

ವಿಜಯಪುರ: ಗ್ರಾಮ ಪಂಚಾಯಿತಿಗಳು ಮತ್ತು ಗ್ರಾಪಂ ಜನಪ್ರತಿನಿಧಿಗಳ ಹಿತ ಕಾಪಾಡಲು ಸದಾ ಬದ್ಧನಾಗಿದ್ದೇನೆ ಎಂದು ವಿಧಾನ ಪರಿಷತ್ ಸದಸ್ಯ ಸುನೀಲಗೌಡ ಪಾಟೀಲ ಹೇಳಿದರು.
ಬಬಲೇಶ್ವರ ತಾಲೂಕಿನ ಯಕ್ಕುಂಡಿ ಗ್ರಾಮದಲ್ಲಿ ನರೇಗಾ ಯೋಜನೆಯಡಿ ನಿರ್ಮಾಣಗೊಂಡ ಅಂಗನವಾಡಿ ನೂತನ ಕಟ್ಟಡ ಮತ್ತು ಅರ್ಜುಣಗಿ ಗ್ರಾಮದಲ್ಲಿ ಎನ್‌ಆರ್‌ಎಲ್‌ಎಂ ಕಟ್ಟಡ, ಘನತ್ಯಾಜ್ಯ ಘಟಕ ಹಾಗೂ ಗೋದಾಮು ಕಟ್ಟಡ ಉದ್ಘಾಟಿಸಿ ಅವರು ಮಾತನಾಡಿದರು.
ಜಲ ಜೀವನ ಮಿಷನ್ ಯೋಜನೆ (ಜೆಜೆಎಂ) ಜಾರಿ ಸಂದರ್ಭದಲ್ಲಿ ಸರ್ಕಾರ ಫಲಾನುಭವಿಗಳಿಂದ ವಂತಿಗೆ ಮತ್ತು ಗ್ರಾಮ ಪಂಚಾಯಿತಿಯಲ್ಲಿ 15ನೇ ಹಣಕಾಸು ಯೋಜನೆಯಡಿ ಮೀಸಲು ಹಣದಲ್ಲಿ ಶೇಕಡಾವಾರು ನಿಗದಿ ಮಾಡಿ ಹಣ ಪಡೆಯುವಂತೆ ಸರ್ಕಾರ ಆದೇಶ ನೀಡಿತ್ತು. ಆದರೆ, ಉತ್ತರ ಪ್ರದೇಶದಲ್ಲಿ ಜೆಜೆಎಂ ಯೋಜನೆಗೆ ಸಂಪೂರ್ಣ ಹಣವನ್ನು ಅಲ್ಲಿನ ರಾಜ್ಯ ಸರ್ಕಾರವೇ ಭರಿಸಿತ್ತು. ಈ ವಿಚಾರವನ್ನು ಪ್ರಸ್ತಾಪಿಸಿ ನಾನು ಈ ಹಿಂದೆ ಸರ್ಕಾರವನ್ನು ಒತ್ತಾಯಿಸಿ ಮನವಿ ಪತ್ರ ಸಲ್ಲಿಸಿದ್ದೆ. ಇದಕ್ಕೆ ಸ್ಪಂದಿಸಿದ ರಾಜ್ಯ ಸರ್ಕಾರ ರಾಜ್ಯಾದ್ಯಂತ ಈ ಯೋಜನೆಯ ಸಂಪೂರ್ಣ ಹಣವನ್ನು ಭರಿಸಿತು. ಈ ವಿಷಯ ಬಹುತೇಕರಿಗೆ ಗೊತ್ತಿಲ್ಲ ಎಂದು ಅವರು ತಿಳಿಸಿದರು.
