

ಎನ್.ಆರ್.ಪುರ: ಪಟ್ಟಣಕ್ಕೆ ಮುತ್ತಿಕೊಪ್ಪ ಸಮೀಪದ ತುಂಗಾ ನದಿಯಿಂದ ಬಹುಗ್ರಾಮ ಕುಡಿಯುವ ನೀರಿನ ಯೋಜನೆಯಡಿ 24 ಕೋಟಿ ರೂ.ವೆಚ್ಚದ ಶಾಶ್ವತ ಕುಡಿಯುವ ನೀರಿನ ಯೋಜನೆಗೆ ಡಿಪಿಆರ್ ಸಲ್ಲಿಸಿದ್ದು, ಮಂಜೂರಾತಿ ಹಂತದಲ್ಲಿದೆ ಎಂದು ಶಾಸಕ ಟಿ.ಡಿ.ರಾಜೇಗೌಡ ಹೇಳಿದರು.
ಪಟ್ಟಣ ಪಂಚಾಯಿತಿ ಆವರಣದಲ್ಲಿ ಮೂರು ಕೋಟಿ 3 ರೂ.ಗೂ ಅಧಿಕ ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶೀಲಾನ್ಯಾಸ ನೇರವೇರಿಸಿ ಮಾತನಾಡಿ, ಮುಖ್ಯ ಮಂತ್ರಿಗಳ ವಿಶೇಷ ಅನುದಾನದಲ್ಲಿ ಬಂದ 25 ಕೋಟಿ ರೂಗಳಲ್ಲಿ ಪಟ್ಟಣದ ಅಭಿವೃದ್ಧಿಗೆ 1.60 ಕೋಟಿ ರೂ. ಅನುದಾನ ನೀಡಲಾಗಿದೆ. 15ನೇ ಹಣಕಾಸು ಯೋಜನೆಯಡಿ 40 ಲಕ್ಷ ರೂ. ಅನುದಾನ ಬಂದಿದೆ ಎಂದರು.
ಸುಂಕದಕಟ್ಟೆಯಿಂದ ಪಪಂಯವರೆಗೆ ಹಾಗೂ ಬಸ್‌ನಿಲ್ದಾಣದಿಂದ ಪ್ರವಾಸಿ ಮಂದಿರದವರೆಗೆ ಪರಿಹಾರ ನೀಡಿ ರಸ್ತೆ ವಿಸ್ತರಣೆ ಮಾಡಲು ಪ್ರವಾಸೋದ್ಯಮ ನಿಗಮದ ಅಧ್ಯಕ್ಷ ಎಂ.ಶ್ರೀನಿವಾಸ್ ಅವರ ಸಹಕಾರ ದಿಂದ 60 ಕೋಟಿ ರೂ. ಅನುದಾನ ಮಂಜೂರಾತಿ ಹಂತದಲ್ಲಿದೆ. ಪಟ್ಟಣದ ನಾಗರಿಕರ ಆಶಯದಂತೆ ಮಿನಿ ವಿಧಾನಸೌಧ ನಿರ್ಮಿಸುವ ಪ್ರಕ್ರಿಯೆಗೆ ಚಾಲನೆ ನೀಡಲಾಗಿದೆ. ಆಶ್ರಯ ಯೋಜನೆ ಬಡಾವಣೆ ನಿರ್ಮಾಣಕ್ಕೆ 3.71. ಕೋಟಿ ರೂ.ಅನುದಾನ ಬಿಡುಗಡೆಯಾಗಿದೆ. 2 ಕೋಟಿ ರೂ.ವೆಚ್ಚದಲ್ಲಿ ಪಟ್ಟಣದ ಕಸ ವಿಲೇವಾರಿ ಘಟಕದಲ್ಲಿ ಕಾಮಗಾರಿ ಕೈಗೊಳ್ಳಲಾಗುತ್ತಿದೆ. ಕಳೆದ ಬಾರಿಗಿಂತ ಶೇಕಡ 30 ರಷ್ಟುಮಳೆ ಹೆಚ್ಚಾಗಿದ್ದು ಗುಂಡಿ ಮುಚ್ಚುವ ಕಾಮಗಾರಿ ಆರಂಭವಾಗಿದೆ. ಡಿಸೆಂಬರ್ ಅಂತ್ಯದೊಳಗೆ ಲೋಕೋಪಯೋಗಿ ಇಲಾಖೆಗೆ ಸೇರಿದ ಎಲ್ಲ ರಸ್ತೆಗಳನ್ನು ದುರಸ್ತಿ ಪಡಿಸಲಾಗುವುದು ಎಂದರು.
ಭದ್ರಾ ಅಚ್ಚುಕಟ್ಟು ಪ್ರದೇಶಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಕೆ.ಪಿ.ಅಂಶುಮಂತ್ ಮಾತನಾಡಿ, ಜನಪರ ಕಾರ್ಯಕ್ರಮಗಳ ಮೂಲಕ ಬಡವರ ಬದುಕನ್ನು ರೂಪಿಸಬೇಕು. ನಿವೇಶನ ರಹಿತರಿಗೆ ನಿವೇಶನ ನೀಡುವ ಕೆಲಸ ಮಾಡಬೇಕು.ಹಕ್ಕು ಪತ್ರವಿಲ್ಲದ ಮನೆಗಳಿಗೆ ಹಕ್ಕುಪತ್ರ ಕೊಡುವ ಕೆಲಸ ಮಾಡಬೇಕು. ಪಟ್ಟಣ ಪಂಚಾಯಿತಿ ಉಳಿದ ಒಂದು ವರ್ಷದ ಆಡಳಿತ ಅವಧಿಯಲ್ಲಿ ಜನಪರ ಕೆಲಸ ಮಾಡಿ ಜನರ ವಿಶ್ವಾಸಗಳಿಸಲು ಆದ್ಯತೆ ನೀಡಬೇಕು ಎಂದರು.