ಪೌರಕಾರ್ಮಿಕರಿಗೆ ನಿವೇಶನ ಒದಗಿಸಲು ಬದ್ಧ: ವೆಂಕಟ್ ರಾಜಾ

pourakarmika
Published on

ಮಡಿಕೇರಿ: ನಿವೇಶನ ರಹಿತ ಪೌರಕಾರ್ಮಿಕರ ಕುಟುಂಬಕ್ಕೆ ನಿವೇಶನ ಒದಗಿಸಲು ಬದ್ಧವಾಗಿದೆ ಎಂದು ಜಿಲ್ಲಾಧಿಕಾರಿ ವೆಂಕಟ್ ರಾಜಾ ತಿಳಿಸಿದರು.

ನಗರದ ಜಿಲ್ಲಾಧಿಕಾರಿ ಅವರ ಕಚೇರಿ ಸಭಾಂಗಣದಲ್ಲಿ ಶನಿವಾರ ನಡೆದ ಸಫಾಯಿ ಕರ್ಮಚಾರಿಗಳ/ಮ್ಯಾನ್ಯುವೆಲ್ ಸ್ಕ್ಯಾವೆಂಜರ್‌ಗಳ ಜಿಲ್ಲಾ ಜಾಗೃತಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ತಾಲೂಕು ಪಂಚಾಯಿತಿ ಇಒ ಅವರು ಪೌರಕಾರ್ಮಿಕರಿಗೆ ನಿವೇಶನ ಗುರುತಿಸಬೇಕು. ಜೊತೆಗೆ ಕೊಳಚೆ ನಿರ್ಮೂಲನಾ ಮಂಡಳಿ ವತಿಯಿಂದ ಮನೆ ನಿರ್ಮಾಣಕ್ಕೆ ಅಗತ್ಯ ಕ್ರಮವಹಿಸುವಂತೆ ಜಿಲ್ಲಾಧಿಕಾರಿ ನಿರ್ದೇಶನ ನೀಡಿದರು.

ಸಭೆಯ ಆರಂಭದಲ್ಲಿ ಮಾತನಾಡಿದ ಸಮಿತಿ ಸದಸ್ಯ ಡಿ.ಆರ್.ರಾಜು, ಗೋಣಿಕೊಪ್ಪದಲ್ಲಿ ಪೌರಕಾರ್ಮಿಕರು ಎರಡು ಬದಿ ಚರಂಡಿ ನೀರು ಹರಿಯುವ ಮಧ್ಯದಲ್ಲಿ ಪ್ರಾಣಿಗಳಂತೆ ವಾಸ ಮಾಡುತ್ತಿದ್ದು, ಈ ಕುಟುಂಬಗಳಿಗೆ ನಿವೇಶನ ಒದಗಿಸಿ ಗೃಹಭಾಗ್ಯ ಯೋಜನೆಯಡಿ ಮನೆ ನಿರ್ಮಿಸಿಕೊಡಬೇಕು. ಪೌರಕಾರ್ಮಿಕರು ಎರಡು ತಲೆಮಾರುಗಳಿಂದ ಅದೇ ಸ್ಥಳದಲ್ಲಿಯೇ ವಾಸ ಮಾಡುತ್ತಿದ್ದು, ಇವರಿಗೆ ಇದುವರೆಗೆ ನಿವೇಶನ ಒದಗಿಸಿಲ್ಲ. ಆದ್ದರಿಂದ ಮಾನವೀಯ ದೃಷ್ಟಿಯಿಂದ ಜಿಲ್ಲೆಯಲ್ಲಿನ ನಿವೇಶನ ರಹಿತ ಪೌರಕಾರ್ಮಿಕರಿಗೆ ವಸತಿ ಹಾಗೂ ಮನೆ ನಿರ್ಮಿಸಿಕೊಡಬೇಕು ಎಂದು ಕೋರಿದರು.

ಪೌರಕಾರ್ಮಿಕರಲ್ಲಿ ಕೆಲವರಿಗೆ ಖಾಯಂ ಆಗಿದ್ದು, ಇನ್ನು ಹಲವರಿಗೆ ಖಾಯಂ ಮಾಡಿಲ್ಲ. ಆ ನಿಟ್ಟಿನಲ್ಲಿ ಪೌರಕಾರ್ಮಿಕರಿಗೆ ಸೂಕ್ತ ಸೇವಾ ಭದ್ರತೆ ಒದಗಿಸಬೇಕು ಎಂದರು.

ಸಮಿತಿ ಸದಸ್ಯರಾದ ರಂಗಸ್ವಾಮಿ ಮಾತನಾಡಿ, ಪೌರಕಾರ್ಮಿಕರಿಗೆ ಸೇವಾ ಭದ್ರತೆ ಒದಗಿಸುವುದರ ಜೊತೆಗೆ ನೇಮಕಾತಿ ಆದೇಶ ಪತ್ರ ನೀಡಬೇಕು. ಜಿಲ್ಲೆಯ ಸ್ಥಳೀಯ ಸಂಸ್ಥೆ ವ್ಯಾಪ್ತಿಗಳಲ್ಲಿ ಪೌರಕಾರ್ಮಿಕರು ಕರ್ತವ್ಯ ನಿರ್ವಹಿಸುತ್ತಿದ್ದು, ನಿವೇಶನ ರಹಿತ ಪೌರಕಾರ್ಮಿಕ ಕುಟುಂಬಗಳಿಗೆ ನಿವೇಶನ ಒದಗಿಸಬೇಕಿದೆ. ಪೌರಕಾರ್ಮಿಕ ವೃತ್ತಿಯನ್ನೇ ನಂಬಿಕೊಂಡು ಬದುಕುತ್ತಿದ್ದು, ಇಂತಹ ಕುಟುಂಬಗಳಿಗೆ ನಿವೇಶನ ಜೊತೆಗೆ ಗೃಹಭಾಗ್ಯ ಯೋಜನೆಯಡಿ ಮನೆ ನಿರ್ಮಿಸಬೇಕು ಎಂದು ಹೇಳಿದರು.

