ವೈದ್ಯಕೀಯ ಸವಲತ್ತು ಒದಗಿಸಲು ಬದ್ಧ

cm siddaramayya
Published on

ಮೈಸೂರು: ಬಡವರಿಗೆ, ದುಡಿಯುವ ವರ್ಗಗಳಿಗೆ ಉಚಿತ ಅಥವಾ ಕಡಿಮೆ ಖರ್ಚಿನಲ್ಲಿ ಆರೋಗ್ಯ ಸೇವೆ ಸಿಗಬೇಕು ಎನ್ನುವುದು ನಮ್ಮ ಸರ್ಕಾರದ ಕಾಳಜಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ವೈದ್ಯಕೀಯ ಶಿಕ್ಷಣ ಇಲಾಖೆ ವತಿಯಿಂದ ನಗರದ ಪಿಕೆಟಿಬಿ ಆಸ್ಪತ್ರೆ ಆವರಣದಲ್ಲಿ ನಿರ್ಮಿಸಲು ಉದ್ದೇಶಿಸಿರುವ ಕಿದ್ವಾಯಿ ಸ್ಮಾರಕ ಗಂಥಿ ಸಂಸ್ಥೆಯ ಪೆರಿಫೆರಲ್ ಕ್ಯಾನ್ಸರ್ ಕೇಂದ್ರದ ಕಟ್ಟಡ ಶಂಕುಸ್ಥಾಪನೆ ಮತ್ತು ವೈದ್ಯಕೀಯ ಸಂಶೋಧನಾ ಸಂಸ್ಥೆಯ ಬಾಲಕಿಯರ ವಿದ್ಯಾರ್ಥಿನಿಲಯವನ್ನು ಶುಕ್ರವಾರ ಉದ್ಘಾಟಿಸಿ ಮಾತನಾಡಿದ ಅವರು, ಆರೋಗ್ಯ ಸಂಬಂಧ ಸರ್ಕಾರ ಕೋಟ್ಯಂತರ ರೂಪಾಯಿ ಖರ್ಚು ಮಾಡುತ್ತಿದೆ. ಅದು ಸಫಲ ಆಗಬೇಕು. ಯಾವುದೇ ಕಾರಣಕ್ಕೂ ರೋಗಿಗಳಿಗೆ ತೊಂದರೆ ಆಗಬಾರದು. ಸರ್ಕಾರಿ ಆಸ್ಪತ್ರೆಗೆ ದುಡ್ಡು ಇರುವವರು ಬರುವುದಿಲ್ಲ. ಸರ್ಕಾರಿ ಆಸ್ಪತ್ರೆಗಳಲ್ಲೂ ಖಾಸಗಿ ಆಸ್ಪತ್ರೆ ರೀತಿ ಸೇವೆ ಸಿಗಬೇಕು. ಜಯದೇವ ಆಸ್ಪತ್ರೆಯಲ್ಲಿ ಒಳ್ಳೆಯ ಸೇವೆ ನೀಡುತ್ತಿದ್ದಾರೆ. ಈ ಬಗ್ಗೆ ಸಾರ್ವಜನಿಕರು ಮಾತನಾಡಿಕೊಳ್ಳುತ್ತಿದ್ದಾರೆ. ಬಡವರ ಪರ ಹಾಗೂ ಸಮಾಜಮುಖಿ ಮನಸ್ಸು ಇದ್ದರೆ ಎಲ್ಲವೂ ಸಾಧ್ಯವಾಗುತ್ತದೆ ಎಂದು ಹೇಳಿದರು.

ಸರ್ಕಾರಿ ಆಸ್ಪತ್ರೆಯ ವೈದ್ಯರು ಬಡವರ ಪರ ಇರಬೇಕು. ಜತೆಗೆ, ಅವರಲ್ಲಿ ಮಾನವೀಯತೆ ಇರಬೇಕು. ಆಗ ಅವರು ರೋಗಿಗಳಿಗೆ ಉತ್ತಮ ಸೇವೆ ನೀಡಲು ಸಾಧ್ಯವಾಗುತ್ತದೆ. ವೈದ್ಯಕೀಯ ವೃತ್ತಿ ಸಮಾಜ ಸೇವೆಯ ಕೆಲಸವಾಗಿದೆ. ತಮಗೆ ಉತ್ತಮ ಸೇವೆ ನೀಡಿದ ವೈದ್ಯರನ್ನು ಸಾರ್ವಜನಿಕರು ಸದಾ ನೆನೆಯುತ್ತಾರೆ. ಒಳ್ಳೆಯ ವೈದ್ಯ ಎಂದು ಎಲ್ಲ ಕಡೆ ಅವರ ಬಗ್ಗೆ ಪ್ರಚಾರ ಮಾಡುತ್ತಾರೆ. ಹಾಗಾಗಿ, ಪ್ರತಿಯೊಬ್ಬ ವೈದ್ಯ ಮಾನವೀಯತೆ ಬೆಳೆಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಬೆಂಗಳೂರಿನ ನಂತರ ವೇಗವಾಗಿ ಬೆಳೆಯುತ್ತಿರುವ ನಗರ ಮೈಸೂರು. ಹೀಗಾಗಿ, ಎಲ್ಲ ರೀತಿಯ ಅಗತ್ಯ ವೈದ್ಯಕೀಯ ಸವಲತ್ತುಗಳನ್ನು ಮೈಸೂರಿಗೆ ಒದಗಿಸಬೇಕಾಗಿದ್ದು, ಇದಕ್ಕೆ ನಾನು ಬದ್ದವಾಗಿದ್ದೇನೆ. ಕ್ಯಾನ್ಸರ್ ಈಗ ಹೆಚ್ಚಾಗುತ್ತಿದೆ. ಅದು ಎಲ್ಲ ವಯೋಮಾನದವರಿಗೂ ಬರುತ್ತಿದೆ. ಬೆಂಗಳೂರಿನಲ್ಲಿ ಮಾತ್ರ ಕಿದ್ವಾಯಿ ಆಸ್ಪತ್ರೆ ಇದೆ. ಇತ್ತೀಚೆಗೆ ಕಲುಬರಗಿಯಲ್ಲೂ ಆಗಿದೆ. ಕ್ಯಾನ್ಸರ್ ರೋಗಿಗಳಿಗೆ ಕೈಗೆಟಕುವ ದರದಲ್ಲಿ ಮತ್ತು ಹತ್ತಿರದಲ್ಲಿ ವೈದ್ಯಕೀಯ ಸೇವೆ ಸಿಗಬೇಕು. ಸದ್ಯ ಬೆಂಗಳೂರಿನ ಕಿದ್ವಾಯಿ ಆಸ್ಪತ್ರೆಗೆ ಹೆಚ್ಚಿನ ಒತ್ತಡ ಇದೆ. ಬೇರೆ ಜಿಲ್ಲಾ ಕೇಂದ್ರದಲ್ಲೂ ಕಿದ್ವಾಯಿ ಆಸ್ಪತ್ರೆ ಸ್ಥಾಪಿಸಿದರೆ ಒತ್ತಡ ಕಡಿಮೆಯಾಗುತ್ತದೆ. ಈ ಭಾಗದ ರೋಗಿಗಳಿಗೆ ಉತ್ತಮ ಚಿಕಿತ್ಸೆ ಸಿಗಲಿ ಎಂದು ಆಸ್ಪತ್ರೆ ನಿರ್ಮಾಣ ಮಾಡುತ್ತಿದ್ದೇವೆ ಎಂದು ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net