

ಶಿವಮೊಗ್ಗ: ಹಿಜಾಬ್ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತೆಗೆದುಕೊಳ್ಳುವ ನಿರ್ಧಾರಕ್ಕೆ ತಾವು ಬದ್ಧರಿದ್ದೇವೆ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದರು.
ಶಿವಮೊಗ್ಗ ವಿಮಾನ ನಿಲ್ದಾಣದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಿಜಾಬ್ ನಿಷೇಧ ವಿಚಾರವಾಗಿ ಸಿಎಂ ಅಧಿಕಾರಿಗಳ ಜತೆ ಸಮಾಲೋಚನೆ ನಡೆಸಲಿದ್ದಾರೆ. ಕಾನೂನು ಇಲಾಖೆ ಅಧಿಕಾರಿಗಳು ಕೂಡ ಪರಿಶೀಲಿಸಲಿದ್ದಾರೆ. ಹಾಗಾಗಿ ಅವರು ತೆಗೆದುಕೊಳ್ಳುವ ನಿರ್ಧಾರಕ್ಕೆ ತಾವು ಬದ್ಧರಿದ್ದೇವೆ ಎಂದರು.
ಶಾಲೆಯಲ್ಲಿ ಮಕ್ಕಳು ಸಮಾನವಾಗಿರುಬೇಕು. ಇದು ಸೂಕ್ಷ್ಮ ವಿಷಯವಾಗಿದ್ದು ಅವರವರ ಧರ್ಮದ ಪದ್ಧತಿಗೂ ಮನ್ನಣೆ ನೀಡಬೇಕಿದೆ. ಹಿಜಾಬ್ ಕುರಿತು ಎಸ್‌ಡಿಎಂಸಿ ಅವರು ತೀರ್ಮಾನ ಕೈಗೊಳ್ಳಬಹುದೆಂದು ನ್ಯಾಯಾಲಯ ಆದೇಶಿಸಿತ್ತು ಎಂದು ಹೇಳಿದರು.
ಚುನಾವಣೆ ಸಂದರ್ಭದಲ್ಲಿ ಬಿಜೆಪಿಯವರು ಹಿಜಾಬ್ ನಿಷೇಧ, ಪಠ್ಯಪುಸ್ತಕ ಪರಿಷ್ಕರಣೆ ಕೈ ಹಾಕಿದರು. ಆ ಸಂದರ್ಭದಲ್ಲೇ ಸಿದ್ದರಾಮಯ್ಯ ಅವರು ಹಿಜಾಬ್ ನಿಷೇಧಕ್ಕೆ ವಿರೋಧ ವ್ಯಕ್ತಪಡಿಸಿದ್ದರು. ಆಯಾ ಧರ್ಮದ ಪದ್ಧತಿಗಳ ಪಾಲನೆಗೆ ಅಡ್ಡಿ ಉಂಟು ಮಾಡಬಾರದು ಎಂದಿದ್ದರು. ಈಗ ಕಾರ್ಯಕ್ರಮವೊಂದರಲ್ಲಿ ನಿಷೇಧ ಹಿಂಪಡೆಯುವ ಹೇಳಿಕೆ ನೀಡಿದ್ದಾರೆ. ಬಿಜೆಪಿಯವರು ಇಂತಹ ವಿಷಯಗಳನ್ನು ಮಾತ್ರ ಆಯ್ಕೆ ಮಾಡುತ್ತಾರೆ ಎಂದು ದೂರಿದರು.
ನಮ್ಮ ದೇಶ ಗಲಭೆಯ ಕಾರಣಕ್ಕೆ ಪ್ರಸಿದ್ಧವಾಗಿಲ್ಲ. ವೈವಿಧ್ಯತೆಯ ಕಾರಣಕ್ಕೆ ಮನ್ನಣೆ ಗಳಿಸಿದೆ. ಬಿಜೆಪಿಯವರು ಇಲ್ಲಸಲ್ಲದ ಟೀಕೆ ಮಾಡುವ ಬದಲು ಬರ ಅಧ್ಯಯನ ವರದಿಯನ್ನು ಕೇಂದ್ರಕ್ಕೆ ತಲುಪಿಸಬೇಕು. ಬಿಜೆಪಿಯವರು ಬರ ಅಧ್ಯಯನ ನಡೆಸಿದರು. ಅದರ ವರದಿ ಎಲ್ಲಿದೆ. ಮೊದಲು ಅದನ್ನು ಕೇಂದ್ರಕ್ಕೆ ತಲುಪಿಸಲಿ. ರಾಜ್ಯದಿಂದ ಕೇಂದ್ರಕ್ಕೆ 4 ಲಕ್ಷ ಕೋಟಿ ರೂ. ತೆರಿಗೆ ಪಾವತಿ ಆಗುತ್ತಿದೆ. ಆದರೆ ಕಡಿಮೆ ಪಾಲು ಬರುತ್ತಿದೆ. ಇಂತಹ ವಿಷಯಗಳನ್ನು ಬಿಜೆಪಿ ಪ್ರಸ್ತಾಪಿಸಬೇಕಿದೆ ಎಂದು ಸಲಹೆ ನೀಡಿದರು.
ಮಾಜಿ ಎಂಎಲ್‌ಸಿ ಆರ್.ಪ್ರಸನ್ನಕುಮಾರ್, ಜಿಪಂ ಮಾಜಿ ಅಧ್ಯಕ್ಷ ಕಲಗೋಡು ರತ್ನಾಕರ್, ಪ್ರಮುಖರಾದ ವೈ.ಎಚ್.ನಾಗರಾಜ್, ಎಸ್.ಪಿ.ದಿನೇಶ್, ವಿಜಯಕುಮಾರ್, ಜಿ.ಡಿ.ಮಂಜುನಾಥ ಮತ್ತಿತರರು ಉಪಸ್ಥಿತರಿದ್ದರು.