ಕಾಫಿ ಬೆಳೆಗಾರರ ಹಿತ ಕಾಯಲು ಬದ್ಧ

ಕಾಫಿ ಬೆಳೆಗಾರರ ಹಿತ ಕಾಯಲು ಬದ್ಧ
Published on

ಸಕಲೇಶಪುರ: ಕಾಫಿ ಬೆಳೆಗಾರರ ಹಿತಕಾಯಲು ಸದಾ ಬದ್ಧನಾಗಿದ್ದೇನೆ ಎಂದು ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಹೇಳಿದರು.

ಭಾನುವಾರ ಶಿರಾಡಿಘಾಟ್‌ನ ದೊಡ್ಡತಪ್ಪಲೆ ಗ್ರಾಮ ಸಮೀಪ ಭೂಕುಸಿತಗೊಂಡಿರುವ ಪ್ರದೇಶಕ್ಕೆ ಭೇಟಿ ನೀಡಿದ ನಂತರ ಹಾನಿಗೊಂಡಿರುವ ಕಾಫಿ ತೋಟಗಳನ್ನು ಪರಿಶೀಲನೆ ನಡೆಸಿ ಹಾಸನ ಬೆಳೆಗಾರರ ಸಂಘದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದರು.

ಒಂದು ತಿಂಗಳ ನಿರಂತರ ಮಳೆ ಹಾಗೂ ಗಾಳಿಯಿಂದ ಕಾಫಿ, ಮೆಣಸಿನ ಬೆಳೆ ಸಾಕಷ್ಟು ಹಾನಿಗೊಂಡಿದೆ. ಈ ಬಗ್ಗೆ ಸದನದಲ್ಲಿ ಪ್ರಸ್ತಾಪಿಸುವ ಮೂಲಕ ಬೆಳೆಗಾರರ ನೆರವಿಗೆ ಧಾವಿಸುವಂತೆ ಸರ್ಕಾರವನ್ನು ಒತ್ತಾಯಿಸಲಾಗುವುದು. ಕಳೆದ ಬಿಜೆಪಿ ಸರ್ಕಾರದಲ್ಲಿ ಕಂದಾಯ ಮಂತ್ರಿಯಾಗಿದ್ದ ವೇಳೆ ಬೆಳೆಗಾರರಿಗೆ ಅಂಟಿದ್ದ ಭೂಗಳ್ಳರ ಪಟ್ಟವನ್ನು ತೆಗೆದಿದ್ದು ನಾನು, ನಮ್ಮ ಸರ್ಕಾರದ ವೇಳೆ ಒತ್ತುವರಿ ಜಮೀನು ಗುತ್ತಿಗೆ ನೀಡುವ ಸಂಬಂಧ ಆರಂಭಿಸಿದ್ದ ಪ್ರಕ್ರಿಯೆ ಅಂತಿಮ ಹಂತದಲ್ಲಿದ್ದು, ಕೃಷಿ ಮಂತ್ರಿಯೊಂದಿಗೆ ಈ ಸಂಬಂಧ ಚರ್ಚಿಸಿ ಶೀಘ್ರವೇ ಜಾರಿಗೊಳಿಸುವಂತೆ ಒತ್ತಾಯಿಸಲಾಗುವುದು ಎಂದರು.

ಫಸಲ್ ಬಿಮಾ ಯೋಜನೆಗೆ ಅರ್ಜಿ ಸಲ್ಲಿಸಲು ಅವಧಿ ವಿಸ್ತರಿಸುವಂತೆ ಸರ್ಕಾರಕ್ಕೆ ಒತ್ತಡ ಹೇರಲಾಗುವುದು. ಕಾಡಾನೆ ಸಮಸ್ಯೆ ನಿಯಂತ್ರಿಸಲು ರೈಲ್ವೆ ಬ್ಯಾರಿಕೇಡ್ ತಡೆಗೋಡೆ ನಿರ್ಮಾಣಕ್ಕೆ ಹೆಚ್ಚಿನ ಒತ್ತು ನೀಡಲಾಗುವುದು ಎಂದರು.

