ವಿದ್ಯಾರ್ಥಿನಿಯರ ಸರ್ವತೋಮುಖ ಅಭಿವೃದ್ಧಿಗೆ ಬದ್ಧ

Committed to the all-round development of girl students
Published on

ವಿಜಯಪುರ: ವಿದ್ಯಾರ್ಥಿನಿಯರ ಸರ್ವತೋಮುಖ ಅಭಿವೃದ್ಧಿ ಮತ್ತು ವ್ಯಕ್ತಿತ್ವ ಬೆಳವಣಿಗೆಗೆ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯ ಕಟಿಬದ್ಧವಾಗಿದೆ ಎಂದು ಕುಲಪತಿ ಪ್ರೊ. ವಿಜಯಾ ಕೋರಿಶೆಟ್ಟಿ ಹೇಳಿದರು.ನಗರದ ಮಹಿಳಾ ವಿವಿ ಆವರಣದಲ್ಲಿರುವ ಡಾ. ಬಿ.ಆರ್​. ಅಂಬೇಡ್ಕರ್​ ಸಭಾಂಗಣದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಸ್ನಾತಕೋತ್ತರ ತರಗತಿಗಳ ಪ್ರವೇಶಾತಿ ಕೌನ್ಸೆಲಿಂಗ್​ ಉದ್ಘಾಟಿಸಿ ಅವರು ಮಾತನಾಡಿದರು.

ವಿದ್ಯಾರ್ಥಿನಿಯರ ಜ್ಞ್ಞಾನಾರ್ಜನೆಗೆ ಬೇಕಾದ ಎಲ್ಲ ಬಗೆಯ ಅವಕಾಶಗಳನ್ನು ಮಹಿಳಾ ವಿವಿ ಸೃಷ್ಟಿಸುತ್ತದೆ ಎಂದರು.

ಮಹಿಳಾ ವಿಶ್ವವಿದ್ಯಾನಿಲಯದಲ್ಲಿ ಅತ್ಯಾಧುನಿಕ ಬೋಧನಾ ತಂತ್ರಗಳು& ಸ್ಮಾರ್ಟ್​ಬೋರ್ಡ್​ ಮತ್ತು ಡಿಜಿಟಲ್​ ಕ್ಲಾಸ್​ರೂಂ, ಮಲ್ಟಿಮೀಡಿಯಾ ಲ್ಯಾಬ್​ ಮತ್ತು ಲಾಂಗ್ವೇಜ್​ ಲ್ಯಾಬ್​, ಸುಸಜ್ಜಿತ ಪ್ರಯೋಗಾಲಯಗಳು, ಸುಸಜ್ಜಿತ ಹಾಸ್ಟೇಲ್​ ವ್ಯವಸ್ಥೆ, ಸಾಫ್ಟ್​ವೇರ್​ ಟೆಕ್ನಾಲಜಿ ಪಾರ್ಕ್​, 24*7 ಇಂಟರ್​ನೆಟ್​ ಸೌಲಭ್ಯ, ಮಕ್ಕಳ ಲಾಲನೆ&ಪಾಲನೆಗೆ ಡೇಕೇರ್​ ಸೆಂಟರ್​, ನಗರದ ವಿವಿಧ ಭಾಗಗಳಿಂದ ವಿಶ್ವವಿದ್ಯಾಲಯಕ್ಕೆ ವಾಹನ ವ್ಯವಸ್ಥೆ ಸೇರಿ ಹಲವಾರು ಸೌಲಭ್ಯಗಳನ್ನು ಒದಗಿಸಲಾಗುವುದು ಎಂದು ತಿಳಿಸಿದರು.

ಮಹಿಳಾ ಸಬಲೀಕರಣಕ್ಕಾಗಿ ಹತ್ತು ಹಲವು ವಿನೂತನ ಯೋಜನೆಗಳನ್ನು ರೂಪಿಸಿ ಕಾರ್ಯಗತಗೊಳಿಸುತ್ತಿದೆ. ಮಹಿಳೆಯರ ಜ್ಞಾನ ಸಂಪಾದನೆ, ಸಂಸತಿ, ಸಂಪನ್ನತೆ ಹೆಚ್ಚಿಸಲು ನಿರಂತರ ತುಡಿಯುತ್ತಿದೆ. ಅಲ್ಲದೆ, ಗ್ರಾಮೀಣ ಪ್ರದೇಶದ ಮಹಿಳೆಯರ ಆರ್ಥಿಕ, ಸಾಮಾಜಿಕ ಉನ್ನತಿಗೂ ಹಲವಾರು ಕಾರ್ಯಕ್ರಮಗಳನ್ನು ರೂಪಿಸಿ ಜಾರಿಗೊಳಿಸುತ್ತಿದ್ದು, ಇದರ ಪ್ರಯೋಜನಗಳನ್ನು ವಿದ್ಯಾರ್ಥಿನಿಯರು ಪಡೆದುಕೊಳ್ಳಬೇಕೆಂದು ಸಲಹೆ ನೀಡಿದರು.

ಕುಲಸಚಿವ ಶಂಕರಗೌಡ ಸೋಮನಾಳ ಮಾತನಾಡಿ, ಮಹಿಳೆಯರು ಸುಲಭವಾಗಿ, ಆಕರ್ಷಕವಾಗಿ ಮತ್ತು ಕೈಗೆಟುಕುವ ದರದಲ್ಲಿ ಉನ್ನತ ಶಿಕ್ಷಣ ಪಡೆಯಲು ಸೂಕ್ತ ವಾತಾವರಣ ನಿರ್ಮಿಸುವಲ್ಲಿ ಮಹಿಳಾ ವಿಶ್ವ ವಿದ್ಯಾಲಯ ಹಲವು ಕ್ರಮಗಳನ್ನು ಕೈಗೊಂಡಿದೆ ಎಂದರು.

ಮೌಲ್ಯಮಾಪನ ಕುಲಸಚಿವ ಬಿ.ಎಲ್​. ಲಕ್ಕಣ್ಣವರ, ಸಕ್ಪಾಲ್​ ಹೂವಣ್ಣ, ರಮೇಶ ಕೆ., ಆರ್​.ವಿ. ಗಂಗಶೆಟ್ಟಿ, ರಾಜು ಬಾಗಲಕೋಟೆ, ಅನಿತಾ ನಾಟೀಕರ, ಪಿ.ಜಿ. ತಡಸದ ಮತ್ತಿತರರಿದ್ದರು.

ವಿಜಯಪುರದ ಮಹಿಳಾ ವಿವಿ ಆವರಣದಲ್ಲಿರುವ ಡಾ. ಬಿ.ಆರ್​. ಅಂಬೇಡ್ಕರ್​ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಸ್ನಾತಕೋತ್ತರ ತರಗತಿಗಳ ಪ್ರವೇಶಾತಿ ಕೌನ್ಸೆಲಿಂಗ್​ ಕಾರ್ಯಕ್ರಮದಲ್ಲಿ ಕುಲಪತಿ ಪ್ರೊ. ವಿಜಯಾ ಕೋರಿಶೆಟ್ಟಿ ಮಾತನಾಡಿದರು. ಶಂಕರಗೌಡ ಸೋಮನಾಳ, ಬಿ.ಎಲ್​. ಲಕ್ಕಣ್ಣವರ, ಸಕ್ಪಾಲ್​ ಹೂವಣ್ಣ ಮತ್ತಿತರರಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net