ಜಿಲ್ಲೆಯ ಟೆಲಿಕಾಂ ನೆಟ್ವರ್ಕ್ ಬಲಪಡಿಸಲು ಬದ್ಧ

BSNL Tower Innaguration
Published on

ಕುಮಟಾ: ನನ್ನನ್ನು ನೀವು ಸಂಸತ್ತಿಗೆ ಆಯ್ಕೆಮಾಡಿ ಕಳುಹಿಸಿದ ನಂತರ ಕ್ಷೇತ್ರದ ಅಭಿವೃದ್ಧಿಗೆ ಕೇಂದ್ರ ಸರ್ಕಾರದಿಂದ ಆಗಬೇಕಾದ ಕೆಲಸಗಳ ಬಗ್ಗೆ ಪ್ರಾಮಾಣಿಕವಾಗಿ ಪ್ರಯತ್ನಿಸುತ್ತಿದ್ದೇನೆ. ಈಗಾಗಲೇ ಉತ್ತರ ಕನ್ನಡ ಜಿಲ್ಲೆಗೆ 329 ಬಿ.ಎಸ್.ಎನ್.ಎಲ್ ಟವರ್ ಮಂಜೂರಿ ಮಾಡಿಸಿದ್ದೇನೆ. ಈಗಾಗಲೇ ಕಾರ್ಯಚರಿಸುತ್ತಿರುವ ಬಿ.ಎಸ್.ಎನ್.ಎಸ್ ಟವರ್​ಗಳಲ್ಲಿ ವಿದ್ಯುತ್ ವ್ಯತ್ಯಯವಾದಾಗ ತೊಂದರೆ ಆಗದಂತೆ ಜನರೇಟರ್ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದರು.

ತಾಲೂಕಿನ ಮಿರ್ಜಾನದ ಕಡಕೋಡ ಹಾಗೂ ಕತಗಾಲ ಸನಿಹದ ಸಂಡೊಳ್ಳಿಯಲ್ಲಿ ಎರಡು ಹೊಸ 4ಜಿ ಬಿಎಸ್​ಎನ್​ಎಲ್ ಟವರ್​ಗಳನ್ನು ಉದ್ಘಾಟಿಸಿ ಮಾತನಾಡಿದರು.

ಕೇಂದ್ರ ಸರ್ಕಾರದ ಯೋಜನೆಗಳ ಅನುಷ್ಠಾನದ ಬಗ್ಗೆ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಸಭೆ ಜರುಗಿಸಿ, ಪರಿಶೀಲಿಸಿದ್ದೇನೆ. ಪ್ರತಿಯೊಬ್ಬ ಫಲಾನುಭವಿಗೆ ಕೇಂದ್ರದ ಯೋಜನೆ ತಲುಪುವಂತಾಗಬೇಕು ಸಾರ್ವಜನಿಕರು ಅದರ ಸದುಪಯೋಗ ಪಡೆದುಕೊಳ್ಳಬೇಕು ಎಂದರು.

ಶಾಸಕ ದಿನಕರ ಶೆಟ್ಟಿ ಮಾತನಾಡಿ, ಹಿಂದೆ ಯುಪಿಎ ರ್ಸಾರದ ಕಾಲದಲ್ಲಿ 2ಜಿ ಹಗರಣ ಸೇರಿ ಹಲವು ನಡೆದಿದ್ದು, ಮೋದಿಜಿ ಪ್ರಧಾನಿಯಾದ ನಂತರ ಯಾವುದೇ ಹಗರಣ ಇಲ್ಲದೇ ದೇಶವು ವೇಗವಾಗಿ ಅಭಿವೃದ್ಧಿ ಪಥದತ್ತ ಸಾಗುತ್ತಿದೆ. ಮೊಬೈಲ್ ಕರೆ ದರವೂ ಮೋದಿಜಿ ಬಂದ ನಂತರ ತೀವ್ರವಾಗಿ ಕಡಿಮೆಯಾಗಿದೆ. ನಮ್ಮ ಜಿಲ್ಲೆಗೆ 250ಕ್ಕೂ ಹೆಚ್ಚು ಟವರ್ ಮಂಜೂರಿಯಾಗಿದೆ. ಕೇವಲ ಟವರ್ ಮಾತ್ರವಲ್ಲದೇ ಗೋಕರ್ಣಕ್ಕೆ ಮತ್ತು ಗೋಕರ್ಣದಿಂದ ಓಂ ಬೀಚ್ ರಸ್ತೆ ಮಾಡಿಕೊಡುವ ಭರವಸೆಯನ್ನು ಸಂಸದರು ನೀಡಿದ್ದಾರೆ ಎಂದರು.

ಬಿಎಸ್​ಎನ್​ಎಲ್ ಅಧಿಕಾರಿಗಳಾದ ಜಿಎಂ ಸಂತೋಷ್ ಚೌಹಾಣ, ಜೆಟಿಒ ಸಂದೀಪ್, ವಿ.ಎಚ್.ನಾಯಕ ಬೆಣ್ಣೆ, ರಾಮನಾಥ ಶಾನಭಾಗ, ಬಿಜೆಪಿ ಜಿಲ್ಲಾಧ್ಯಕ್ಷ ಎನ್.ಎಸ್.ಹೆಗಡೆ, ಮಂಡಲಾಧ್ಯಕ್ಷ ಜಿ.ಐ.ಹೆಗಡೆ, ಸ್ಥಳೀಯರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net