ಹಳಿಯಾಳ ಪಟ್ಟಣದ ಸಮಗ್ರ ಅಭಿವೃದ್ಧಿಗೆ ಬದ್ಧ

HLY RVD CHALANE
Published on

ಹಳಿಯಾಳ: ವೇಗವಾಗಿ ಬೆಳೆಯುತ್ತಿರುವ ಹಳಿಯಾಳ ಪಟ್ಟಣದ ಸಮಗ್ರ ಅಭಿವೃದ್ಧಿಗೆ ತಾವು ಕಂಕಣಬದ್ಧರಾಗಿದ್ದು, ಪಟ್ಟಣದ ಸೌಂದರ್ಯ ಹಾಗೂ ನೈರ್ಮಲ್ಯಕ್ಕೆ ಹೆಚ್ಚಿನ ಆದ್ಯತೆ ನೀಡಲಾಗಿದೆ ಎಂದು ಶಾಸಕ ಆರ್.ವಿ. ದೇಶಪಾಂಡೆ ಹೇಳಿದರು.

ಪಟ್ಟಣದ ಪುರಭವನದಲ್ಲಿ ಶುಕ್ರವಾರ ಪುರಸಭೆಯವರು 14 ಮತ್ತು 15ನೇ ವಿಶೇಷ ಅನುದಾನದಲ್ಲಿ ತಲಾ 10 ಲಕ್ಷ ರೂ. ವೆಚ್ಚದಲ್ಲಿ ಖರೀದಿಸಲಾದ 5 ಘನತಾಜ್ಯ ವಿಲೇವಾರಿ ವಾಹನಗಳಿಗೆ ಚಾಲನೆ ಹಾಗೂ ಕರ್ನಾಟಕ ಕಟ್ಟಡ ಮತ್ತು ಇತರೇ ನಿರ್ಮಾಣ ಕಾರ್ವಿುಕರ ಕಲ್ಯಾಣ ಮಂಡಳಿಯಿಂದ ನೋಂದಾಯಿತ ಕಟ್ಟಡ ಕಾರ್ವಿುಕರಿಗೆ ಗೌಂಡಿ ಕಿಟ್​ಗಳನ್ನು ವಿತರಿಸಿ ಅವರು ಮಾತನಾಡಿದರು.

ಪಟ್ಟಣದ ಚಿಬ್ಬಲಗೇರಿ ರಸ್ತೆಯಲ್ಲಿರುವ 6 ಎಕರೆ ಸರ್ಕಾರಿ ಭೂಮಿಯನ್ನು ಈಗಾಗಲೇ ಪುರಸಭೆಗೆ ಹಸ್ತಾಂತರಿಸಿ ಅದರಲ್ಲಿ 206 ನಿವೇಶನಗಳನ್ನು ಅರ್ಹ ಬಡವರಿಗೆ ಶೀಘ್ರದಲ್ಲಿಯೇ ವಿತರಿಸಲಾಗುವುದು. 11ಕ್ಕೂ ಅಧಿಕ ವಾಣಿಜ್ಯ ಮಳಿಗೆಗಳನ್ನು ನಿರ್ವಿುಸಿ ಅದರಿಂದ ಪುರಸಭೆಗೆ ಪ್ರತಿ ವರ್ಷ 2 ಕೋಟಿ ರೂ. ಆದಾಯ ಬರುವಂತೆ ಮಾಡಲಾಗಿದೆ ಎಂದರು.

ಪಟ್ಟಣದಲ್ಲಿ ಅನಧಿಕೃತ ಬಡಾವಣೆಗಳು ತಲೆ ಎತ್ತುತ್ತಿರುವ ಬಗ್ಗೆ ದೂರುಗಳು ಬರುತ್ತಿವೆ. ಬಡಾವಣೆಗಳಲ್ಲಿ ಮೂಲಸೌಕರ್ಯಗಳು ಹಾಗೂ ಅಭಿವೃದ್ಧಿ ಕಾಮಗಾರಿಗಳ ಪರಿಶೀಲನೆ ನಡೆಸದೇ ಪುರಸಭೆಯವರು ಹಸ್ತಾಂತರ ಮಾಡಿಕೊಳ್ಳುತ್ತಿರುವುದು ಕಾನೂನುಬದ್ಧ್ದಾಗಿ ಸರಿಯಾದ ಕ್ರಮವಲ್ಲ ಎಂದು ಶಾಸಕರು ಎಚ್ಚರಿಸಿದರು.

ಅಭಿವೃದ್ಧಿ ಕಾಣದ ಬಡಾವಣೆಗಳನ್ನು ಹಸ್ತಾಂತರಿಸಿಕೊಳ್ಳಲು ಆಸಕ್ತಿ ವಹಿಸಿದರೆ ಪುರಸಭೆಯ ಮುಖ್ಯಾಧಿಕಾರಿಗಳನ್ನು ಅಮಾನತು ಮಾಡುವುದಾಗಿ ಖಡಕ್ ಎಚ್ಚರಿಕೆ ನೀಡಿದರು. ಅಲ್ಲದೆ, ಪುರಸಭೆಯ ಸದಸ್ಯರು ಪ್ರಾಮಾಣಿಕವಾಗಿ ಕೆಲಸ ನಿರ್ವಹಿಸಬೇಕು ಹಾಗೂ ಇಂತಹ ಕಾನೂನುಬದ್ಧವಲ್ಲದ ಕೆಲಸಕ್ಕೆ ಸಹಕಾರ ನೀಡಬಾರದು ಎಂದು ಸೂಚಿಸಿದರು.

ಕಾರ್ವಿುಕ ಇಲಾಖೆಯಿಂದ ಹಳಿಯಾಳ ಮತ್ತು ದಾಂಡೇಲಿಯಲ್ಲಿ ಗಾರೆ ಕೆಲಸ ಮಾಡುವ 67 ಗೌಂಡಿಗಳಿಗೆ 3 ಸಾವಿರ ರೂ.ಗಳ ಮೌಲ್ಯದ ಕಿಟ್​ಗಳನ್ನು ವಿತರಿಸಲಾಯಿತು. ಪುರಸಭೆ ಅಧ್ಯಕ್ಷೆ ದ್ರೌಪದಿ ಅಗಸರ, ಉಪಾಧ್ಯಕ್ಷೆ ಲಕ್ಷ್ಮೀ ವಡ್ಡರ, ತಹಸೀಲ್ದಾರ್ ಪ್ರವೀಣಕುಮಾರ ಹುಚ್ಚನ್ನವರ, ಮುಖ್ಯಾಧಿಕಾರಿ ಅಶೋಕ ಸಾಳೇನ್ನವರ, ಕಾರ್ವಿುಕ ಅಧಿಕಾರಿ ಲಕ್ಷ್ಮೀ ಬಾಯಿ, ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net