ಚತುಷ್ಪಥ ರಸ್ತೆ ನಿರ್ಮಾಣ ವಿಳಂಬವಾಗಿದ್ದು, ಕಾರಣ ಕೇಳಿ ನೋಟಿಸ್ ನೀಡುವಂತೆ ಜಿಲ್ಲಾಧಿಕಾರಿಗೆ ಸೂಚಿಸಲಾಗುವುದು. ಕಡಿದಾಗಿ ಬೆಟ್ಟಗಳನ್ನು ಕಡಿದಿರುವುದು ಭೂಕುಸಿತಕ್ಕೆ ಕಾರಣವಾಗಿದೆ. ಚತುಷ್ಪಥ ರಸ್ತೆ ಸಮಸ್ಯೆ ಬಗ್ಗೆ ಕೇಂದ್ರ ಸರ್ಕಾರಕ್ಕೆ ಪತ್ರಬರೆಯಲಾಗುವುದು ಎಂದರು.

ಶಾಸಕ ಸಿಮೆಂಟ್ ಮಂಜು ಮಾತನಾಡಿ, ತಾಲೂಕಿನಲ್ಲಿ ಕಾಡಾನೆ ಸಮಸ್ಯೆಯಿಂದ ಭತ್ತದ ಬೆಳೆ ಬೆಳೆಯಲಾಗದೆ ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಕೇರಳ ಮಾದರಿಯಲ್ಲಿ ಭತ್ತ ಬೆಳೆಯುವವರಿಗೆ ಪರಿಹಾರ ನೀಡುವಂತೆ ಸರ್ಕಾರವನ್ನು ಒತ್ತಾಯಿಸಬೇಕು ಹಾಗೂ ಆನೆಧಾಮ ಸ್ಥಾಪಿಸುವ ಮೂಲಕ ಸಮಸ್ಯೆ ಬಗೆಹರಿಸಬೇಕು ಎಂದು ಸದನದಲ್ಲಿ ಮಾತನಾಡುವಂತೆ ವಿರೋಧ ಪಕ್ಷದ ನಾಯಕರನ್ನು ಮನವಿ ಮಾಡಿದರು.

ಬೇಲೂರು ಶಾಸಕ ಸುರೇಶ್ ಮಾತನಾಡಿ, ಒಂದು ಕಾಲದ ಶ್ರೀಮಂತ ಕಾಫಿ ಬೆಳೆಗಾರ ಇಂದು ವಿವಿಧ ಸಮಸ್ಯೆಗಳಿಗೆ ಸಿಲುಕಿ ಯಾರಿಗೂ ಬೇಡದ ವ್ಯಕ್ತಿಯಾಗಿದ್ದಾರೆ. ಗೌರವಯುತ ಜೀವನ ನಡೆಸುವುದು ದುಸ್ತರವಾಗಿದೆ. ಕಾಫಿ ಬೆಳೆಗಾರರನ್ನು ಕಾಡುತ್ತಿರುವ ಸಮಸ್ಯೆಗಳ ಬಗ್ಗೆ ಸದನದಲ್ಲಿ ಸಮಗ್ರವಾಗಿ ಚರ್ಚಿಸಿ ಪರಿಹಾರ ಕಂಡು ಹಿಡಿಯಬೇಕು ಎಂದು ಒತ್ತಾಯಿಸಿದರು.

ಜಿಲ್ಲಾಧಿಕಾರಿ ಸತ್ಯಭಾಮಾ, ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಮಹಮ್ಮದ್ ಸುಜೀತಾ, ಉಪವಿಭಾಗಾಧಿಕಾರಿ ಡಾ.ಎಂ.ಕೆ. ಶ್ರುತಿ, ತಹಸೀಲ್ದಾರ್ ಮೇಘನಾ, ತಾಲೂಕು ಬಿಜೆಪಿ ಅಧ್ಯಕ್ಷ ವಳಲಹಳ್ಳಿ ಅಶ್ವಥ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net