ಅಳ್ನಾವರ ತಾಲೂಕಿನ ಸಮಗ್ರ ಅಭಿವೃದ್ಧಿಗೆ ಬದ್ಧ

ALN LAD
Published on

ಅಳ್ನಾವರ: ತಾಲೂಕಿನ ಸಮಗ್ರ ಅಭಿವೃದ್ಧಿಗೆ ಬದ್ಧನಾಗಿದ್ದು, ಈಗಾಗಲೇ ಹಲವಾರು ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳುವ ಮೂಲಕ ಅಳ್ನಾವರವನ್ನು ಮಾದರಿ ತಾಲೂಕನ್ನಾಗಿಸುವಲ್ಲಿ ನಿರಂತರ ಪ್ರಯತ್ನ ನಡೆಸಿದ್ದೇನೆ ಎಂದು ಕಾರ್ವಿುಕ ಸಚಿವ ಸಂತೋಷ ಲಾಡ್ ಹೇಳಿದರು.

ಅಳ್ನಾವರ ಪಪಂ ಆವರಣದಲ್ಲಿ ಜಿಲ್ಲಾಡಳಿತ ಹಾಗೂ ಅಳ್ನಾವರ ತಾಲೂಕಾಡಳಿತ ಮತ್ತು ವಿವಿಧ ಇಲಾಖೆಗಳ ಸಹಯೋಗದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಪ್ರಜಾ ಸೌಧ ನಿರ್ಮಾಣ ಅಡಿಗಲ್ಲು ಸಮಾರಂಭ ಹಾಗೂ ನೂತನ ಕಂದಾಯ ಗ್ರಾಮಗಳ ಫಲಾನುಭವಿಗಳಿಗೆ ಹಕ್ಕು ಪತ್ರ ವಿತರಣೆ ಮತ್ತು ಫಲಾನುಭವಿಗಳಿಗೆ ವಿವಿಧ ಇಲಾಖೆಗಳ ಸೌಲಭ್ಯಗಳ ವಿತರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಪ್ರಜಾಸೌಧ ನಿರ್ಮಾಣಕ್ಕೆ 8.60 ಕೋಟಿ ರೂ. ಅನುದಾನ ನೀಡಿದೆ. 26.30 ಲಕ್ಷ ರೂ. ವೆಚ್ಚದಲ್ಲಿ ನಿರ್ವಿುಸಿರುವ ಅಳ್ನಾವರ ನಾಡಕಚೇರಿ ಕಟ್ಟಡ, 50.13 ಲಕ್ಷ ರೂ. ವೆಚ್ಚದಲ್ಲಿ ಅಳ್ನಾವರ ಪಶು ಆಸ್ಪತ್ರೆ ಕಟ್ಟಡ ಮತ್ತು 12 ಲಕ್ಷ ರೂ. ವೆಚ್ಚದಲ್ಲಿ ಅಳ್ನಾವರ ಅಂಗನವಾಡಿ ನಂ.3 ರ ನೂತನ ಕಟ್ಟಡ ಸೇರಿ ಅಂದಾಜು ಸುಮಾರು 9.91 ಕೋಟಿ ರೂ.ಗಳ ಮೊತ್ತದ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಲೋಕಾರ್ಪಣೆಗೊಳಿಸಲಾಗಿದೆ ಎಂದರು.

ತಾಲೂಕಿನ ಸಿದ್ದಾಪೂರ ಹೊಸ ಕಂದಾಯ ಗ್ರಾಮದ 57 ಜನ ಫಲಾನುಭವಿಗಳಿಗೆ, ಅಂಬೊಳ್ಳಿ (ಕೃಷ್ಣಗಿರಿ) ಉಪಕಂದಾಯ ಗ್ರಾಮದ 25 ಜನ ಫಲಾನುಭವಿಗಳಿಗೆ ಹಕ್ಕುಪತ್ರಗಳನ್ನು ಸಚಿವ ಲಾಡ್ ವಿತರಿಸಿದರು.

ಬಾಲವಿಕಾಸ ಅಕಾಡೆಮಿ ಅಧ್ಯಕ್ಷ ಸಂಗಮೇಶ ಅಪ್ಪಾಜಿ ಬಬಲೇಶ್ವರ, ಜಿಲ್ಲಾಧಿಕಾರಿ ದಿವ್ಯ ಪ್ರಭು, ಜಿಪಂ ಸಿಇಒ ಭುವನೇಶ ಪಾಟೀಲ, ಎಸ್ಪಿ ಡಾ. ಗೋಪಾಲ ಎಂ. ಬ್ಯಾಕೋಡ, ಎಸಿ ಶಾಲಂ ಹುಸೇನ್, ಅಳ್ನಾವರ ತಹಸೀಲ್ದಾರ್ ಬಸವರಾಜ ಬೆಣ್ಣೆಶಿರೂರ,ಪಪಂ ಅಧ್ಯಕ್ಷ ಮಧು ಬಡಸ್ಕರ, ಉಪಾಧ್ಯಕ್ಷ ಅಮೂಲ ಗುಂಜಿಕರ, ಕೃಷಿ ಇಲಾಖೆ ಉಪ ನಿರ್ದೇಶಕಿ ಜಯಶ್ರೀ ಹಿರೇಮಠ, ಸಹಾಯಕ ಕೃಷಿ ನಿರ್ದೇಶಕ ರಾಜಶೇಖರ ಅಣಗೌಡರ, ತೋಟಗಾರಿಕೆ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ಇಮ್ತಿಯಾಜ್ ಚಂಗಾಪುರಿ, ತಾಪಂ ಇಒ ಪ್ರಶಾಂತ ತುರಕಾಣಿ, ಶಿರಸ್ತೇದಾರ್ ಮನೋಹರ ಪತ್ತಾರ, ಇತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net