, ಸೆಪ್ಟೆಂಬರ್​ ಅಂತ್ಯಕ್ಕೆ ದಿನಾಂಕ ನಿಗದಿಪಡಿಸುವುದಾಗಿ ಭರವಸೆ ನೀಡಿದರು.
ಶಾಸಕ ಎಸ್​.ಎನ್​.ನಾರಾಯಣಸ್ವಾಮಿ, ಕೆಜಿಎಫ್​ ಮತ್ತು ಬಂಗಾರಪೇಟೆ ನಡುವಿನ ಕೈಗಾರಿಕಾ ಪ್ರದೇಶ ವಿಸ್ತರಣೆಗೆ ಕ್ರಮ ತೆಗೆದುಕೊಳ್ಳಬೇಕು. ಹೆಚ್ಚು ಕೈಗಾರಿಕೆಗಳು ಬರುವಂತೆ ಮಾಡಬೇಕು ಎಂದರು. ಸಿಎಂ ಅಪರ ಮುಖ್ಯ ಕಾರ್ಯದರ್ಶಿ ರಜನೀಶ್​ ಗೋಯಲ್​, ಕಾರ್ಯದರ್ಶಿ ಎನ್​. ಜಯರಾಂ, ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಏಕರೂಪ್​ ಕೌರ್​ ಇದ್ದರು.

ಎತ್ತಿನಹೊಳೆ ಕಾಮಗಾರಿ ಪೂರ್ಣಗೊಳಿಸಿ: ಇನ್ನು ಕೋಲಾರ ನಗರ, ಗ್ರಾಮೀಣ ರಸ್ತೆಗಳ ಅಭಿವೃದ್ಧಿಗೆ ವಿಶೇಷ ಅನುದಾನ ಹಾಗೂ ಹೊರವರ್ತುಲ ರಸ್ತೆ ನಿಮಾರ್ಣಕ್ಕೆ ಅಗತ್ಯ ನೆರವು ಒದಗಿಸಬೇಕು. ಎತ್ತಿನಹೊಳೆ ಯೋಜನೆಯನ್ನು ಇನ್ನೂ ತಡ ಮಾಡಿದರೆ ವೆಚ್ಚ ಮತ್ತಷ್ಟು ಏರಿಕೆಯಾಗುವ ಸಾಧ್ಯತೆಯಿದೆ. ಹೀಗಾಗಿ ತ್ವರಿತವಾಗಿ ಕಾಮಗಾರಿ ಪೂರ್ಣಗೊಳಿಸಿ ಜಿಲ್ಲೆಯ ಜನತೆಗೆ ಶುದ್ಧನಿರು ಕೊಡಬೇಕು. ಸರ್ಕಾರಿ ಮೆಡಿಕಲ್​ ಕಾಲೇಜು, ಸೂಪರ್​ ಸ್ಪೆಷಾಲಿಟಿ ಆಸ್ಪತ್ರೆ, ಕೃಷಿ ಮಾರುಕಟ್ಟೆಗೆ ಜಾಗ ಒದಗಿಸುವುದು, ನರಸಾಪುರದಲ್ಲಿ ಇಎಸ್​ಐ ಆಸ್ಪತ್ರೆ ಶೀಘ್ರ ತಲೆ ಎತ್ತುವಂತೆ ಮಾಡಬೇಕು ಎಂದು ಕೊತ್ತೂರು ಮಂಜುನಾಥ್​ ಮನವಿ ಮಾಡಿದರು. ಎಂಎಲ್ಸಿ ಅನಿಲ್​ ಕುಮಾರ್​ ಮಾತನಾಡಿ, ಹಿಂದಿನ ಸರ್ಕಾರಗಳು ಕೋಲಾರ ಮತ್ತು ಜಿಲ್ಲೆಯ ಅಭಿವೃದ್ಧಿ ಕಡೆಗಣಿಸಿದ್ದು, ಬೆಂಗಳೂರಿಗೆ ಸನಿಹದಲ್ಲಿರುವುದರಿಂದ ಅಭಿವೃದ್ಧಿಗೆ ವಿಶೇಷ ಆದ್ಯತೆ ನೀಡಲೇಬೇಕಾದ ಅನಿವಾರ್ಯ ಇದೆ. ಜನರ ನಿರೀಕ್ಷೆ ಹುಸಿಗೊಳಿಸುವಂತಿಲ್ಲ ಎಂದು ಕೊತ್ತೂರು ಬೇಡಿಕೆಗಳಿಗೆ ಧ್ವನಿಗೂಡಿಸಿದರು.

