

ಹುಳಿಯಾರು:ದಸೂಡಿ ಗಡಿಭಾಗದ ಗ್ರಾಮವಾಗಿದ್ದು, ಇಲ್ಲಿನ ಜನರ ಬೇಡಿಕೆ ಪೂರೈಸಲು ಬದ್ಧನಾಗಿದ್ದೇನೆ ಎಂದು ಶಾಸಕ ಸಿ.ಬಿ.ಸುರೇಶ್ ಬಾಬು ಹೇಳಿದರು.
ಗ್ರಾಮದಲ್ಲಿ ನೂತನವಾಗಿ ನಿರ್ಮಿಸಿದ ಪಶು ಆಸ್ಪತ್ರೆ ಉದ್ಘಾಟಿಸಿ ಮಾತನಾಡಿ, ಈ ಭಾಗದಲ್ಲಿ ಕುರಿ ಮತ್ತು ಜಾನುವಾರುಗಳ ಸಂಖ್ಯೆ ಹೆಚ್ಚಿರುವುದರಿಂದ ಪಶು ಆಸ್ಪತ್ರೆಯ ಅಗತ್ಯವಿತ್ತು. ಸರ್ಕಾರದಿಂದ ಮಂಜೂರಾತಿ ಪಡೆದು ಆಸ್ಪತ್ರೆ ನಿರ್ಮಿಸಲಾಗಿದೆ. ಸುತ್ತಮುತ್ತಲಿನ ಗ್ರಾಮಸ್ಥರು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಕರೆ ನೀಡಿದರು.
ಗ್ರಾಮ ಪಂಚಾಯಿತಿ ಸದಸ್ಯ ಮರಿಯಪ್ಪ ಆಂಬುಲೆನ್ಸ್ ಹಾಗೂ ಪದವಿ ಪೂರ್ವ ಕಾಲೇಜು ಸ್ಥಾಪನೆಗೆ ಮನವಿ ಮಾಡಿದರು. ಸಂಬಂಧಪಟ್ಟ ಸಚಿವರೊಂದಿಗೆ ಚರ್ಚಿಸಿ ಸೌಲಭ್ಯ ಒದಗಿಸಲು ಪ್ರಯತ್ನಿಸುವುದಾಗಿ ಶಾಸಕರು ಭರವಸೆ ನೀಡಿದರು. ಬಗರ್ ಹುಕುಂ ಸಾಗುವಳಿ ಸಮಸ್ಯೆ ಆದಷ್ಟು ಬೇಗ ಪರಿಹರಿಸುವುದಾಗಿ ತಿಳಿಸಿದರು.
ಪಶುಪಾಲನ ಇಲಾಖೆಯ ಸಹಾಯಕ ನಿರ್ದೇಶಕ ಕಾಂತರಾಜ್ ಮಾತನಾಡಿ, ಶಾಸಕರ ಶ್ರಮದಿಂದ ಆಸ್ಪತ್ರೆ ಲಭ್ಯವಾಗಿದೆ. ಇಲ್ಲಿನ ಪ್ರತಿಯೊಂದು ಜಾನುವಾರುಗಳಿಗೆ ಔಷಧ ಸಿಗುವಂತೆ ನೋಡಿಕೊಳ್ಳುವುದು ನಮ್ಮ ಗುರಿ. ಅಗತ್ಯವಿದ್ದಾಗ ನಾವೇ ಸ್ಥಳಕ್ಕೆ ಬಂದು ಚಿಕಿತ್ಸೆ ನೀಡುತ್ತೇವೆ. ಆದರೆ, ಔಷಧಗಳನ್ನು ಯಾರಿಗೂ ಕೈಗೆ ಕೊಡುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ಕಾರ್ಯದರ್ಶಿ ಶಾರದಮ್ಮ, ಮಾಜಿ ಸದಸ್ಯೆ ಕವಿತಾ, ಪಂಚಾಯಿತಿ ಆಡಳಿತಾಧಿಕಾರಿ ಮುದ್ದಲಿಂಗಯ್ಯ ಹಾಗೂ ಗ್ರಾಮದ ಪ್ರಮುಖರು ಇದ್ದರು.