

ಕಿಕ್ಕೇರಿ ; ಹೋಬಳಿಯ ಕೋಡಿಮಾರನಹಳ್ಳಿ ಗ್ರಾಮದ ಚೈತನ್ಯ ಆಲಯದಲ್ಲಿ ಯೇಸು ಹುಟ್ಟಿದ ಪವಿತ್ರ ದಿನವಾದ ಕ್ರಿಸ್‌ಮಸ್ ಹಬ್ಬವನ್ನು ಸಂಭ್ರಮದಿಂದ ಬುಧವಾರ ಆಚರಿಸಲಾಯಿತು.
ಪ್ರಾರ್ಥನೆ, ಯೇಸು ಕುರಿತು ಉಪನ್ಯಾಸ ಮಾಡುವ ಮೂಲಕ ಹಬ್ಬವನ್ನು ಅರ್ಥಪೂರ್ಣವಾಗಿಸಲಾಯಿತು. ಉಪವಾಸ ವ್ರತಾಚರಣೆ ನಡೆಸಿ ಯೇಸು ಕ್ರಿಸ್ತನನ್ನು ಸ್ಮರಿಸಲಾಯಿತು. ಆಲಯದ ಮುಂದೆ ಯೇಸು ಹುಟ್ಟಿದ ಕೊಟ್ಟಿಗೆಯ ಆಕೃತಿ, ದೇವ ಕನ್ನಿಕೆಯರು, ನಕ್ಷತ್ರ, ಸಂತಾಕ್ಲಾಸ್, ಕ್ರಿಸ್‌ಮಸ್ ಟ್ರಿ, ಕುರಿಯ ಗೊಂಬೆಗಳಿಂದ ಸಿಂಗರಿಸಲಾಗಿತ್ತು.
ಧರ್ಮಗುರು ಫಾದರ್ ಅಜೇಶ್ ಮಾತನಾಡಿ, ಯೇಸು ಅಹಿಂಸೆಯ ಧ್ಯೋತಕವಾಗಿದ್ದು, ಅಹಿಂಸೆಯ ಮಂತ್ರವನ್ನು ಜಗತ್ತಿಗೆ ಸಾರಿದರು. ಜಾತಿ ಸಂಘರ್ಷ ಬಿಟ್ಟು ಮಾನವರಾಗಿ ಬದುಕುವುದನ್ನು ಕಲಿಯಬೇಕಿದೆ. ಹುಟ್ಟು ಸಾವಿನ ನಡುವೆ ಪ್ರೀತಿಯೊಂದೇ ಶ್ರೇಷ್ಠವಾಗಿದೆ. ಮಾನವೀಯ ಮೌಲ್ಯ ಉಳಿಸಿಕೊಂಡು ಬದುಕಲು ಮುಂದಾಗಬೇಕಿದೆ. ಪ್ರಕೃತಿ ಮುನಿದರೆ ಎಲ್ಲವೂ ನಾಶವಾಗಲಿದ್ದು ಪ್ರಕೃತಿಯನ್ನು ಪ್ರೀತಿಸಿ ಉಳಿಸುವ ಕೆಲಸವಾಗಬೇಕಿದೆ ಎಂದು ತಿಳಿಸಿದರು.
ಹೋಬಳಿಯಾದ್ಯಂತ ಹಿರಿಯರು, ಮಕ್ಕಳು ಚರ್ಚ್‌ಗಳಿಗೆ ಭೇಟಿ ನೀಡಿ ಬಾಲ ಯೇಸು, ಯೇಸು ಶಿಲುಬೆಗೆ ನಮಿಸಿದರು. ಧರ್ಮಗುರು ಬಂದಿದ್ದ ಸಾರ್ವಜನಿಕರಿಗೆ ಕೇಕ್, ಕಡಲೆಪುರಿ, ಸಿಹಿ ತಿಂಡಿ ವಿತರಿಸಿ ಶುಭಾಶಯ ಕೋರಿದರು. ಲಕ್ಷ್ಮೀಪುರ ಬಳಿಯ ಚರ್ಚ್‌ಗಳಲ್ಲೂ ಯೇಸುವನ್ನು ಪ್ರಾರ್ಥಿಸಲಾಯಿತು. ವಿಜಯ ಮೇರಿ, ಜಾಸ್ಮಿನ್ ಮತ್ತಿತರರಿದ್ದರು.