ಗೋಣಿಕೊಪ್ಪದಲ್ಲಿ ಇತ್ತೀಚೆಗೆ ಒಬ್ಬ ಪೌರಕಾರ್ಮಿಕರು ಮೃತಪಟ್ಟಿದ್ದು, ಇವರ ಕುಟುಂಬಕ್ಕೆ ಯಾವುದೇ ರೀತಿಯ ಸೌಲಭ್ಯ ಕಲ್ಪಿಸಿಲ್ಲ. ಜೊತೆಗೆ ಮನೆ ಖಾಲಿ ಮಾಡಿ ಎಂದು ಒತ್ತಾಯಿಸುತ್ತಿದ್ದಾರೆ. ಈ ಸಂಬಂಧ ಅಧಿಕಾರಿಗಳು ಪೌರಕಾರ್ಮಿಕರ ಭದ್ರತೆಗೆ ಮುಂದಾಗಬೇಕು ಎಂದು ಡಿ.ಆರ್.ರಾಜು ಕೋರಿದರು.

ಜಿಲ್ಲೆಯ ಬಸ್ ನಿಲ್ದಾಣ ಹಾಗೂ ಇತರೆ ಕಡೆಗಳಲ್ಲಿ ಶೌಚಾಲಯ ನಿರ್ವಹಣೆ ಸಂಬಂಧ ಪೌರಕಾರ್ಮಿಕರಿಗೆ ಅವಕಾಶ ಮಾಡಬೇಕು. ಪೌರಕಾರ್ಮಿಕರಿಗೆ ಕಾಲ ಕಾಲಕ್ಕೆ ಆರೋಗ್ಯ ಶಿಬಿರಗಳನ್ನು ಏರ್ಪಡಿಸಬೇಕು. ೭೦೦ ಜನಸಂಖ್ಯೆಗೆ ಒಬ್ಬ ಪೌರಕಾರ್ಮಿಕರನ್ನು ನಿಯೋಜಿಸಬೇಕಿದ್ದು, ಆ ನಿಟ್ಟಿನಲ್ಲಿ ಪೌರಕಾರ್ಮಿಕರ ನೇಮಕಾತಿ ನಡೆಯಬೇಕು ಎಂದು ಡಿ.ಆರ್.ರಾಜು ಸಲಹೆ ಮಾಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ವಿರಾಜಪೇಟೆ ಪುರಸಭೆ ಮುಖ್ಯಾಧಿಕಾರಿ ನಾಚಪ್ಪ, ವಿರಾಜಪೇಟೆಯಲ್ಲಿ ೧೫ ಮಂದಿ ಖಾಯಂ ಪೌರಕಾರ್ಮಿಕರು ಕರ್ತವ್ಯ ನಿರ್ವಹಿಸುತ್ತಿದ್ದಾರೆ ಎಂದರು.

ಡಿ.ಆರ್.ರಾಜು ಮಾತನಾಡಿ, ಪೌರಕಾರ್ಮಿಕರನ್ನು ಗುತ್ತಿಗೆ ಆಧಾರದಲ್ಲಿ ನೇಮಕಾತಿ ಮಾಡಿಕೊಳ್ಳುವಂತಿಲ್ಲ. ಪೌರಕಾರ್ಮಿಕರಿಗೆ ಸ್ಥಳೀಯ ಸಂಸ್ಥೆಗಳಿಂದ ನೇರವಾಗಿ ವೇತನ ಪಾವತಿಸುವಂತಾಗಬೇಕು ಎಂದರು.

ಮತ್ತೊಬ್ಬ ಸದಸ್ಯರಾದ ವಿಜಯಕುಮಾರ್ ಮಾತನಾಡಿ, ಪೌರಕಾರ್ಮಿಕರು ಬಾಡಿಗೆ ಮನೆಯಲ್ಲಿ ವಾಸ ಮಾಡಿಕೊಂಡು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಇವರಿಗೆ ನೀಡುವ ಕನಿಷ್ಠ ವೇತನ ಸಾಲುತ್ತಿಲ್ಲ. ಈ ಬಗ್ಗೆ ಸಂಬಂಧಪಟ್ಟವರು ಗಮನಹರಿಸಬೇಕು ಎಂದು ಅವರು ಕೋರಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್, ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕ ಶೇಖರ್, ಸಮಿತಿ ಸದಸ್ಯರಾದ ರೂಪಾ, ತೇಜಾವತಿ, ರಾಜೇಶ್ವರಿ, ನಗರಾಭಿವೃದ್ಧಿ ಯೋಜನಾ ಶಾಖೆಯ ಯೋಜನಾ ನಿರ್ದೇಶಕ ಬಿ.ಬಸಪ್ಪ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಸತೀಶ್ ಕುಮಾರ್, ಪುರಸಭೆ ಮುಖ್ಯಾಧಿಕಾರಿಗಳಾದ ಕೃಷ್ಣಪ್ರಸಾದ್, ನಾಚಪ್ಪ, ಗಿರೀಶ್, ಗೋಪಿ, ತಾ.ಪಂ.ಇಒಗಳಾದ ಪರಮೇಶ್, ಅಪ್ಪಣ್ಣ, ತಹಶೀಲ್ದಾರ್ ಕಿರಣ್ ಗೌರಯ್ಯ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net