ಗ್ರಾಪಂಗಳಿಗೆ ನೀಡಲಾದ ಹಣವನ್ನು ಸಂಪೂರ್ಣವಾಗಿ ಆಯಾ ಗ್ರಾಮಗಳ ಅಭಿವೃದ್ಧಿಗೆ ಮಾತ್ರ ಬಳಸಬೇಕು. ಸರ್ಕಾರದ ಇತರ ಯೋಜನೆಗಳಿಗೆ ಈ ಹಣವನ್ನು ಹಂಚಿಕೆ ಮಾಡಬಾರದು. ಇದರಿಂದ ಗ್ರಾಮಗಳಲ್ಲಿ ಅಭಿವೃದ್ಧಿ ಕುಂಠಿತವಾಗುತ್ತದೆ. ಗ್ರಾಮ ಪಂಚಾಯಿತಿಗಳು ಇತರ ಗ್ರಾಪಂಗಳಿಗೆ ಮಾದರಿಯಾಗುವಂತೆ ಯೋಜನೆ ರೂಪಿಸಬೇಕು. ಈ ಯೋಜನೆಗಳಿಂದ ಹಣ ಉಳಿತಾಯವಾಗಿ ಆ ಹಣವನ್ನು ಬೇರೆ ಅಭಿವೃದ್ಧಿ ಕಾಮಗಾರಿಗಳಿಗೆ ಬಳಸುವಂತಾಗಬೇಕು ಎಂದು ಹೇಳಿದ ಅವರು, ಬಿಜ್ಜರಗಿ ಗ್ರಾಪಂ ಮಾದರಿ ಕೆಲಸವನ್ನು ಉದಾಹರಣೆಯಾಗಿ ನೀಡಿದರು.
ಇಡೀ ಬಿಜ್ಜರಗಿ ಗ್ರಾಮದಲ್ಲಿ ಸೋಲಾರ್ ಫಲಕಗಳನ್ನು ಅಳವಡಿಸಿ ಗ್ರಾಪಂ ಕಟ್ಟಡ ಮತ್ತು ಗ್ರಾಮದಲ್ಲಿ ರಸ್ತೆ ಬದಿ ದೀಪಗಳಿಗೆ ವಿದ್ಯುತ್ ಬಳಸಲಾಗುತ್ತಿದೆ. ಇದರಿಂದ ಪ್ರತಿ ತಿಂಗಳು ಸುಮಾರು ರೂ. 10 ರಿಂದ 15 ಸಾವಿರ ವಿದ್ಯುತ್ ಬಿಲ್ ಉಳಿತಾಯವಾಗುತ್ತಿದೆ. ಈ ಹಣವನ್ನು ರಸ್ತೆ, ಚರಂಡಿ ಸೇರಿದಂತೆ ನಾನಾ ಅಭಿವೃದ್ಧಿ ಕಾರ್ಯಗಳಿಗೆ ಬಳಸಬಹುದಾಗಿದೆ. ಇದೇ ಮಾದರಿಯಲ್ಲಿ ಇತರ ಗ್ರಾಮ ಪಂಚಾಯಿತಿಗಳು ಇತರರಿಗೆ ಮಾದರಿಯಾಗುವಂತೆ ಯೋಜನೆಗಳನ್ನು ರೂಪಿಸಿ ಗ್ರಾಮೀಣಾಭಿವೃದ್ಧಿಗೆ ಕಾಮಗಾರಿಗಳನ್ನು ಕೈಗೊಳ್ಳಬೇಕು ಎಂದು ವಿಧಾನ ಪರಿಷತ್ ಸದಸ್ಯರು ಹೇಳಿದರು.
ಹೆಬ್ಬಾಳಟ್ಟಿ ಶ್ರೀ ಚಂದ್ರಗಿರಿ ಸದಾಶಿವಮಠದ ಶ್ರೀ ಸಿದ್ದಲಿಂಗಯ್ಯ ಮಹಾಸ್ವಾಮಿಗಳು, ನರೇಗಾ ಎಡಿ ಭಾರತಿ ಹಿರೇಮಠ, ಗ್ರಾಪಂ ಅಧ್ಯಕ್ಷೆ ಲಕ್ಕವ್ವ ಕಾಂಬಳೆ, ಚನ್ನಪ್ಪ ಕೊಪ್ಪದ, ಅಶೋಕ ಕಾಖಂಡಕಿ, ರಮೇಶ ದೇಸಾಯಿ, ಮಲ್ಲಪ್ಪ ಕೆಂಪವಾಡ, ಮುದಕನಗೌಡ ಪಾಟೀಲ, ರಫೀಕ ಸೋನಾರ, ಪಿಡಿಒ ಬಿ.ಎಚ್. ಮುಜಾವರ ಮತ್ತಿತರರಿದ್ದರು.