

ಕಕ್ಕೇರಿ: ರೈತ ಸಮೂಹ ಸಹಕಾರಿ ಸಂಘಗಳ ಮೇಲೆ ವಿಶ್ವಾಸವಿಟ್ಟು ವ್ಯವಹರಿಸಿದರೆ ಸಹಕಾರಿ ಸಂಘಗಳು ರೈತರಿಗೆ ಅಗತ್ಯ ಸಹಕಾರಿ ಸೇವೆ ಒದಗಿಸಲು ಬದ್ಧವಾಗಿವೆ ಎಂದು ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ಅರವಿಂದ ಪಾಟೀಲ ಹೇಳಿದರು.
ಸಮೀಪದ ಲಿಂಗನಮಠ ಗ್ರಾಮದ ಪಿಕೆಪಿಎಸ್ ಆರ್ಥಿಕ ನೆರವು ಹಾಗೂ ಬಿಡಿಸಿಸಿ ಬ್ಯಾಂಕ್ ಸಹಕಾರದಿಂದ ರೈತ ಪಾಂಡುರಂಗ ಬಸರಿಕಟ್ಟಿ ಅವರಿಗೆ ಶುಕ್ರವಾರ ಟ್ರ್ಯಾಕ್ಟರ್ ಹಸ್ತಾಂತರಿಸಿ ಮಾತನಾಡಿದರು.
ಇತ್ತೀಚಿನ ದಿನಗಳಲ್ಲಿ ಕೂಲಿ ಕಾರ್ಮಿಕರು ಹಾಗೂ ಜಾನುವಾರುಗಳ ಕೊರತೆಯಿಂದ ಕೃಷಿ ಚಟುವಟಿಕೆ ನಿರ್ವಹಣೆ ರೈತರಿಗೆ ಸಮಸ್ಯೆಯಾಗುತ್ತದೆ. ಹೀಗಾಗಿ, ಸಕಾಲಕ್ಕೆ ಕೆಲಸ ನಿರ್ವಹಿಸಿಕೊಳ್ಳಲು ಯಂತ್ರೋಪಕರಣ ಅಗತ್ಯವಾಗಿವೆ. ರೈತರು ಸಹಕಾರಿ ಸಂಘಗಳ ಸೌಲಭ್ಯ ಸದುಪಯೋಗ ಪಡಿಸಿಕೊಳ್ಳಬೇಕು ಎಂದು ತಿಳಿಸಿದರು.
ಪಿಕೆಪಿಎಸ್ ಅಧ್ಯಕ್ಷ ಶ್ರೀಶೈಲ ಮಾಟೊಳ್ಳಿ, ಉಪಾಧ್ಯಕ್ಷ ದಶರಥ ಪಾಟೀಲ, ಗ್ರಾಪಂ ಅಧ್ಯಕ್ಷ ಕಾಶೀಮ್ ಹಟ್ಟಿಹೊಳಿ, ನಿರ್ದೇಶಕರಾದ ಪಾಂಡುರಂಗ ಮಿಟಗಾರ, ಪ್ರಕಾಶ ಬಿಜಾಪುರ, ಮೈಕಲ್ ರ್ನಾಂಡಿಸ್, ಅಶೋಕ ಕಾಕತಕರ, ಕಲ್ಲಪ್ಪ ಸಂಗೊಳ್ಳಿ, ಸಂಗಮೇಶ ಪಾಟೀಲ, ಸುರೇಖಾ ಅಂಬಡಗಟ್ಟಿ, ಸರೋಜಾ ಬಾಗೇವಾಡಿ, ರೇಖಾ ಮಿಟಗಾರ, ಕಾರ್ಯದರ್ಶಿ ಶೋಭಾ ಬೆಳಗಾವಿ ಇತರರಿದ್ದರು.