ನಿಗಮ ಮಂಡಳಿಗೆ ನೇಮಿಸಿ: ಹಿರಿಯ ಶಾಸಕನಾಗಿದ್ದು, ಸಚಿವನಾಗುವ ಅವಕಾಶ ಕೈತಪ್ಪಿತು. ಜಿಲ್ಲೆಯ ಯಾವ ಶಾಸಕರಿಗೂ ಸಚಿವರಾಗಲು ಸಾಧ್ಯ ವಾಗಿಲ್ಲ. ಹೀಗಾಗಿ ನಿಗಮ ಮಂಡಳಿ ಅಧ್ಯಕ್ಷರ ನೇಮಕದಲ್ಲಿ ಪರಿಗಣಿಸುವಂತೆ ಶಾಸಕ ಎಸ್​.ಎನ್​.ನಾರಾಯಣಸ್ವಾಮಿ ಸಿಎಂ ಅವರಲ್ಲಿ ಮನವಿ ಸಲ್ಲಿಸಿದರು ಎಂದು ತಿಳಿದುಬಂದಿದೆ.

ಅಭ್ಯರ್ಥಿ ಘೋಷಿಸಿ: ಜಿಲ್ಲೆಯ 6 ಕ್ಷೇತ್ರಗಳಲ್ಲಿ 4 ಕಡೆ ಕಾಂಗ್ರೆಸ್​ ಶಾಸಕರು, ಇಬ್ಬರು ಪರಿಷತ್​ ಸದಸ್ಯರಿದ್ದೇವೆ. ಲೋಕಸಭಾ ಚುನಾವಣೆಗೆ ಕೆಲವೇ ತಿಂಗಳು ಬಾಕಿ ಇರುವುದರಿಂದ ಮುಂಚಿತವಾಗಿ ಅಭ್ಯರ್ಥಿ ಘೋಷಣೆ ಮಾಡಬೇಕು. ಇದರಿಂದ ಅನಾಯಾಸವಾಗಿ ಕ್ಷೇತ್ರವನ್ನು ಗೆದ್ದುಕೊಳ್ಳಬಹುದು ಎಂದು ಶಾಸಕರು, ಎಂಎಲ್ಸಿಗಳು ಒತ್ತಾಯಿಸಿದ್ದು, ಸಿಎಂ, ಡಿಸಿಎಂ ಮುಂದಿನ ಎಂಟು&ಹತ್ತು ದಿನದಲ್ಲಿ ತೀಮಾರ್ನಿಸಲಾಗುವುದು ಎಂದರು.

ಕಾರ್ಮಿಕರ ವಸತಿಗೆ ಕ್ರಮ: ಶಾಸಕಿ ಎಂ.ರೂಪಕಲಾ ಮಾತನಾಡಿ, ಕೆಜಿಎಫ್​ನಲ್ಲಿ 1 ಸಾವಿರ ಎಕರೆಯಲ್ಲಿ ನಿರ್ಮಿಸಲು ಉದ್ದೇಶಿಸಿರುವ ಇಂಟಿಗ್ರೇಟೆಡ್​ ಟೌನ್​ಶಿಪ್​ಗೆ ಅಗತ್ಯ ಅನುದಾನ ಒದಗಿಸುವ ಮೂಲಕ ಶೀಘ್ರ ಚಾಲನೆ ಸಿಗಬೇಕು. ಬಿಜಿಎಂಎಲ್​ ಕಾರ್ಮಿಕರ ಕುಟುಂಬದವರಿಗೆ ವಸತಿ ಒದಗಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದರು.

ಕೋಲಾರ ಹಿಂದುಳಿದ ಜಿಲ್ಲೆಯಾಗಿದ್ದು, ಬೇಡಿಕೆಗಳನ್ನು ಹಂತ ಹಂತವಾಗಿ ಈಡೇರಿಸಲು ಸಹಕರಿಸುತ್ತೇವೆ. ಎತ್ತಿನಹೊಳೆ ಯೋಜನೆ ಶೀಘ್ರ ಪೂರ್ಣಗೊಳಿಸಿ ಕೋಲಾರಕ್ಕೆ ಅಗತ್ಯ ನೀರು ಒದಗಿಸಲು ಬದ್ಧರಾಗಿದ್ದೇವೆ.| ಡಿ.ಕೆ.ಶಿವಕುಮಾರ್​, ಉಪಮುಖ್ಯಮಂತ್ರಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net