

ಶ್ರೀರಂಗಪಟ್ಟಣ: ಮೈಸೂರು ಜಿಲ್ಲಾ ಹಾಲು ಒಕ್ಕೂಟದಂತಹ ಬೃಹತ್ ಸಹಕಾರ ಸಂಸ್ಥೆಗೆ ಅಧ್ಯಕ್ಷನಾಗಿರುವ ನಾನು ನನ್ನ ಆಡಳಿತಾವಧಿಯಲ್ಲಿ ಪ್ರಾಮಾಣಿಕವಾಗಿ ಹಾಲು ಉತ್ಪಾದಕರ ಹಿತ ಕಾಯಲು ಶ್ರಮಿಸುವೆ ಎಂದು ಮೈಮುಲ್ ಅಧ್ಯಕ್ಷ ಆರ್.ಚೆಲುವರಾಜು ತಿಳಿಸಿದರು.
ಪಟ್ಟಣದ ಓಂ ಶ್ರೀನಿಕೇತನ ಟ್ರಸ್ಟ್ ಶಾಲಾ ಆವರಣದಲ್ಲಿ ಭಾನುವಾರ ಓಂ ಶ್ರೀನಿಕೇತನ ಟ್ರಸ್ಟ್ ಹಾಗೂ ಉದ್ಯೋಗದಾತ ಫೌಂಡೇಷನ್ ಸಹಯೋಗದಲ್ಲಿ ಆಯೋಜಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು. ಮೈಮುಲ್ ಹಾಲು ಉತ್ಪಾದಕರಿಂದ ನಿತ್ಯ 9 ಲಕ್ಷ ಲೀ. ಹಾಲು ಶೇಖರಿಸುತ್ತಿದ್ದು 4.5 ಲಕ್ಷ ಮಾರಾಟವಾಗುವ ಜತೆಗೆ ಇತರ ಎಲ್ಲ ರೀತಿಯ ಉತ್ಪನ್ನಗಳನ್ನು ತಯಾರಿಸಲಾಗುತ್ತಿದೆ. ಪ್ರಸ್ತುತ ಒಕ್ಕೂಟದ ಎಲ್ಲ ನಿರ್ದೇಶಕರು ತಮ್ಮ ಆಯ್ಕೆಗೆ ಸಹಕರಿದ್ದಾರೆ ಎಂದರು.
ಒಕ್ಕೂಟದ ಅಭಿವೃದ್ದಿ ಸೇರಿದಂತೆ ಉತ್ಪಾದಕರ ಸಮಸ್ಯೆಗಳನ್ನು ಬಗೆಹರಿಸುವ ಜತೆಗೆ ರೈತಾಪಿ ಜನರನ್ನು ಆರ್ಥಿಕವಾಗಿ ಸದೃಢಗೊಳಿಸಲು ಹಲವು ಯೋಜನೆ ರೂಪಿಸಲಾಗುವುದು. ಆ ಮೂಲಕ ನಂದಿನಿ ಹಾಲಿನ ಶ್ರೇಷ್ಠತೆಯನ್ನು ಯಶಸ್ಸಿನ ಹಾದಿಯತ್ತ ಕೊಂಡೊಯ್ಯಲಾಗುವುದು ಎಂದರು.
ಇದಕ್ಕೂ ಮೊದಲು ಕಾರ್ಯಕ್ರಮ ಉದ್ಘಾಟಿಸಿದ ರೈತ ಸಂಘದ ಜಿಲ್ಲಾಧ್ಯಕ್ಷ ಕೆಂಪುಗೌಡ ಮಾತನಾಡಿ, ಕಿರಿಯ ವಯಸ್ಸಿನಲ್ಲೇ ಮೈಮುಲ್ ಅಧ್ಯಕ್ಷರಾಗಿರುವ ವೆಲುವರಾಜು ಅವರಿಗೆ ರೈತರ ಬದುಕಿನ ಅರಿವಿದ್ದು, ಆರ್ಥಿಕ ಸದೃಢತೆಗೆ ಸಹಕಾರ ನೀಡಲಿ ಎಂದು ಸಲಹೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಹಿರಿಯ ವಕೀಲ ಡಾ.ಎಂ.ಪುಟ್ಟೇಗೌಡ ಮಾತನಾಡಿದರು. ಪಿಎಸ್‌ಎಸ್‌ಕೆ ಮಾಜಿ ನಿರ್ದೇಶಕ ಪಾಂಡು, ರೈತ ಮುಖಂಡರಾದ ಮಾಯಪ್ಪ, ಡಿ.ಎಂ.ರವಿ, ವಿಕ್ರಾಂತ್ ಟೈಯರ್ಸ್ ಕಂಪನಿ ನೌಕರರ ಮಾಜಿ ಮುಖಂಡ ಲೋಕೇಶ್, ಬಿಜೆಪಿ ಮುಖಂಡ ಮಹೇಶ್, ಉದ್ಯೋಗದಾತ ಫೌಂಡೇಷನ್ ಸ್ಥಾಪಕ ರುಕ್ಮಾಂಗದ, ಕೂಡಲಕುಪ್ಪೆ ಗೋಪಾಲಗೌಡ, ಮರಳಗಾಲ ಕೃಷ್ಣೇಗೌಡ, ನೆಲಮನೆ ನಾರಾಯಣಗೌಡ, ಸೋಮಶೇಖರ್ ಇತರರು ಉಪಸ್ಥಿತರಿದ್ದರು.